ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀಳಗಿ: ಅನಗವಾಡಿ ಹಳ್ಳಿಯಲ್ಲಿದೆ ‘ಸೂಪರ್‌ ಮಾರ್ಕೆಟ್‌’

ಬೀಳಗಿ ತಾಲ್ಲೂಕಿನ ಅನಗವಾಡಿ ಪಿಕೆಪಿಎಸ್‌ನ ಮಾದರಿ ಕಾರ್ಯ; ಅಗತ್ಯ ವಸ್ತುಗಳು ಲಭ್ಯ
ಕಾಶಿನಾಥ ಸೋಮನಕಟ್ಟಿ
Published : 14 ಸೆಪ್ಟೆಂಬರ್ 2024, 7:39 IST
Last Updated : 14 ಸೆಪ್ಟೆಂಬರ್ 2024, 7:39 IST
ಫಾಲೋ ಮಾಡಿ
Comments

ಬೀಳಗಿ: ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಅನಗವಾಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ‘ಸೂಪರ್ ಮಾರ್ಕೆಟ್’ ಆರಂಭಿಸಿ, ಗ್ರಾಮಸ್ಥರಿಗೆ ಅಗತ್ಯ ವಸ್ತುಗಳು ದೊರೆಯುವಂತೆ ಮಾಡಲಾಗಿದೆ. ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲಾಗಿದ್ದು, ಅದರಲ್ಲಿ ಸಹಕಾರ ಬ್ಯಾಂಕ್‌, ಗೊಬ್ಬರದ ಗೋದಾಮು, ಸಿಮೆಂಟ್ ಹಾಗೂ ಕಬ್ಬಿಣದ ವಸ್ತುಗಳ ಮಾರಾಟ ಕೇಂದ್ರ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.

‘ಸೂಪರ್‌ ಮಾರ್ಕೆಟ್‌’ ಗೆಂದು ಪ್ರತ್ಯೇಕವಾಗಿ ಕಟ್ಟಡ ನಿರ್ಮಿಸಿ ಮಳಿಗೆ ಮಾಡಲಾಗಿದೆ. ಪಿಕೆಪಿಎಸ್ ಅಡಿಯಲ್ಲಿ ಸಭಾಂಗಣವನ್ನು ನಿರ್ಮಿಸಲಾಗಿದ್ದು, ಸಂಘದ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ವಿವಿಧ ತರಬೇತಿಗೆ ಸಭಾಂಗಣವನ್ನು ಉಚಿತವಾಗಿ ಕೊಡಲಾಗುತ್ತಿದೆ. ರೈತರಿಗೆ ಅಗತ್ಯವಾದ ರಸಗೊಬ್ಬರ ವಿತರಿಸುವುದಕ್ಕಾಗಿ, ಪಡಿತರ ವಿತರಣೆ ಮಾಡುವುದಕ್ಕಾಗಿ ಗೋದಾಮನ್ನು ನಿರ್ಮಿಸಲಾಗಿದೆ.

ಈ ಹಳ್ಳಿಯ ಜನರು ಹಲವು ಕೆಲಸಗಳಿಗಾಗಿ ಬೀಳಗಿ ಪಟ್ಟಣಕ್ಕೋ ಅಥವಾ ಜಿಲ್ಲಾ ಕೇಂದ್ರವಾದ ಬಾಗಲಕೋಟೆ ನಗರಕ್ಕೋ ಹೋಗಬೇಕಾದ ಅನಿವಾರ್ಯತೆಯನ್ನು ತಪ್ಪಿಸುವ ಕೆಲಸವನ್ನು ಸಂಘದಿಂದ ಮಾಡಲಾಗಿದೆ. ಬಹಳಷ್ಟು ಅಗತ್ಯ ವಸ್ತುಗಳು ಹಾಗೂ ಸೇವೆ ಊರಲ್ಲೇ ದೊರೆಯುವಂತೆ ಮಾಡಲಾಗಿದೆ. ಸಂಸ್ಥಾಪಕ ಅಧ್ಯಕ್ಷ ಎಂ.ಬಿ.ಕಂಬಿ ನೇತೃತ್ವದಲ್ಲಿ ಈ ಸಂಘದಿಂದ ₹ 6 ಕೋಟಿವರೆಗೂ ಸಾಲ ಕೊಡಲಾಗಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಎಟಿಎಂ ಕೂಡ ಈ ಸಂಘದ ಪಕ್ಕದಲ್ಲಿಯೇ ನಿರ್ಮಾಣವಾಗಿದೆ. ಈ ಸಂಘದಲ್ಲಿ 1,405 ಮಂದಿ ಸದಸ್ಯರಿದ್ದಾರೆ.

‘ಸಾಮಾನ್ಯವಾಗಿ ಸೂಪರ್‌ ಮಾರ್ಕೆಟ್‌ಗಳು ನಗರದಲ್ಲಿ ಇರುತ್ತವೆ. ಆದರೆ, ಈ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿಯ ಸಾಮಾಜಿಕ ಕಳಕಳಿಯಿಂದಾಗಿ ಅನಗವಾಡಿಯಲ್ಲಿ ನಿರ್ಮಾಣವಾಗಿದೆ. ಇಲ್ಲಿ ಎಲ್ಲ ರೀತಿಯ ಆಹಾರ ಪದಾರ್ಥಗಳು, ದಿನಬಳಕೆ ವಸ್ತುಗಳು, ಪ್ಲಾಸ್ಟಿಕ್ ಸಾಮಾನುಗಳು, ವಿದ್ಯಾರ್ಥಿಗಳ ಲೇಖನ ಸಾಮಗ್ರಿಗಳು, ಮದುವೆ ಮತ್ತು ಸಮಾರಂಭಗಳಿಗೆ ಬೇಕಾಗುವ ನೆನಪಿನ ಕಾಣಿಕೆಗಳು, ಐಸ್ ಕ್ರೀಂ ನಂತಹ ವಸ್ತುಗಳು ಸಿಗುತ್ತವೆ. ಶೇರುದಾರರಲ್ಲದೆ ಎಲ್ಲ ಗ್ರಾಹಕರಿಗೂ ಎಂ.ಆರ್.ಪಿ ದರದ ಮೇಲೆ ರಿಯಾಯಿತಿ ನೀಡುವುದರಿಂದ ಹೆಚ್ಚಿನ ಅನುಕೂಲವಾಗಿದೆ.

2021ರಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಲಾಭದಾಯಕವಾಗಿದ್ದು, ನಾಲ್ವರು ಸಿಬ್ಬಂದಿ ಈ ಮಾರ್ಕೆಟ್ ನಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಮುಖ್ಯ ಕಾರ್ಯನಿರ್ವಾಹಕ ಎಂ.ಎಸ್. ಮಠಪತಿ ಪ್ರಜಾವಾಣಿಗೆ ತಿಳಿಸಿದರು .

ಬೆಳಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೆ ಸೂಪರ್ ಮಾರ್ಕೆಟ್ ಕಾರ್ಯನಿರ್ವಹಿಸುತ್ತದೆ. ಭಾನುವಾರ ರಜೆಯ ದಿನ.

ಬೀಳಗಿ ತಾಲ್ಲೂಕಿನ ಅನಗವಾಡಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಿರ್ಮಿಸಿರುವ ಸೂಪರ್ ಮಾರ್ಕೆಟ್
ಬೀಳಗಿ ತಾಲ್ಲೂಕಿನ ಅನಗವಾಡಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಿರ್ಮಿಸಿರುವ ಸೂಪರ್ ಮಾರ್ಕೆಟ್
ರೈತಾಪಿ ಜನರಿಗೆ ಅನುಕೂಲ
ಕಂಬಿ ‘ತಾಲ್ಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗಿಂತ ವೈಶಿಷ್ಟ ಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವುದು ನಮಗೆ ಖುಷಿ ತಂದಿದೆ. ಸೂಪರ್ ಮಾರ್ಕೆಟ್ ನಮ್ಮ ಸಂಸ್ಥೆಯ ರೈತಾಪಿ ಜನರು ತಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆ ನಗರಗಳಿಗೆ ಹೋಗಿ ಬರಲು ಸಮಯ ಇರುವುದಿಲ್ಲ ಸಮಯದ ಜೊತೆ ಆರ್ಥಿಕವಾಗಿ ಉಳಿತಾಯವಾಗಲಿ ಎನ್ನುವ ಸದುದ್ದೇಶದಿಂದ ರಿಯಾಯಿತಿ ದರದಲ್ಲಿ ದಿನಬಳಕೆ ವಸ್ತುಗಳ ಮಾರಾಟ ಪ್ರಾರಂಭಿಸಿದ್ದೇವೆ’ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲಯ್ಯ ಬ. ಕಂಬಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT