ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ: ಮೇಟಿ ಸೂಚನೆ

ಬಿಟಿಡಿಎ ನಿವೇಶನಕ್ಕಾಗಿ ಹೆಚ್ಚು ಅರ್ಜಿ, 40 ಅರ್ಜಿಗಳು ಸ್ವೀಕೃತ
Published 20 ಜೂನ್ 2024, 15:27 IST
Last Updated 20 ಜೂನ್ 2024, 15:27 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಮನೆ ಮುಳುಗಡೆಯಾಗಿ ಸಂತ್ರಸ್ತರಾಗಿದ್ದೇವೆ. ಬಾಡಿಗೆಯಲ್ಲಿದ್ದ ಮನೆ ಮುಳುಗಡೆಯಾಗಿ ಅತಂತ್ರರಾಗಿದ್ದೇವೆ. ನಿವೇಶನಕ್ಕಾಗಿ ಬಿಟಿಡಿಎಗೆ ಅಲೆದಾಡುವುದೇ ಆಗಿದೆ. ಕೂಡಲೇ ನಿವೇಶನ ಕೊಡಿಸಬೇಕು’ ಎಂದು ಜನಸ್ಪಂದನಕ್ಕೆ ಬಂದಿದ್ದ ಅರ್ಧಕ್ಕೂ ಹೆಚ್ಚು ಜನರು ಮನವಿ ಸಲ್ಲಿಸಿದರು.

ನವನಗರದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಒಟ್ಟು ಸ್ವೀಕೃತವಾದ 40 ಅರ್ಜಿಗಳಲ್ಲಿ 29 ಅರ್ಜಿಗಳು ನಿವೇಶನಕ್ಕೆ ಸಂಬಂಧಿಸಿದವೇ ಆಗಿದ್ದವು.

‘ಹಲವಾರು ವರ್ಷಗಳಿಂದ ದಾಖಲೆ ಹಿಡಿದುಕೊಂಡು ಬಿಟಿಡಿಎಗೆ ಅಲೆದಾಡುತ್ತಿದ್ದೇವೆ. ಅರ್ಜಿಯನ್ನೂ ಸಲ್ಲಿದಿದ್ದೇವೆ. ಆದರೆ, ಅವುಗಳು ಇತ್ಯರ್ಥವಾಗಿಲ್ಲ’ ಎಂದು ದೂರಿದರು.

ಶಾಸಕ ಎಚ್‌.ವೈ. ಮೇಟಿ ಮಾತನಾಡಿ, ‘ಸೂಕ್ತ ದಾಖಲೆಗಳೊಂದಿಗೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಿ. ದಾಖಲೆಗಳನ್ನು ಪರಿಶೀಲಿಸಿ ಅರ್ಹರಿಗೆ ನಿವೇಶನ ನೀಡಲು ಕ್ರಮಕೈಗೊಳ್ಳಲಾಗುವುದು. ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ’ ಎಂದರು.

‘ಅರ್ಜಿ ಸಲ್ಲಿಸಿದವರಿಗೆ ಯಾವ ದಾಖಲೆಗಳನ್ನು ನೀಡಬೇಕು ಎಂದು ಸೂಚಿಸಲಾಗಿದೆ. ಅವರು ದಾಖಲೆಗಳನ್ನು ಸಲ್ಲಿಸಿದರೆ, ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದು ಬಿಟಿಡಿಎ ಅಧಿಕಾರಿ ಭರವಸೆ ನೀಡಿದರು.

ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ‘ಸಾರ್ವಜನಿಕರು ಹೊತ್ತು ತಂದ ಕುಂದು-ಕೊರತೆ ಹಾಗೂ ಅಹವಾಲುಗಳಿಗೆ ಸ್ಪಂದಿಸುವ ಕೆಲಸವಾಗಬೇಕು.ಮೊದಲ ಹಂತದಲ್ಲಿ ತಾಲ್ಲೂಕಿನ ರಾಂಪುರ ಮತ್ತು ಸೀಮಿಕೇರಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮ ಯಶಸ್ವಿಯಾಗಿದ್ದು, ಸ್ವೀಕೃತಗೊಂಡ ಎಲ್ಲ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ, ‘ತಾಲ್ಲೂಕು ಹಂತದಲ್ಲಿ ಬಂದ ಅರ್ಜಿಗಳ ಮೇಲೆ ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿ ಕಾರ್ಯಾಲಯದಿಂದ ಪರಿಶೀಲನೆ ಮಾಡಲಾಗುತ್ತಿದ್ದು, ಅರ್ಜಿಗಳಿಗೆ ತುರ್ತಾಗಿ ಇತ್ಯರ್ಥಗೊಳಿಸಬೇಕು’ ಎಂದು ಹೇಳಿದರು.

‘ಪದ್ಮನಯನ ನಗರದ ಬಸ್ ನಿಲ್ಲಿಸಬೇಕು ಎಂದು ಆದೇಶವಾಗಿದೆ. ಆದರೆ, ಯಾವುದೇ ಬಸ್‌ಗಳು ನಿಲುಗಡೆ ಮಾಡುವುದಿಲ್ಲ. ಈ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪಾರ್ಕ್ ಅಭಿವೃದ್ಧಿ ಮಾಡಲಾಗಿದ್ದು, ಕಾಮಗಾರಿ ಕಳಪೆಯಾಗಿದೆ’ ಎಂದು ಅಲ್ಲಿನ ನಿವಾಸಿಗಳು ದೂರಿದರು.

ಬಿಟಿಡಿಎಗೆ ಸಂಬಂಧಿಸಿದ ವಿವಿಧ ಸಂತ್ರಸ್ತರಿಂದ ನಿವೇಶನಕ್ಕಾಗಿ 29 ಅರ್ಜಿಗಳು ಬಂದಿದ್ದರೆ, ನಗರಸಭೆಗೆ 4, ಕೆ.ಪಿ.ಟಿ.ಸಿ.ಎಲ್, ಸಾರಿಗೆ ಸಂಸ್ಥೆ, ಉಪವಿಭಾಗಾಧಿಕಾರಿ ಕಚೇರಿ, ತಾಲ್ಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಸಣ್ಣ ನೀರಾವರಿ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ತಲಾ ಒಂದು ಅರ್ಜಿಗಳು ಸಲ್ಲಿಕೆಯಾಗಿವೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ್ ಅಮರೇಶ ಪಮ್ಮಾರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT