ಬುಧವಾರ, ಆಗಸ್ಟ್ 4, 2021
21 °C
ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ: ಆತ್ಮವಿಶ್ವಾಸದಿಂದ ಪರೀಕ್ಷೆಗೆ ವಿದ್ಯಾರ್ಥಿಗಳ ಹಾಜರು

ಆತಂಕದ ನಡುವೆ ಪೂರ್ಣಗೊಂಡ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಕೋವಿಡ್–19 ಹರಡುವಿಕೆ ಹಿನ್ನೆಲೆಯಲ್ಲಿ ಪೋಷಕರ ಆತಂಕದ ನಡುವೆಯೇ ಜಿಲ್ಲೆಯಲ್ಲಿ ಗುರುವಾರ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯ ಪರೀಕ್ಷೆ ಯಶಸ್ವಿಯಾಗಿ ನಡೆಯಿತು. ಇದರೊಂದಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಸಂಪೂರ್ಣ ಪೂರ್ಣಗೊಂಡಿತು.

ಪರೀಕ್ಷೆ ಸುಗಮವಾಗಿ ನಡೆಯಲು ಪಣತೊಟ್ಟಿದ್ದ ಜಿಲ್ಲಾಡಳಿತ ಕಳೆದೊಂದು ವಾರದಿಂದ ಸಿದ್ಧತೆ ಕಾರ್ಯ ನಡೆಸಿತ್ತು. ನವನಗರದ ಎಸ್.ಬಿ.ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಬಸವೇಶ್ವರ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆಗಳಿಗೆ ಸ್ವತಃ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋವಿಡ್–19 ಸೋಂಕು ಹರಡದಂತೆ ವಿದ್ಯಾರ್ಥಿಗಳಿಗೆ ಒದಗಿಸಿದ ಸುರಕ್ಷತೆ, ಮಾಸ್ಕ್ ಧರಿಸಿರುವುದು ಹಾಗೂ ಸುರಕ್ಷಿತ ಅಂತರ ಕಾಯ್ದುಕೊಂಡ ಬಗ್ಗೆ, ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲೌಸ್ ಧರಿಸಿರುವುದನ್ನು ಪರಿಶೀಲಿಸಿದರು. ಸುರಕ್ಷಿತವಾಗಿ ಪರೀಕ್ಷೆ ನಡೆದಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಒಟ್ಟು 37 ಪರೀಕ್ಷಾ ಕೇಂದ್ರಗಳಲ್ಲಿ 21,109 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಈ ಪೈಕಿ 20,413 ಮಂದಿ ಹಾಜರಾಗಿ 696 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಬೇರೆ ಜಿಲ್ಲೆಗಳ 734 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿದ್ದು, ಈ ಪೈಕಿ 732 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಗಳು ಡಿಬಾರ್ ಆಗದಿರುವುದು ವಿಶೇಷ.

ಖುಷಿಯಿಂದ ಬಂದ ವಿದ್ಯಾರ್ಥಿಗಳು

ಕೋವಿಡ್–19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಂಗ್ಲಿಷ್ ವಿಷಯ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಅದರ ಸಿದ್ಧತೆಗೆ  ಮೂರು ತಿಂಗಳು ಕಾಲ ಕಾಲಾವಕಾಶ ದೊರೆಕಿದ್ದ ಕಾರಣ ವಿದ್ಯಾರ್ಥಿಗಳು ಖುಷಿಯಿಂದ ಪರೀಕ್ಷೆಗೆ ಹಾಜರಾದರು. ಮುಕ್ಕಾಲು ಗಂಟೆ ಮುಂಚೆ ಪರೀಕ್ಷಾ ಕೇಂದ್ರಕ್ಕೆ ಬಂದು, ಸುರಕ್ಷಿತ ಅಂತರ ಕಾಯ್ದುಕೊಂಡು ಪರೀಕ್ಷಾ ಕೊಠಡಿಗೆ ತೆರಳಿದ ದೃಶ್ಯ ಕಂಡುಬಂದಿತು.

ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ

ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಯಿತು. ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ, ಮಾಸ್ಕ್ ಧರಿಸಿದ್ದನ್ನು ಖಾತ್ರಿ ಪಡಿಸಿಕೊಳ್ಳಲಾಯಿತು. ಪರೀಕ್ಷೆ ಬರೆಯುವ ಕೊಠಡಿಗಳಲ್ಲಿ ಡೆಸ್ಕ್‌ಗಳ ನಡುವೆ ಅಂತರ ಕಾಯ್ದುಕೊಳ್ಳಲಾಗಿತ್ತು. ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಸ್ಯಾನಿಟೈಸ್ ಮಾಡಿ ವಿದ್ಯಾರ್ಥಿಗಳಿಗೆ ನೀಡಲಾಯಿತು.

280 ಬಸ್ ವ್ಯವಸ್ಥೆ 

ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆತರಲು ಜಿಲ್ಲೆಯಾದ್ಯಂತ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ 280 ಬಸ್‌ಗಳನ್ನು ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು. ಪರೀಕ್ಷಾ ಕೇಂದ್ರಕ್ಕೆ ಹತ್ತಿರವಿದ್ದವರು ಕಾಲು ನಡಿಗೆಯಲ್ಲಿ, ಕೆಲವರು ಸ್ವಂತ ವಾಹನಗಳಲ್ಲಿ ಹಾಗೂ ಪಾಲಕರ ಜೊತೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದು ಕಂಡುಬಂದಿತು.

ಬಾದಾಮಿ ವರದಿ

ಇಲ್ಲಿನ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಜಿ.ಎಂ. ಕಲ್ಯಾಣಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಕಟ್ಟುನಿಟ್ಟಾಗಿ ನಡೆಯಿತು.

ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ವಿದ್ಯಾರ್ಥಿಗಳು ಕೊರೊನಾ ನೆನಪಿಸಿಕೊಳ್ಳದೇ ಹುರುಪಿನಿಂದ ಪರೀಕ್ಷೆಗೆ ಹಾಜರಾಗಿದ್ದು ಕಂಡು ಬಂದಿತು.

ಪ್ರತಿ ಕೊಠಡಿಗೆ 24 ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 786 ವಿದ್ಯಾರ್ಥಿಗಳ ಪೈಕಿ 28 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು ಎಂದು ಪರೀಕ್ಷಾ ಮೇಲ್ವಿಚಾರಕ ಸದಾಶಿವ ಸೂಳಿಭಾವಿ ಹೇಳಿದರು.

ಅಮೀನಗಡ ವರದಿ

ಪಟ್ಟಣದ ಸಂಗಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಯಶಸ್ವಿಯಾಗಿ ಜರುಗಿತು.
 ಒಟ್ಟು 649 ವಿದ್ಯಾರ್ಥಿಗಳ ಪೈಕಿ 29 ಮಂದಿ ಗೈರುಹಾಜರಾಗಿದ್ದರು. ಪರೀಕ್ಷಾ ಪ್ರಾರಂಭದಲ್ಲಿ ಎಲ್ಲ ವಿದ್ಯಾರ್ಥಿಗಳು ಮಾಸ್ಕ್ ಹಾಕಿರುವುದನ್ನು ಪರೀಕ್ಷಿಸಲಾಯಿತು. ಸಾನಿಟೈಜರ್ ಮಾಡಲಾಯಿತು ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಡಿ.ಎನ್.ಪಾಟೀಲ ಹೇಳಿದರು. ಅಧಿಕಾರಿಗಳಾದ ಎನ್.ಕೃಷ್ಣಪ್ಪ, ಆರ್.ಎಂ.ಗೌಡರ, ಬಿ.ಎಸ್.ಬಿರಾದಾರ, ನೋಡಲ್ ಅಧಿಕಾರಿ ಎಂ.ವಿ.ಹಿರೇಮಠ ಕಾರ್ಯನಿರ್ವಹಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು