ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೂಡಲಸಂಗಮ | ಮ್ಯೂಸಿಯಂ ಅಭಿವೃದ್ಧಿಗೆ ಬೇಕಿದೆ ಇಚ್ಛಾಶಕ್ತಿ

ಎರಡು ದಶಕದ ಕನಸು ಈಡೇರುವುದು ಯಾವಾಗ?
Published 14 ಮೇ 2024, 4:28 IST
Last Updated 14 ಮೇ 2024, 4:28 IST
ಅಕ್ಷರ ಗಾತ್ರ

ಕೂಡಲಸಂಗಮ: ದೆಹಲಿ ಅಕ್ಷರಧಾಮ ಮಾದರಿಯಲ್ಲಿ ಕೂಡಲಸಂಗಮ ಅಭಿವೃದ್ಧಿಪಡಿಸುವ ಕನಸು ಬಿತ್ತಿದ ಸರ್ಕಾರ, ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗದೇ ಇರುವುದು, ರಾಜಕೀಯ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ 2 ದಶಕದ ಕನಸು ಕನಸಾಗಿಯೇ ಉಳಿದಿದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸುತ್ತಿದ್ದಂತೆ ಕೂಡಲಸಂಗಮ ಬಸವ ಅಂತರರಾಷ್ಟ್ರೀಯ ಕೇಂದ್ರದ ಮ್ಯೂಸಿಯಂ ಮುಕ್ತಾಯಗೊಳ್ಳುವುದು ಎಂಬ ಬರವಸೆ ಇಟ್ಟ ಬಸವ ಭಕ್ತರ ಆಸೆ ಸದ್ಯ ಈಡೇರುವ ಲಕ್ಷಣ ಕಾಣುತ್ತಿಲ್ಲ. ಆಧುನಿಕ ತಂತ್ರಜ್ಞಾನದ ಮೂಲಕ ಬಸವಾದಿ ಶರಣರ ವಿಚಾರಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿತ್ತರಿಸಬೇಕು ಎಂಬ ಉದ್ದೇಶದಿಂದ 1998ರಲ್ಲಿ ಬಸವ ಅಂತರರಾಷ್ಟ್ರೀಯ ಕೇಂದ್ರದ ಕಾಮಗಾರಿ ಆರಂಭಗೊಂಡು 2006ರಲ್ಲಿ ಮುಕ್ತಾಯಗೊಂಡಿತು. ನಿರ್ಮಾಣ ಕಾರ್ಯಕ್ಕೆ ಅಂದು ಮಂಡಳಿ ₹15.50 ಕೋಟಿ ವೆಚ್ಚ ಮಾಡಿದೆ. ಈ ಅಂತರರಾಷ್ಟ್ರೀಯ ಕೇಂದ್ರದ ಮ್ಯೂಸಿಯಂ ಒಳಗೆ ಏನು ಅಳವಡಿಸಬೇಕು ಎಂದು ನಿರ್ಣಯಿಸಲು 7 ವರ್ಷ ಬೇಕಾಯಿತು.

2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಸರ್ಕಾರ, ಬಸವ ಅಂತಾರಾಷ್ಟ್ರೀಯ ಕೇಂದ್ರದ ಯೋಜನೆ ಹಳೆಯದಾಗಿದ್ದು ದೆಹಲಿ ಅಕ್ಷರಧಾಮ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ₹139 ಕೋಟಿ ಬಿಡುಗಡೆ ಮಾಡಿ 2018ರಲ್ಲಿ ಕಾಮಗಾರಿಗಳಿಗೆ ಚಾಲನೆ ಕೊಟ್ಟರು. ನಂತರ ಬಂದ ಬಿಜೆಪಿ ಸರ್ಕಾರ ಇತ್ತ ಗಮನ ಹರಿಸದ ಪರಿಣಾಮ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಾಮಗಾರಿ ಇನ್ನೂ ಮುಕ್ತಾಯಗೊಂಡಿಲ್ಲ.

ಅಂದು ಬಿಡುಗಡೆ ಮಾಡಿದ ₹139 ಕೋಟಿ ಹಣದಲ್ಲಿ ಮಂಡಳಿಯು ಬರೀ ಭೌತಿಕ ಕಟ್ಟಡಗಳನ್ನೇ ನಿರ್ಮಿಸಿದೆ. ಮ್ಯೂಸಿಯಂ ಒಳಗಿನ ಚಿತ್ರಣದ ಯೋಜನೆ ಇನ್ನೂ ಆಗಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಸರ್ಕಾರದ ಮೌನದಿಂದ ಬಿಡುಗಡೆಯಾದ ₹139 ಕೋಟಿ ಹಣ ನೀರಿನಂತೆ ಖರ್ಚಾಗಿದೆ. ಆದರೆ ಮೂಲ ಉದ್ದೇಶ ಸಾಕಾರಗೊಂಡಿಲ್ಲ.

₹15.50 ಕೋಟಿ ವೆಚ್ಚದಲ್ಲಿ 2006ರಲ್ಲಿ ನಿರ್ಮಾಣವಾದ ಏಳು ಅಂತಸ್ತಿನ ಬೃಹತ್ ಬಸವ ಅಂತರರಾಷ್ಟ್ರೀಯ ಕೇಂದ್ರ ಅಂದಿನಿಂದ ಇಂದಿನವರೆಗೂ ನಿರುಪಯುಕ್ತವಾಗಿದೆ. ಪಕ್ಕದಲ್ಲಿಯೇ ಮತ್ತೊಂದು ₹64.43 ಕೋಟಿ ವೆಚ್ಚದ ಬೃಹತ್ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಮುಕ್ತಾಯಗೊಳ್ಳದ ಪರಿಣಾಮ ಈ ಕಟ್ಟಡ ಮುಕ್ತಾಯಕ್ಕೆ ಇನ್ನೂ ₹110 ಕೋಟಿ ಅಗತ್ಯ ಇದೆ.

ಹಿಂದಿ ನಿರ್ಮಿಸಿದ ಏಳು ಅಂತಸ್ತಿನ ಬೃಹತ್ ಕಟ್ಟಡಕ್ಕೆ ₹1.80 ಕೋಟಿ ವೆಚ್ಚದಲ್ಲಿ ಮಂಡಳಿ ಕಳೆದ ವರ್ಷ ಬಿಳಿಯ ಬಣ್ಣ ಹಚ್ಚಿ, ಬೃಹತ್ ಕಟ್ಟಡಕ್ಕೆ ಬೀಗ ಹಾಕಿದೆ.

ಕುಂಟು ನೆಪ; ಕುಂಟುತ್ತಿದೆ ಕಾಮಗಾರಿ

ಬಸವಾದಿ ಶರಣರ ಸಂದೇಶಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಉದ್ದೇಶದಿಂದ 2018ರಲ್ಲಿ ಶರಣ ಗ್ರಾಮ ಯೋಜನೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ಕೊಟ್ಟು ₹5.38 ಕೋಟಿ ಹಣ ಬಿಡುಗಡೆ ಮಾಡಿದ್ದರು. 20 ಎಕರೆ ಪ್ರದೇಶದಲ್ಲಿ ಬಸವಣ್ಣನ ಸಮಕಾಲೀನ 770 ಶರಣರ ಮೂರ್ತಿಗಳನ್ನು ನಿರ್ಮಿಸಿ ಅವರ ಬದುಕು ಸಂದೇಶಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶ ಹೊಂದಿತ್ತು. ಮಂಡಳಿಯ ಅಧಿಕಾರಿಗಳು ಅಂದಿನಿಂದ ಇಂದಿನವರೆಗೂ ಶರಣ ಗ್ರಾಮ ಯೋಜನೆ ಕಾಮಗಾರಿ ಆರಂಭಿಸಿಲ್ಲ ತಜ್ಞರ ಸಮಿತಿ ಮಾಡುತ್ತೆವೆ ಎಂದು ಜನಪ್ರತಿನಿಧಿಗಳಿಗೆ ಕುಂಟು ನೆಪ ಹೇಳುತ್ತ ಇಲ್ಲಿಯವರೆಗೂ ಬಂದಿದ್ದಾರೆ. ಶರಣ ಗ್ರಾಮ ಯೋಜನೆಗೆ ಇಟ್ಟ ಹಣ ಬೇರೆ ಕಟ್ಟಡಗಳಿಗೆ ಬಳಸಿದ್ದಾರೆ.

ಮುಖ್ಯಮಂತ್ರಿಗಳು ಒಂದು ಬಾರಿ ಕೂಡಲಸಂಗಮದ ಮ್ಯೂಸಿಯಂ ವಿಕ್ಷಿಸುವ ಕಾರ್ಯ ಮಾಡಬೇಕು. ಅಂದಾಗ ಇಲ್ಲಿಯ ಯೋಜನೆಗಳು ಸ್ಥಿತಿಗತಿ ಅರ್ಥವಾಗುವುದು. ಸರ್ಕಾರ ಇಚ್ಛಾಶಕ್ತಿಯ ಮೂಲಕ ಸುಕ್ಷೇತ್ರ ಅಭಿವೃದ್ಧಿ ಪಡಿಸಬೇಕು.
ಮಹಾದೇಶ್ವರ ಸ್ವಾಮೀಜಿ, ಬಸವ ಧರ್ಮ ಪೀಠ ಕೂಡಲಸಂಗಮ
ಬಸವ ಅಂತರರಾಷ್ಟ್ರೀಯ ಕೇಂದ್ರದ ಬಳಿ ನಿರ್ಮಾಣವಾಗುತ್ತಿರುವ ಬೃಹತ್ ಕಟ್ಟಡ
ಬಸವ ಅಂತರರಾಷ್ಟ್ರೀಯ ಕೇಂದ್ರದ ಬಳಿ ನಿರ್ಮಾಣವಾಗುತ್ತಿರುವ ಬೃಹತ್ ಕಟ್ಟಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT