ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೇರನುಡಿಯ ಎಸ್‌.ಆರ್‌.ಪಾಟೀಲ

Published 30 ಜುಲೈ 2023, 14:35 IST
Last Updated 30 ಜುಲೈ 2023, 14:35 IST
ಅಕ್ಷರ ಗಾತ್ರ

ಎಸ್.ಆರ್.ಪಾಟೀಲ ಅಜಾತಶತ್ರು ರಾಜಕಾರಣಿ, ಸಮಾಜಮುಖಿ ಬದುಕಿನ ಮಾರ್ಗದರ್ಶಿ ವ್ಯಕ್ತಿ. ನೇರನುಡಿಯ ನಿಷ್ಕಳಂಕ ಮನೋಭಾವದ ಪಾರದರ್ಶಕ ಪಾದರಸ ಚಟುವಟಿಕೆಯ ಅವರ ವ್ಯಕ್ತಿತ್ವದಲ್ಲಿ ಗ್ರಾಮೀಣ ಬದುಕಿನ ಸೊಗಡಿದೆ.

ಆಧುನಿಕ ವಿದ್ಯಮಾನಗಳನ್ನು ವಿಶ್ಲೇಷಿಸುವ ಜಾಣ್ಮೆಯಿದೆ. ಅದಕ್ಕಿಂತಲೂ ಹೆಚ್ಚಾಗಿ ಪ್ರಜಾಪ್ರಭುತ್ವ ನೆಲೆಗಟ್ಟಿನ ರಾಜಕಾರಣದಲ್ಲಿ ಸಾರ್ವಜನಿಕ ಸೇವೆಯ ಬದ್ಧತೆಯಿದೆ.

ಗ್ರಾಮ ಸ್ವರಾಜ್ಯ ಕಲ್ಪನೆಯ ಮೊದಲ ಪ್ರಯೋಗದ ಜಿಲ್ಲಾ ಪರಿಷತ್ತಿನ ಮೊದಲ ಪ್ರತಿಪಕ್ಷದ ನಾಯಕರಾಗಿ ಎಸ್.ಆರ್.ಪಾಟೀಲರು ಆಡಳಿತದ ಓರೆ ಕೋರೆಗಳನ್ನು ಎತ್ತಿ ತೋರಿಸುವಲ್ಲಿ ಯಶಸ್ವಿಯಾದರು. ಇದರ ಪರಿಣಾಮ ಅವಿಭಕ್ತ ವಿಜಯಪುರ ಜಿಲ್ಲೆಯ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದರು.

ಸೋಲು, ಗೆಲುವು ಎರಡನ್ನೂ ಕಂಡಿರುವ ಅವರು ಸೋಲಿನಿಂದ ಕುಗ್ಗಿಲ್ಲ, ಗೆಲುವಿನಿಂದ ಉಬ್ಬಿಲ್ಲ.

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಭಾಪತಿಯಾಗಿ ಅವರು ಮಾಡಿರುವ ಕಾರ್ಯ  ಪ್ರಶಂಸನೀಯ. ಅಂತೆಯೇ ಬಾಗಲಕೋಟೆ ಡಿಸಿಸಿ ಬ್ಯಾಂಕಿನ ಮೊದಲ ಅಧ್ಯಕ್ಷರಾಗಿ ರಾಷ್ಟ್ರಮಟ್ಟದಲ್ಲಿಯೇ ಬ್ಯಾಂಕಿಗೆ ಉತ್ತಮ ನಿರ್ವಹಣೆಯ ಪ್ರಶಸ್ತಿ ತಂದುಕೊಟ್ಟ ಕೀರ್ತಿ ಅವರದ್ದಾಗಿದೆ.

ಬೀಳಗಿ ತಾಲ್ಲೂಕಿನ ಹೆಗ್ಗೂರಿನಲ್ಲಿ ಶ್ರಮದಾನದ ಮೂಲಕ ಸೇತುವೆ ನಿರ್ಮಿಸಿದ್ದು, ಬೀಳಗಿ ತಾಲ್ಲೂಕಿಗೆ ಕೈಗಾರಿಕೆಗೆ ವಿಕಾಸದ ದಾರಿ ತೋರಿಸಲು ಬಾಡಗಂಡಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿದ್ದು ಅವರ ಸಾಧನೆಯ ಬಹುದೊಡ್ಡ ಮೈಲಿಗಲ್ಲು.

ಬೀಳಗಿಯಲ್ಲಿ ಪಟ್ಟಣ ಸಹಕಾರಿ ಬ್ಯಾಂಕ್ ಅನ್ನು ಸ್ಥಾಪಿಸಿ ಆರ್ಥಿಕ ಚಟುವಟಿಕೆಗೆ ಶಕ್ತಿ ನೀಡಿದ ಎಸ್.ಆರ್.ಪಾಟೀಲರು ಬಾಪೂಜಿ ಸೌಹಾರ್ದ ಸಂಸ್ಥೆಯನ್ನು ಸ್ಥಾಪಿಸಿ ಅದನ್ನು ರಾಜ್ಯವ್ಯಾಪಿಗೊಳಿಸಿದ್ದಾರೆ. ಸಹಕಾರಿ ಕ್ಷೇತ್ರ ಅಭಿವೃದ್ಧಿ ಹೊಂದಲು ಹತ್ತಾರು ಸಹಕಾರಿ ಸಂಸ್ಥೆಗಳನ್ನು ಕಟ್ಟಿದ್ದಾರೆ.  ಹೀಗಾಗಿ ಅವರನ್ನು ಸಹಕಾರಿ ಸಂಘದ ಭೀಷ್ಮ ಎಂದು ಕರೆಯುತ್ತಾರೆ.

75 ವಸಂತಗಳನ್ನು ಪೂರೈಸಿದರೂ ಇನ್ನು ಹದಿನಾರರ ಯುವಕರು ನಾಚುವಂತೆ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಒಳ್ಳೆಯ ಮನಸ್ಸು, ಸತ್ಕಾರ್ಯಗಳು ಮನುಷ್ಯನನ್ನು ಆರೋಗ್ಯಪೂರ್ಣವನ್ನಾಗಿಸುತ್ತವೆ ಎಂಬುದಕ್ಕೆ  ಎಸ್‌ಆರ್‌ಪಿ ಅವರು ಜೀವಂತ ಸಾಕ್ಷಿಯಾಗಿದ್ದಾರೆ. ಅವರ ದೇಹಕ್ಕೆ ವಯಸ್ಸಾಗಿರಬಹುದು ಮನಸ್ಸಿಗಲ್ಲ ಎಂಬುದು ಅವರ ಕೆಲಸ ಕಾರ್ಯಗಳಿಂದ ತಿಳಿಯಬಹುದು.

ವೈಯಕ್ತಿಕ ಬದುಕಿಗಿಂತ, ಸಾರ್ವಜನಿಕರ ಹಿತವೇ ಅವರಿಗೆ ಮುಖ್ಯ. ಆ ದಿಸೆಯಲ್ಲಿ ಕಾರ್ಯೋನ್ಮುಖರಾಗಿ ಸಾಧಿಸಿದ ಸಾಧಿಸುತ್ತಿರುವ ಸಾಧನೆಗಳು ಅತ್ಯದ್ಭುತ. ಅವರು ಎಲ್ಲ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT