ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಸೀಮೆಯ ರಮ್ಯ ತಾಣಗಳು

ನಮ್ಮ ಊರು ನಮ್ಮ ಜಿಲ್ಲೆ
Last Updated 18 ಆಗಸ್ಟ್ 2013, 11:17 IST
ಅಕ್ಷರ ಗಾತ್ರ

ಬರದ ನಾಡು   ಬಯಲು ಸೀಮೆ  ಎಂಬ ಹಣೆಪಟ್ಟಿಯಿಂದ ಗುರುತಿಸಿಕೊಂಡಿರುವ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಅಗಾಧ ಪ್ರಕೃತಿ ಸೌಂದರ್ಯದೊಂದಿಗೆ ಎಲೆಮರೆಯ ಕಾಯಿಯಂತಿರುವ ಅದೆಷ್ಟೋ ರಮ್ಯತಾಣಗಳನ್ನು ಹೊಂದಿದೆ.

ಮಲೆನಾಡು, ಘಟ್ಟಪ್ರದೇಶಕ್ಕೆ ಹೋಲಿಸಿದರೆ ಇಲ್ಲಿನ ಪ್ರಕೃತಿ ಸೊಬಗು ಸ್ವಲ್ಪ ಸಪ್ಪೆಯೆನಿಸಿದರೂ ಅಲ್ಲಿನ ರಮ್ಯತೆಗೆ ಸವಾಲೆಸೆಯುವಂತಿರುವ, ಮಳೆಗಾಲದಲ್ಲಿ ಹಸಿರು ಹೊದ್ದು ಮೈತುಂಬಿ ನಿಲ್ಲುವ ಬೆಟ್ಟಗಳ ಸಾಲು, ಮೈನವಿರೇಳಿಸುವ ಜಲಪಾತಗಳು, ಪಿಕ್‌ನಿಕ್ ತಾಣಗಳೂ ಇಲ್ಲಿವೆ.

ಬಾಗಲಕೋಟೆ ಸಮೀಪದ ಶಿರೂರಿನ ಪಡಿ, ಬಾದಾಮಿ ಸಮೀಪದ ಹುಲಿಗೆಮ್ಮನಕೊಳ್ಳ ಜಲಪಾತ, ಗುಡೂರ ಸಮೀಪದ ದಮ್ಮೂರ ದಿಡಗು, ಐಹೊಳೆ-ಕೆಲೂರ ನಡುವಿನ ಸಿದ್ಧನಕೊಳ್ಳ ಜಲಪಾತ, ಕೋಟೆಕಲ್ಲ ದಿಡಗು, ಪಟ್ಟದಕಲ್ಲಿನ ಸಮೀಪದ ಶಂಕರಲಿಂಗನ ದಿಡಗು ಕಣ್ಮನ ಸೆಳೆಯುವ ರಮ್ಯತಾಣಗಳಾಗಿವೆ.

ಮಳೆಯಾದ ಎರಡು ಮೂರು ತಿಂಗಳು ಮೈದುಂಬಿ ಹರಿಯುತ್ತ ನೋಡುಗರನ್ನು ಪುಳಕಗೊಳಿಸುವ ಇವು ಅಲ್ಪಾಯುಷಿಗಳು. ಜೂನ್‌ನಿಂದ ಅಕ್ಟೋಬರ್‌ವರೆಗೆ ರಭಸವಾಗಿ ಸುರಿದು ಜನವರಿ ವೇಳೆಗೆ ಸೊರಗಿಬಿಡುತ್ತವೆ.

ಬಾದಾಮಿಯಿಂದ 15 ಕಿ.ಮೀ ಪೂರ್ವಕ್ಕಿರುವ  ಜಾಲಿಹಾಳದ ಜೋಗ  ಎಂದು ಪ್ರಸಿದ್ಧಿ ಪಡೆದ ಹುಲಿಗೆಮ್ಮನಕೊಳ್ಳ ಸುಂದರ ಪ್ರಕೃತಿ ತಾಣವಾಗಿದೆ. ಬಾದಾಮಿ-ಪಟ್ಟದಕಲ್ಲ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಭದ್ರನಾಯಕನ ಜಾಲಿಹಾಳದಿಂದ 1 ಕಿ.ಮೀ ಕ್ರಮಿಸಿದರೆ ಕಣ್ಣು ಹಾಯಿಸುವಷ್ಟು ದೂರ ಹಸಿರುಬೆಟ್ಟದ ಮಧ್ಯೆ 200-220 ಅಡಿ ಎತ್ತರದಿಂದ ಧುಮುಕುವ ಹಾಲು ಬಣ್ಣದ ರಭಸ ನೀರು ಜೋಗದ ನೆನಪನ್ನು ತರಿಸುತ್ತದೆ. ಅಲ್ಲಿರುವ ಪುರಾತನ ಸಿದ್ಧಲಿಂಗೇಶ್ವರ ಗುಹೆ, ಸಪ್ತಮಾತೃಕೆಯರ ಮೂರ್ತಿಗಳು, ಸದಾ ನೆರಳಿನಿಂದ ಕೂಡಿದ ತಂಪಾದ ಪರಿಸರ ಎಲ್ಲವೂ ನೋಡುಗರನ್ನು ಭಾವಲೋಕಕ್ಕೆ ಕೊಂಡೊಯ್ಯುತ್ತವೆ.

ಗುಡೂರದಿಂದ ಕೆಲೂರ- ಐಹೊಳೆ ಮಾರ್ಗಮಧ್ಯೆ ಇರುವ ಐತಿಹಾಸಿಕ ಹಿನ್ನೆಲೆಯ ಸಿದ್ಧನಕೊಳ್ಳ ಹಸಿರು ಬೆಟ್ಟಗಳಿಂದ ಸುತ್ತುವರಿದ ರಮ್ಯ ತಾಣ. ಮಳೆಗಾಲದಲ್ಲಿ ಗುಡ್ಡದಲ್ಲಿನ ನೀರು ಎತ್ತರದಿಂದ ಧುಮುಕುತ್ತ ಜಲಪಾತ ಸೃಷ್ಟಿಯಾಗುತ್ತದೆ. ವಿಶಾಲವಾದ ಕಲ್ಲುಹಾಸು, ಜುಳು ಜುಳು ಹರಿವ ನೀರು, ಸಮೀಪದ ದೇವಸ್ಥಾನ ಎಲ್ಲವೂ ಆಕರ್ಷಣೀಯ. ಇಲ್ಲಿ ಮುಸಿಯಗಳ ಹಾವಳಿಯಿದೆಯಾದರೂ ಅಪಾಯಕಾರಿಯೇನಲ್ಲ.

ಬಾಗಲಕೋಟೆಯಿಂದ 12 ಕಿ.ಮೀ ದೂರದ ಸಿರೂರಿನ ಮೆಟ್ಟಿಲಿನಾಕಾರದ  ಪಡಿ ಗಳು, ಕೆರೆದಡದಲ್ಲಿ ನಿರ್ಮಾಣಗೊಂಡ ದೇವಾಲಯ ಎಲ್ಲವೂ ಆಕರ್ಷಣೀಯ.

ಕುಟುಂಬ ಸಮೇತ, ಶಾಲಾಮಕ್ಕಳನ್ನು ವನಭೋಜನಕ್ಕೆ, ಮೋಜಿಗಾಗಿ, ಒಂದಿಡೀ ದಿನ ಹಾಯಾಗಿ ಕಳೆಯಲು ಪ್ರಶಸ್ತವಾಗಿರುವ ಈ ಎಲ್ಲ ರಮ್ಯ ತಾಣಗಳಿಗೆ ಹೋಗಬೇಕಾದರೆ ಅಗತ್ಯ ಸಾಮಗ್ರಿ, ಸ್ವಂತ ವಾಹನ ಒಯ್ಯಬೇಕಾಗಿದೆ. ಮಳೆಗಾಲದ 3-4 ತಿಂಗಳು ಜನದಟ್ಟಣೆಯಿಂದ ಕೂಡಿರುವ, ಮೂಲ ಸೌಕರ್ಯಗಳ ಕೊರತೆ ಅನುಭವಿಸುತ್ತಿರುವ ಈ ರಮ್ಯ ತಾಣಗಳ ಬಗ್ಗೆ ಸೂಕ್ತ ಮಾಹಿತಿ ದೊರೆಯಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT