ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ನಗರ ನಕ್ಸಲ್’: ಕಾರ್ನಾಡ್ ಬಂಧನಕ್ಕೆ ಶ್ರೀರಾಮಸೇನೆ ಒತ್ತಾಯ

Last Updated 9 ಸೆಪ್ಟೆಂಬರ್ 2018, 11:55 IST
ಅಕ್ಷರ ಗಾತ್ರ

ಬಾಗಲಕೋಟೆ: ‘ನಕ್ಸಲೀಯರನ್ನು ಮಟ್ಟ ಹಾಕಲು ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಇಂತಹ ಸಂದರ್ಭದಲ್ಲಿಸಾಹಿತಿ ಗಿರೀಶ ಕಾರ್ನಾಡ್ ’ನಾನು ನಗರ ನಕ್ಸಲ್ಎಂದು ಬೋರ್ಡ್ ಹಾಕಿಕೊಳ್ಳುತ್ತಿದ್ದಾರೆ. ಈ ನಡೆ ಅವರಿಗೆ ನಾಚಿಕೆ ತರಬೇಕು’ ಎಂದು ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಆಕ್ರೋಶ ವ್ಯಕ್ತ ಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೈನಿಕರು ಹಾಗೂ ಪೊಲೀಸರ ರಕ್ತ ಹರಿಸುವ ನಕ್ಸಲರ ಪರವಾಗಿ ಬೋರ್ಡ್ ಹಾಕಿಕೊಳ್ಳುತ್ತಿದ್ದಾರೆ. ಅಂತಹವರ ಪರ ಇರುವುದಾಗಿ ಕಾರ್ನಾಡ್ ಹೇಳಿದ್ದರೂ ಅವರ ವಿರುದ್ಧ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ. ಪ್ರಕರಣ ದಾಖಲಾದರೂ ಇನ್ನೂ ಬಂಧಿಸಿಲ್ಲವೇಕೆ’ ಎಂದು ಪ್ರಶ್ನಿಸಿದರು.

‘ಹಿಂದೂ ಸಂಘಟನೆಯವರು ಭಾಷಣ ಮಾಡಿದರೆ ಪೋಲಿಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸುತ್ತಾರೆ. ಗೌರಿ ಲಂಕೇಶ ಹತ್ಯೆಯಲ್ಲಿ ಹಿಂದೂ ಸಂಘಟನೆಗಳ ಕೈವಾಡದ ಬಗ್ಗೆ ಸ್ಪಷ್ಟ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಬಂಧಿಸಲಾಗುತ್ತಿದೆ. ಪೊಲೀಸರ ಈ ನಡೆ ನೋಡಿದರೆ ದೇಶದಲ್ಲಿ ಎರಡು ಕಾನೂನುಗಳಿವೆಯೇ ಎಂಬ ಅನುಮಾನ ಮೂಡಿಸುತ್ತಿದೆ’ ಎಂದರು.

‘ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡುವ ಸಂಘಟನೆಗಳಿಗೆ ಪೊಲೀಸರು ಅನೇಕ ಷರತ್ತುಗಳನ್ನು ಹಾಕುತ್ತಿದ್ದಾರೆ. ಗಣಪತಿ ಕೂಡಿಸುವವರು ಉಗ್ರಗಾಮಿ ಸಂಘಟನೆಯವರಾ?. ಪೊಲೀಸರು ಷರತ್ತುಗಳನ್ನು ಬೇಷರತ್‌ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

‘ಸರ್ಕಾರ ಚಿಕ್ಕಮಗಳೂರಿನ ದತ್ತ ಪೀಠವನ್ನು ಈ ಕೂಡಲೇ ಹಿಂದೂಗಳಿಗೆ ಬಿಟ್ಟು ಕೊಡಬೇಕು ಎಂದು ಆಗ್ರಹಿಸಿ ಅಕ್ಟೋಬರ್ 28 ರಂದು ದತ್ತ ಪೀಠ ಚಲೋ ಅಭಿಯಾನದೊಂದಿಗೆ ಚಿಕ್ಕಮಗಳೂರಿಗೆ ಹೊರಡಲಿದ್ದೇವೆ’ ಎಂದರು.

‘ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ಕೇಂದ್ರ ಸರ್ಕಾರ ಕೂಡಲೇ ಮುಂದಾಗಬೇಕು. ಇಲ್ಲದಿದ್ದರೆ ರಾಮನ ಶಾಪದಿಂದ ಬಿಜೆಪಿ ಅಧಿಕಾರ ಕಳೆದುಕೊಳ್ಳ ಬೇಕಾಗುತ್ತದೆ. ಇದೇ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಮುಂದಾದರೆ ನಿಮ್ಮ ಮಾತನ್ನು ನಂಬುವಷ್ಟು ಹಿಂದೂಗಳು ಮುರ್ಖರಲ್ಲ’ ಎಂದರು.

ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಅಮರಣ್ಣವರ್, ಬೆಳಗಾವಿ ವಿಭಾಗದ ಪ್ರಮುಖ ಆನಂದ ಜಂಬಗಿಮಠ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT