ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರವನು ಈಶ್ವರಪ್ಪ ನನಗೆ ಹೇಳಲು: ಸಿದ್ದರಾಮಯ್ಯ ತಿರುಗೇಟು

ಮುಂದಿನ ಬಾರಿಯೂ ಬಾದಾಮಿಯಲ್ಲೇ ಸ್ಪರ್ಧೆ ಮಾಡುವುದಾಗಿ ಘೋಷಣೆ
Last Updated 6 ಡಿಸೆಂಬರ್ 2021, 8:54 IST
ಅಕ್ಷರ ಗಾತ್ರ

ಬಾಗಲಕೋಟೆ: ‘ನನಗೆ ಎಲ್ಲಿ ಪ್ರೀತಿಯಿಂದ ಜನ ಕರೆಯುತ್ತಾರೆಯೋ ಅಲ್ಲಿ ಚುನಾವಣೆಗೆ ನಿಲ್ಲುವೆ. ಬಾದಾಮಿಯಲ್ಲಿ ಕರೆಯುತ್ತಾರೆ ಮುಂದಿನ ಬಾರಿಯೂ ಇಲ್ಲಿಯೇ ನಿಂತುಕೊಳ್ಳುವೆ’ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬಾದಾಮಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಾದಾಮಿ ಬದಲಿಗೆ ಮುಸ್ಲಿಮರ ಮತ ಹೆಚ್ಚು ಇರುವ ಬೆಂಗಳೂರಿನ ಚಾಮರಾಜ ಪೇಟೆ ಕ್ಷೇತ್ರದಲ್ಲಿ ನಿಲ್ಲಲಿದ್ದಾರೆ’ಎಂದು ಸಚಿವ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಚುನಾವಣೆಯಲ್ಲಿ ಎಲ್ಲಿ ನಿಲ್ಲಬೇಕು ಈಶ್ವರಪ್ಪನನ್ನು ಕೇಳಿಕೊಂಡು ನಿಂತುಕೊಳ್ಳಲು ಆಗುತ್ತದೆಯೇ? ನಾನು ಚಾಮರಾಜಪೇಟೆಯಲ್ಲಿ ನಿಲ್ಲುವುದಾಗಿ ಹೇಳಿದ್ದೇನಾ? ಯಾರವನು ಈಶ್ವರಪ್ಪ ನನಗೆ ಹೇಳಲು? ಎಂದು ತಿರುಗೇಟು ನೀಡಿದರು.

’ನಮ್ಮದು ಜಾತ್ಯಾತೀತ, ಧರ್ಮನಿರಪೇಕ್ಷಿತ ರಾಷ್ಟ್ರ. ಈಶ್ವರಪ್ಪನಿಗೆ ಸಂವಿಧಾನ ಗೊತ್ತಾ? ಅದರ ಪ್ರಸ್ತಾವನೆಯಲ್ಲಿ ಏನು ಇದೆ ಎಂದು ಓದಿಕೊಂಡಿದ್ದಾರಾ? ಓದಿಕೊಂಡಿದ್ದರೆ ಮುಸಲ್ಮಾನರ ವಿರುದ್ಧ, ಕ್ರೈಸ್ತರ ವಿರುದ್ಧ ಮಾತಾಡುತ್ತಿರಲಿಲ್ಲ’ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಅದೇ ಬಂದಿರುವುದು ಸಮಸ್ಯೆ ನಮಗೆ. ಸಂವಿಧಾನ ಓದಿಕೊಳ್ಳದವರ, ಅದರ ಆಶಯಗಳ ಬಗ್ಗೆ ಅರಿವಿಲ್ಲದವರ ಕೈಗೆ ಅಧಿಕಾರ ಸಿಕ್ಕರೆ ಇದೇ ಸಮಸ್ಯೆ ಆಗುತ್ತದೆ’ ಎಂದರು.

ರಾಜೀನಾಮೆ ಕೊಡಲಿ

’ಮುರುಗೇಶ ನಿರಾಣಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಈಶ್ವರಪ್ಪ ಹೇಳಿಬಿಟ್ಟರು. ಎಲ್ಲಾ ಬೈಯ್ಯಲು ಶುರುಮಾಡಿದ ಮೇಲೆ ನಾನು ಹಂಗೆ ಹೇಳಲಿಲ್ಲ. ಮುಂದೆ ಆಗಬಹುದು ಅಂದರು. ಈಶ್ವರಪ್ಪನಿಗೆ ಸ್ವಾಭಿಮಾನ ಇದೆಯಾ. ಈಶ್ವರಪ್ಪ, ಮುರುಗೇಶ ನಿರಾಣಿ ಇಬ್ಬರಲ್ಲಿ ಯಾರು ಹಿರಿಯರು’ಎಂದು ಪ್ರಶ್ನಿಸಿದರು.

’ಈಶ್ವರಪ್ಪ ಮಾನ ಮರ್ಯಾದೆ ಇಲ್ಲದೇ ನಿರಾಣಿ ಮುಖ್ಯಮಂತ್ರಿ ಆಗುತ್ತಾರೆ ಎಂದರೆ ಹೇಗೆ? ನನ್ನ ಪ್ರಕಾರ ಈಶ್ವರಪ್ಪ ಸಚಿವರಾಗಿ ಬಸವರಾಜ ಬೊಮ್ಮಾಯಿ ಅವರಿಂದ ನೇಮಕಗೊಂಡಿದ್ದಾರೆ. ಅವರ ಬಗ್ಗೆ ವಿಶ್ವಾಸ ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ‘ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT