ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಸಂಭ್ರಮ ಹೆಚ್ಚಿಸುವ ಶಿವನಬುಟ್ಟಿ

Last Updated 24 ಅಕ್ಟೋಬರ್ 2014, 6:56 IST
ಅಕ್ಷರ ಗಾತ್ರ

ಬೀಳಗಿ: ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿದ್ಧಪಡಿಸುತ್ತಿದ್ದ ಶಿವನಬುಟ್ಟಿಗಳು ಇಂದು ಮಾಯವಾಗತೊಡಗಿವೆ. ವಿವಿಧ ನಮೂನೆಯ ದೀಪದ ಬುಟ್ಟಿಗಳು ಅವುಗಳ ಜಾಗೆಯಲ್ಲಿ ಬಂದು ಕುಳಿತಿವೆ. ಇನ್ನೂ ನಮ್ಮ ಗ್ರಾಮೀಣ ಪರಂಪರೆಯನ್ನು ಬಿಟ್ಟುಕೊಡದ ಜನತೆ ದೀಪಾವಳಿ ಒಂದು ವಾರವಿದೆ ಎನ್ನುವಾಗಲೇ ಶಿವನಬುಟ್ಟಿ ಮಾಡಲು ಸಿದ್ಧತೆ ನಡೆಸುತ್ತಾರೆ.

ಬಿದಿರು ಕಡ್ಡಿ, ದಾರ, ಬಣ್ಣದ ಹಾಳೆ, ಅಂಟು (ಗೋಂದು) ಶಿವನಬುಟ್ಟಿ ಸಿದ್ಧಪಡಿಸಲು ಬೇಕಾದ ವಸ್ತುಗಳು. ನಾಲ್ಕು, ಆರು, ಎಂಟು, ಅರವತ್ನಾಲ್ಕು ಚೌಕೋನಗಳನ್ನು ಹೊಂದಿದ ಶಿವನಬುಟ್ಟಿಯನ್ನು ತಯಾರಿಸುವು­ದರಲ್ಲಿ ಗ್ರಾಮೀಣ ಭಾಗದ ಜನರು ಪ್ರವೀಣರು. ಚೌಕೋನದ ಒಂದು ಬುಟ್ಟಿ ತಯಾರಿಕೆಗೆ ಒಂದೇ ಅಳತೆಯ ಮೂವತ್ತೆರಡು ಬಿದಿರು ಕಡ್ಡಿಗಳು, ನಾಲ್ಕು ದಪ್ಪನೆಯ ಕಂಬಗಳು ಬೇಕು.

ತಲಾ ನಾಲ್ಕು ಕಡ್ಡಿಗಳನ್ನು ಸೇರಿಸಿ ಎಂಟು ಚೌಕೋನಗಳನ್ನು ಮಾಡುತ್ತಾರೆ. ನಾಲ್ಕು ಚೌಕೋನಗಳನ್ನು ಒಂದೊಂದು ಕಂಬಕ್ಕೆ ಜೋಡಿಸುತ್ತಾರೆ. ಹೀಗೆ ಜೋಡಿಸಿಟ್ಟ ನಾಲ್ಕೂ ಕಂಬಗಳನ್ನು ಎತ್ತ ನೋಡಿದರೂ ಚೌಕಾಕಾರದಲ್ಲಿ ಕಾಣುವಂತೆ ಕಟ್ಟುತ್ತಾರೆ. ಇನ್ನುಳಿದ ನಾಲ್ಕು ಚೌಕೋನಗಳಲ್ಲಿ ಎರಡನ್ನು ಕಂಬಗಳಿಗೆ ಹೊಂದಿಕೊಂಡಂತೆ ಒಂದಿಷ್ಟು ಅಂತರವಿಟ್ಟು ಕೆಳಗೆರಡು, ಮೇಲೆರಡು ಚೌಕೋನಗಳನ್ನು ಕಟ್ಟುತ್ತಾರೆ. ಕೆಳ ಭಾಗದ ಚೌಕೋನದಲ್ಲಿ ಹಣತೆ ಇಡಲು ಬರುವಂತೆ ನಾಲ್ಕಾರು ಕಡ್ಡಿಗಳನ್ನು ಜೋಡಿಸಿಟ್ಟು ಬಟ್ಟೆಯ ಶಿಂಬಿಯನ್ನು ಕಟ್ಟುತ್ತಾರೆ.

ಕಲಾತ್ಮಕವಾಗಿ ಕತ್ತರಿಸಿದ ಬಿಳಿ ಹಾಳೆಯ ಗೋಟುಗಳನ್ನು ಚೌಕೋನ­ಗಳು ಹಾಗೂ ತ್ರಿಕೋನಗಳು ಸಂಧಿಸುವಲ್ಲಿ ಅಂಟಿಸುತ್ತಾರೆ. ಜೊತೆಗೆ ಪ್ರತಿ ಮೂಲೆಗೂ ಸುಂದರವಾಗಿ, ವಿವಿಧ ಆಕಾರದಲ್ಲಿ ಕತ್ತರಿಸಿದ ಕಾಗದದ ಹೂವುಗಳನ್ನು ಅಂಟಿಸುತ್ತಾರೆ. ಕೆಳಭಾಗ­ದಲ್ಲಿ  ಹಾಳೆಯ ಪರಾಪರಿ ಅಂಟಿಸಿದರೆ ಶಿವನ ಬುಟ್ಟಿ ಸಿದ್ಧಗೊಂಡಂತೆ.

ಶಿವನಬುಟ್ಟಿ ತಯಾರಿಸುವಾಗಲೇ ನಾಲ್ಕೂ ಕಂಬಗಳಿಗೆ ಸಮನಾಗಿ ಮೇಲೆ ಹಾಗೂ ಕೆಳಗೆ ಎರಡೂ ಬದಿಗೆ ಸೂತ್ರ ಕಟ್ಟಿರುತ್ತಾರೆ. ಕಂಬಕ್ಕೆ ಕಟ್ಟಿದ ದಾರವನ್ನು ಒಂದು ಕೆಳಗಿನ ಸೂತ್ರಕ್ಕೂ, ಇನ್ನೊಂದನ್ನು ಮೇಲಿನ ಸೂತ್ರಕ್ಕೂ ಜೋಡಿಸುತ್ತಾರೆ. ಶಿವನ ಬುಟ್ಟಿಯಲ್ಲಿ ಹಣತೆ ಹಚ್ಚಿಟ್ಟು ಮೇಲೆ ಕಟ್ಟಿದ ಸೂತ್ರದ ಮುಖಾಂತರ ಮೇಲಕ್ಕೇರಿಸುತ್ತಾರೆ. ಬುಟ್ಟಿ ಕಂಬದ ತುದಿಗೆ ಹೋದಾಗ ದಾರವನ್ನು ಕಂಬಕ್ಕೆ ಸುತ್ತಿ ಕಟ್ಟಿ ಬಿಡುತ್ತಾರೆ. ಮುಂಜಾನೆ ಕೆಳಗಿನ ಸೂತ್ರದ ಮೂಲಕ ಇಳಿಸುತ್ತಾರೆ.

ಗ್ರಾಮೀಣ ಪ್ರದೇಶದಲ್ಲಿ ಶಿವನಬುಟ್ಟಿ­ಯನ್ನು ಹಚ್ಚುವುದು ಕಾರ್ತಿಕ ಶುದ್ಧ ಪ್ರತಿಪದೆಯಂದು. ಕೆಲವರು ಐದು ದಿನಗಳ ಕಾಲ (ಕಡಿ ಪಾಡ್ಯ), ಇನ್ನು ಕೆಲವರು ಹುಣ್ಣಿಮೆಯವರೆಗೆ, ಇನ್ನಷ್ಟು ಜನ ಇಡೀ ಕಾರ್ತಿಕ ಮಾಸಾಂತ್ಯದ­ವರೆಗೂ ನಿತ್ಯವೂ ಹಚ್ಚುತ್ತಾರೆ. ಮೊದಲ ದಿನ ಶಿವನಬುಟ್ಟಿ ಹಚ್ಚುವಾಗಲೂ, ಕೊನೆಯ ದಿನ ಇಳಿಸುವಾಗಲೂ ಕಂಬಕ್ಕೆ, ಹಣತೆಗೆ, ಶಿವನಬುಟ್ಟಿಗೆ ಪೂಜೆ ಸಲ್ಲಿಸಿ ನಮಿಸುವ ಆಚರಣೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT