ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಬಕವಿ ಬನಹಟ್ಟಿ | ಕಗ್ಗಂಟಾದ ಅಧ್ಯಕ್ಷರ ಆಯ್ಕೆ: ಬಿಜೆಪಿ ಸದಸ್ಯೆಯರ ಪೈಪೋಟಿ

Published 14 ಆಗಸ್ಟ್ 2024, 5:02 IST
Last Updated 14 ಆಗಸ್ಟ್ 2024, 5:02 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ನಗರಸಭೆಯ ಮೊದಲ ಅವಧಿಯ ಅಧಿಕಾರದ ಅವಧಿ ಮುಕ್ತಾಯದ ನಂತರ ಒಂದೂವರೆ ವರ್ಷಗಳ ನಂತರ ಹೊಸ ಮೀಸಲಾತಿ ಪ್ರಕಟಗೊಂಡಿದೆ. ನೂತನ ಅಧ್ಯಕ್ಷ ಮತ್ತ ಉಪಾಧ್ಯಕ್ಷರ ಆಯ್ಕೆಗಾಗಿ ಮತ್ತೆ ಅವಳಿ ನಗರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ನಗರಸಭೆಯು ರಬಕವಿ, ಬನಹಟ್ಟಿ, ರಾಮಪುರ ಮತ್ತು ಹೊಸೂರಗಳನ್ನು ಒಳಗೊಂಡಿದೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ‘ಅ’ ವರ್ಗ (ಮಹಿಳೆ) ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಎರಡೂ ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದ್ದು ವಿಶೇಷವಾಗಿದೆ.

ಒಟ್ಟು 31 ಸದಸ್ಯರನ್ನು ಒಳಗೊಂಡ ನಗರಸಭೆಯಲ್ಲಿ 24 ಬಿಜೆಪಿ ಸದಸ್ಯರು, ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಇದ್ದು ಅವರು ಕೂಡ ಬಿಜೆಪಿಯವರೊಂದಿಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಒಟ್ಟು 26 ಜನರ ಬೆಂಬಲ ಬಿಜೆಪಿಗೆ ಇದೆ.

ರಬಕವಿ ಬನಹಟ್ಟಿ ಅವಳಿ ನಗರಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಅರ್ಧವಾಗಿ ಹಂಚಿಕೊಂಡಿವೆ. ರಬಕವಿಯ ಸಂಜಯ ತೆಗ್ಗಿ ಅಧ್ಯಕ್ಷರಾಗಿ ಮತ್ತು ಬನಹಟ್ಟಿಯ ವಿದ್ಯಾ ಧಬಾಡಿ ಉಪಾಧ್ಯಕ್ಷರಾಗಿ ಅವಧಿಯನ್ನು ಪೂರೈಸಿದ್ದಾರೆ. ಈಗ ಅಧ್ಯಕ್ಷ ಸ್ಥಾನ ಬನಹಟ್ಟಿಗೆ ಮತ್ತು ಉಪಾಧ್ಯಕ್ಷ ಸ್ಥಾನ ರಬಕವಿಗೆ ಇದೆ.

ಸದ್ಯ ಬನಹಟ್ಟಿ ನಗರದಲ್ಲಿ ಮೀಸಲಾತಿಗೆ ಅನ್ವಯಿಸುವಂತೆ ಅನೇಕ ಮಹಿಳೆಯರು ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧೆ ನಡೆಸಿದ್ದಾರೆ. ಈಗಾಗಲೇ ಉಪಾಧ್ಯಕ್ಷರಾಗಿದ್ದ ವಿದ್ಯಾ ಧಬಾಡಿ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಇವರ ಜೊತೆಗೆ ದೀಪಾ ಕೊಣ್ಣೂರ, ಶಶಿಕಲಾ ಸಾರವಾಡ, ಶಬಾನಾ ಮೊಮಿನ್, ಜಯಶ್ರೀ ಬಾಗೇವಾಡಿ ಸ್ಪರ್ಧೆಯಲ್ಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಾಳವ್ವ ಕಾಖಂಡಕಿ ಮತ್ತ ದೀಪಾ ಗಾಡಿವಡ್ಡರ ಸ್ಪರ್ಧೆಯಲ್ಲಿ ಇದ್ದಾರೆ. ಬಾಳವ್ವ ಕಾಖಂಡಕಿ ಈಗಾಗಲೇ ಒಂದು ಬಾರಿ ಉಪಾಧ್ಯಕ್ಷರಾಗಿದ್ದರು.

ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಜೊತೆಗೂಡಿ ಶಾಸಕ ಸಿದ್ದು ಸವದಿ ಮತ್ತು ನಗರದ ಪ್ರಮುಖರಿಗೆ ತಮ್ಮ ಮನವಿಗಳನ್ನು ಸಲ್ಲಿಸುವುದರ ಜೊತೆಗೆ ಗುಪ್ತ ಸಭೆಗಳನ್ನು ನಡೆಸುತ್ತಿದ್ದಾರೆ. ಬಿಜೆಪಿಗೆ ಸಾಕಷ್ಟು ಸಂಖ್ಯೆಯ ಸದಸ್ಯರ ಬೆಂಬಲವಿದ್ದರೂ ಆಯ್ಕೆ ಮಾತ್ರ ಪಕ್ಷದ ಪ್ರಮುಖರಿಗೆ ಕಗ್ಗಂಟಾಗಿದೆ.

ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಕುರಿತು ಶಾಸಕ ಮತ್ತು ಪ್ರಮುಖರ ಜೊತೆಗೆ ಚರ್ಚೆ ಮಾಡಲಾಗುವುದು. ಆದಷ್ಟು ಬೇಗ ಸಭೆ ನಡೆಸಿ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು
- ಶ್ರೀಶೈಲ ಬೀಳಗಿ ಅಧ್ಯಕ್ಷ ಬಿಜೆಪಿ ನಗರ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT