ಬೀಳಗಿ: ‘ಗ್ರಾಮಗಳ ಅಭಿವೃದ್ಧಿಗೆ ಶೈಕ್ಷಣಿಕ ಮತ್ತು ಆರ್ಥಿಕ ಸಂಸ್ಥೆಗಳ ಪಾತ್ರ ಪ್ರಮುಖವಾಗಿದ್ದು, ವಿಶ್ವ ಭಾರತಿ ಸೌಹಾರ್ದ ಸಹಕಾರಿ ಎನ್ನುವ ಆರ್ಥಿಕ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಸಿದ್ದಾಪುರ ಗ್ರಾಮದ ಅಭಿವೃದ್ಧಿಗೆ ನಾಂದಿ ಹಾಡಿರುವ ಸಂಘದ ಪದಾಧಿಕಾರಿಗಳ ಕಾರ್ಯ ಅಭಿನಂದನಾರ್ಹ’ ಎಂದು ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಸಿದ್ದಾಪೂರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಸಭಾ ಭವನದಲ್ಲಿ ಈಚೆಗೆ ನಡೆದ ವಿಶ್ವ ಭಾರತಿ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ನಾಗರಾಳ ದಿಗಂಬರೇಶ್ವರ ಮಠದ ಶೇಷಪ್ಪಯ್ಯ ಸ್ವಾಮೀಜಿ, ಸಿದ್ದಾಪೂರದ ಮಾನಪ್ಪಯ್ಯ ದಿಗಂಬರೇಶ್ವರಮಠ ಸ್ವಾಮೀಜಿ ಮತ್ತು ಮುರಗಯ್ಯ ಹಿರೇಮಠ ಸ್ವಾಮೀಜಿ ಸಾನ್ನಿಧ್ಯ, ವಿಶ್ವ ಭಾರತಿ ಸೌಹಾರ್ದ ಸಹಕಾರಿಯ ಅಧ್ಯಕ್ಷ ಪ್ರಕಾಶ ಮುತಾಲೀಕ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರಂಗಪ್ಪ ಕಾಗದಾಳ , ಈರಪ್ಪ ಮಹಾಲಿಂಗಪೂರ, ಹುಸೇನಸಾಬ ಕೆರೂರ, ಶಂಕರ ತೋಟಗೇರ, ರಾಮಪ್ಪ ಸೋಲಾಪುರ ಸುಭಾಸ ಜಮ್ಮನಕಟ್ಟಿ, ಅಕ್ಷತಾ ದೊಡಮನಿ, ಮಾನಂದಾ ಬಬಲೇಶ್ವರ ಇದ್ದರು.
ಮುಖ್ಯ ಕಾರ್ಯನಿರ್ವಾಹಕ ನಾಗೇಶ ಪತ್ರಿ ವರದಿ ಮಂಡಿಸಿ, ‘₹4.5 ಲಕ್ಷ ಶೇರು ಬಂಡವಾಳದೊಂದಿಗೆ ಆರಂಭವಾದ ಸಂಸ್ಥೆ, ಇಂದು 639 ಸದಸ್ಯರನ್ನು ಹೊಂದಿ ₹35 ಲಕ್ಷ ಶೇರು ಬಂಡವಾಳ, ₹4.44 ಕೋಟಿ ಠೇವಣಿ ಹಾಗೂ ₹5.82 ಕೋಟಿ ದುಡಿಯುವ ಬಂಡವಾಳವಿದ್ದು, ಪ್ರಸ್ತುತ ವರ್ಷ ₹ 4.68 ಲಕ್ಷ ಲಾಭ ಗಳಿಸಿದೆ’ ಎಂದರು.
‘ಶೇರುದಾರರಿಗೆ ಪ್ರಸಕ್ತ ಸಾಲಿನಲ್ಲಿ ಶೇ 6ರಷ್ಟು ಲಾಭಾಂಶ ವಿತರಿಸಲಾಗುವುದು’ ಎಂದರು.
ನಿವೃತ್ತ ಶಿಕ್ಷಕ ಎಂ.ವೈ.ವಡವಾಣಿ, ಗ್ರಾಮದ ಪ್ರಮುಖರಾದ ಎಸ್.ಜಿ. ಒಡೆಯರ ಮಾತನಾಡಿದರು.