ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಬಕವಿ ಬನಹಟ್ಟಿ | ಹದಗೆಟ್ಟ ರಸ್ತೆ: ಸಂಚಾರ ಸಂಕಷ್ಟ

ಟೆಂಡರ್ ಆಗಿ ವರ್ಷ ಕಳೆದರೂ ಆರಂಭವಾಗದ ಕಾಮಗಾರಿ: ಜನರ ಪರದಾಟ
Published 11 ಜನವರಿ 2024, 6:24 IST
Last Updated 11 ಜನವರಿ 2024, 6:24 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ರಬಕವಿ ರಾಮಪುರ ಮಧ್ಯದಲ್ಲಿಯ ಹಳ್ಳಕ್ಕೆ ನಿರ್ಮಾಣ ಮಾಡಲಾದ ಸೇತುವೆಯಿಂದ ಬನಹಟ್ಟಿಯ ಪೊಲೀಸ್ ಠಾಣೆಯವರೆಗೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಪ್ರತಿ ಅಡಿಗೆ ಒಂದು ತೆಗ್ಗು ಇಲ್ಲವೆ ದಿಣ್ಣೆಗಳು ನಿರ್ಮಾಣವಾಗಿವೆ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದೆ.

ವಿಧಾನ ಸಭೆಯ ಚುನಾವಣೆಗಿಂತ ಅರು ತಿಂಗಳ ಮೊದಲು ರಸ್ತೆ ಅಭಿವೃದ್ಧಿ ಕಾಮಗಾರಿ ₹2 ಕೋಟಿಗೆ ಟೆಂಡರ್ ಆಗಿದ್ದು, ನಂತರ ಸ್ಥಳೀಯ ಶಾಸಕ ಸಿದ್ದು ಸವದಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಟೆಂಡರ್ ಆಗಿ ಒಂದು ವರ್ಷವಾದರೂ ಕಾಮಗಾರಿ ಇನ್ನೂ ಆರಂಭವಾಗಿಲ್ಲ.

ಇದು ರಬಕವಿ ರಾಮಪುರ ಮತ್ತು ಬನಹಟ್ಟಿಯ ನಗರದ ಪ್ರಮುಖ ರಸ್ತೆ. ದಿನನಿತ್ಯ ಸಾವಿರಾರು ಜನರು, ವಿವಿಧ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಆಸ್ಪತ್ರೆಗಳಿಗೆ ತೆರಳುವ ರೋಗಿಗಳು ನಿರಂತರವಾಗಿ ಈ ರಸ್ತೆ ಮೂಲಕ ಸಂಚರಿಸುತ್ತಾರೆ. ಸೈಕಲ್ ಮೇಲೆ ಸಂಚಾರ ಮಾಡುವ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗಿದೆ. ತೆಗ್ಗು ದಿಣ್ಣೆಗಳಿಂದ ಕೂಡಿದ ರಸ್ತೆಯಲ್ಲಿ ವಾಹನ ಸವಾರರು ದಿನನಿತ್ಯ ಚಿಕ್ಕಪುಟ್ಟ ಅಪಘಾತಗಳಿಗೆ ಒಳಗಾಗುತ್ತಿದ್ದಾರೆ. ರಸ್ತೆ ಹದಗೆಟ್ಟಿದ್ದರಿಂದ ಹಾಗೂ ಸವಾರರು ಬೇಕಾಬಿಟ್ಟಿ ವಾಹನ ಚಲಾಯಿಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಆದಷ್ಟು ಬೇಗನೆ ಇಲ್ಲಿಯ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಸ್ಥಳೀಯರಾದ ಬಸವರಾಜ ಪುಟಾಣಿ, ವೆಂಕಟೇಶ ನಿಂಗಸಾನಿ, ವಿಕಾಸ ಹೂಗಾರ, ರಾಘವೇಂದ್ರ ಗೊಳಸಂಗಿ, ಬಸಪ್ರಭು ಹಟ್ಟಿ ಆಗ್ರಹಿಸಿದ್ದಾರೆ.

ಇಲ್ಲಿಯ ಬೀದಿ ದೀಪಗಳು ಸಾಕಷ್ಟು ಬೆಳಕನ್ನು ನೀಡದೆ ಇರುವುದರಿಂದ ರಾತ್ರಿ ತೊಂದರೆ ಆಗುತ್ತಿದೆ. ರಸ್ತೆಯ ಮಧ್ಯದಲ್ಲಿಯ ಯುಜಿಡಿ ಯೋಜನೆಯ ಮ್ಯಾನ್ ಹೋಲ್‌ಗಳಿಂದಲೂ ಸಮಸ್ಯೆಯಾಗಿದೆ. ಇವು ಕೂಡಾ ರಸ್ತೆಯನ್ನು ಹದಗೆಡಿಸಿವೆ ಎನ್ನುತ್ತಾರೆ ಸಾರ್ವಜನಿಕರು.

ಇಲ್ಲಿ ಅಳವಡಿಸಲಾದ ಬೀದಿದೀಪಗಳ ಕುರಿತು ಪರಿಶೀಲನೆ ನಡೆಸಿ ಸಮರ್ಪಕ ಬೆಳಕು ನೀಡುವ ಬೀದಿ ದೀಪಗಳನ್ನು ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗುವುದು
–ಜಗದೀಶ ಈಟಿ ಪಾರಾಯುಕ್ತ ರಬಕವಿ ಬನಹಟ್ಟಿ
ಟೆಂಡರ್ ಆಗಿ ಭೂಮಿಪೂಜೆ ನಡೆದರೂ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
–ಸಂಜಯ ತೆಗ್ಗಿ ನಗರಸಭೆಯ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT