ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಮಿಸಿದ ದೂರ 198 ಕಿ.ಮೀ!

ಟ್ರೆಡ್‌ಮಿಲ್ ಮೇಲೆ 24 ಗಂಟೆ ಓಟ ಪೂರೈಸಿದ ಅರುಣ್ ಭಾರದ್ವಾಜ್
Last Updated 30 ನವೆಂಬರ್ 2019, 10:35 IST
ಅಕ್ಷರ ಗಾತ್ರ

ಬಾಗಲಕೋಟೆ: ನನ್ನ ಮಗಳಿಗೆ ಸ್ಫೂರ್ತಿ ತುಂಬಲು ಓಡಲು ಆರಂಭಿಸಿದ್ದೆನು. ಇದೇನು ದೊಡ್ಡ ಸಾಧನೆ ಅಲ್ಲ. ನಿಮಗೂ ಸಾಧ್ಯವಿದೆ. ಆರೋಗ್ಯದ ದೃಷ್ಟಿಯಿಂದ ನಿತ್ಯ ಎಲ್ಲರೂ ಓಡಿ...

ಇದು ಶುಕ್ರವಾರ ಸಂಜೆ 7 ಗಂಟೆಗೆ ಸತತ 24 ಗಂಟೆಗಳ ಓಟ ಪೂರೈಸಿದ ದೆಹಲಿಯ ಅಲ್ಟ್ರಾ ಮ್ಯಾರಥಾನ್ ರನ್ನರ್ ಅರುಣ್ ಭಾರದ್ವಾಜ್ ಅಲ್ಲಿ ನೆರೆದಿದ್ದವರಿಗೆ ಹೇಳಿದ ಮಾತು.

ಇಲ್ಲಿನ ವಿದ್ಯಾಗಿರಿಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ವೃತ್ತದಲ್ಲಿ ಟ್ರೆಡ್‌ಮಿಲ್ ಮೇಲೆ ಅರುಣ್ ಗುರುವಾರ ಸಂಜೆ ಓಟ ಆರಂಭಿಸಿದ್ದರು.ಬಾಗಲಕೋಟೆಯ ರಿಯಲ್ ಸ್ಫೋರ್ಟ್ಸ್ ಅಸೋಸಿಯೇಷನ್ ರನ್ ಫಾರ್ ಹೆಲ್ತ್ ಅಂಡ್ ಚಾರಿಟಿ ಹೆಸರಿನಲ್ಲಿ ಡಿ. 1ರಂದು ಹಮ್ಮಿಕೊಂಡಿರುವ ಹಾಫ್ ಮ್ಯಾರಥಾನ್ ಪ್ರಚಾರಾರ್ಥವಾಗಿ ಅರುಣ್ ಈ ಸಾಹಸಕ್ಕೆ ಮುಂದಾಗಿದ್ದರು.

ಓಟದ ಅಂತಿಮ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾಲೇಜು ವೃತ್ತದಲ್ಲಿ ಭಾರೀ ಸಂಖ್ಯೆಯಲ್ಲಿ ಕ್ರೀಡಾ ಪ್ರೇಮಿಗಳು ಜಮಾಯಿಸಿದ್ದರು. ಗಡಿಯಾರದ ಮುಳ್ಳು 7 ಗಂಟೆಗೆ ತಿರುಗುತ್ತಿದ್ದಂತೆಯೇ ಚಪ್ಪಾಳೆಯ ಸುರಿಮಳೆಯೊಂದಿಗೆ ‘ಭಾರತ್ ಮಾತಾಕಿ ಜೈ’ ಘೋಷಣೆ ಮುಗಿಲುಮುಟ್ಟಿತು. ಹೂವಿನ ಹಾರ ಹಾಕಿ ಸಂಭ್ರಮಿಸಿದರು. ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.

ಈ ಸುದೀರ್ಘ ಓಟದ ಅವಧಿಯಲ್ಲಿ ಅರುಣ್ ಆರು ಲೀಟರ್‌ನಷ್ಟು ಕಲ್ಲಂಗಡಿ, ಕಿತ್ತಳೆ ಸೇರಿದಂತೆ ಬೇರೆ ಬೇರೆ ಹಣ್ಣಿನ ಜ್ಯೂಸ್ ಸೇವಿಸಿದ್ದರು. 10 ಲೀಟರ್ ನೀರು ಕುಡಿದಿದ್ದರು. ಮೂರು ಬಾರಿ ಶೂ ಬದಲಾಯಿಸಿದ್ದರು. ಶೌಚಾಲಯಕ್ಕೆ ಹೋಗಬೇಕಾದಾಗ ಮಾತ್ರ ಓಟ ನಿಲ್ಲಿಸಿದ್ದರು. ಕಾಲಿನಲ್ಲಿ ಗುಳ್ಳೆಗಳು ಮೂಡಿದ್ದವು. ಟ್ರೆಡ್‌ಮಿಲ್‌ನಲ್ಲಿ ಅರುಣ್ ಕ್ರಮಿಸಿದ ದೂರ 198 ಕಿ.ಮೀ ಎಂದು ತೋರಿಸುತ್ತಿತ್ತು. ಈ ಹಿಂದೆ ತಮ್ಮದೇ ಹೆಸರಿನಲ್ಲಿದ್ದ171 ಕಿ.ಮೀ ದೂರ ಓಡಿದ್ದ ದಾಖಲೆಯನ್ನು ಅರುಣ್ ಮುರಿದರು.

ಓಟ ಮುಗಿದ ನಂತರ ತಜ್ಞವೈದ್ಯ ಡಾ.ಎಚ್.ಆರ್. ಕಟ್ಟಿ, ಅರುಣ್ ಅವರ ಆರೋಗ್ಯ ತಪಾಸಣೆ ಮಾಡಿದರು. ರಕ್ತದೊತ್ತಡ ಹಾಗೂ ಹೃದಯದ ಬಡಿತ ಸಾಮಾನ್ಯವಾಗಿದೆ ಎಂದು ತಿಳಿಸಿದರು.53 ವರ್ಷದ ಅರುಣ್ ಭಾರದ್ವಾಜ್ ದೆಹಲಿಯ ರಕ್ಷಣಾ ಸಚಿವಾಲಯದಲ್ಲಿ ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT