ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಳಗಿ: ಇಳುವರಿ ಕುಸಿತದ ಸಾಧ್ಯತೆ

ಕಾಳುಗಟ್ಟದ ಸಜ್ಜೆ ತೆನೆ; ಮಳೆಯ ನಿರೀಕ್ಷೆಯಲ್ಲಿ ರೈತಾಪಿ ಸಮುದಾಯ
Last Updated 10 ಸೆಪ್ಟೆಂಬರ್ 2016, 10:05 IST
ಅಕ್ಷರ ಗಾತ್ರ

ಬೀಳಗಿ: ತಾಲ್ಲೂಕಿನಲ್ಲಿ ಜೂನ್ ಮತ್ತು ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು  ಸುರಿದು ರೈತಾಪಿ ವರ್ಗದಲ್ಲಿ ಭರವಸೆಯನ್ನು ಮೂಡಿಸಿದ್ದ ಮಳೆರಾಯ ಆಗಸ್ಟ್‌ನಲ್ಲಿ ಸುರಿಯದೆ ಆತಂಕದಲ್ಲಿ ದೂಡಿದ್ದಾನೆ. ಜೊತೆಗೆ ಹಣೆಗೆ ಕೈ ಹಚ್ಚಿ ಮುಂದೆಮುಂದೆ ಸಾಗುತ್ತಿರುವ ಮೋಡಗಳನ್ನು ದಿಟ್ಟಿಸಿ ನೋಡುವಂತೆ ಮಾಡುತ್ತಿದ್ದಾನೆ.

‘ಭೂಮಿಯಲ್ಲಿ ಸಂಪೂರ್ಣ ತೇವಾಂಶ ಇರದ ಸ್ಥಿತಿಯಲ್ಲಿಯೇ ಹೆಸರು ಬೆಳೆ ಕಟಾವು ಮುಗಿದು ಹೋಯಿತು. ಕಾಳುಕಟ್ಟಲು ಬಂದಿರುವ ಸಜ್ಜೆತೆನೆಗಳು ಮಳೆಯ ಕೊರತೆಯಿಂದ ಸರಿಯಾಗಿ ಕಾಳು ಕಟ್ಟದೇ ಸಪ್ಪೆಯಾಗಿ ನಿಂತಿವೆ’ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
‘ಹೀಗಾಗಿ ಮುಂಗಾರು ಹಂಗಾಮಿನ ಎಲ್ಲ ಬೆಳೆಗಳ ಇಳುವರಿ ಶೇ 20ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ಕೃಷಿ ಇಲಾಖೆ ಮೂಲಗಳು ಹೇಳುತ್ತಿವೆ.

ಮೊದಲು ಸುರಿದ ಮಳೆಯ ಭರವಸೆಯ ಮೇಲೆ ತಾಲ್ಲೂಕಿನಲ್ಲಿ ಹೆಸರು 1250ಎಕರೆ, ಸಜ್ಜೆ 7250ಎಕರೆ, ತೊಗರಿ 1750 ಎಕರೆ, ಗೋವಿನಜೋಳ 8000 ಎಕರೆ, ಸೂರ್ಯಕಾಂತಿ 1125ಎಕರೆ, ಸೋಯಾಬೀನ್ 625 ಎಕರೆ, ಹತ್ತಿ 875ಎಕರೆಯಷ್ಟು ಬಿತ್ತನೆಯಾಗಿದೆ. ಈಗಾಗಲೇ ಹೆಸರು ಬೆಳೆ ಕಟಾವು ನಡೆದಿದೆ. ಇನ್ನೇನು ಒಂದು ವಾರದಲ್ಲಿ ಸಜ್ಜೆ ಬೆಳೆಯ ಕಟಾವು ಪ್ರಾರಂಭವಾಗುತ್ತದೆ. ಆದರೆ ಮೊದಲು ನಾವು ಭರವಸೆ ಇಟ್ಟುಕೊಂಡಷ್ಟು ಬೆಳೆ ನಮಗೆ ದಕ್ಕಲಾರದು ಎನ್ನುತ್ತಿದ್ದಾರೆ ಕೃಷಿ ಸಹಾಯಕ ನಿರ್ದೇಶಕ ಎಚ್.ಬಿ.ನ್ಯಾಮಗೌಡ.

‘ಮಗಿ (ಮಘಾ)ಮಳಿ ಒಂದೀಟು ನಮ್ಮ ಆಸರಕ್ಕ (ಆಶ್ರಯ)ಬರ್ಲಿಲ್ಲಾ, ಹುಬ್ಬಿ (ಹುಬ್ಬಾ) ಮಳಿ ಅರ್ದ ಮುಗಿಯಾಕ ಬಂತು. ಹಗಲೊತ್ತು ರಗಡ ಜಳಾ (ತಾಪಮಾನ) ಇರ್ತೈತಿ, ಸಂಜ್ಯಾಗೂತ್ಲೇ ತಂಗಾಳಿ ಬೀಸತೈತಿ, ತಂಗಾಳಿ ಬೀಸಿದ್ರ ಮಳಿ ಆಗಾಂದ್ರ ಹೆಂಗಾಗಬೇಕು, ಈಗ ಮಳಿಯಾದ್ರ ಮಾತ್ರ ಭೂಮಿ ಹಸಿಯಾಗಿ ಬಿಳಿಜ್ವಾಳ ಬಿತ್ತಾಕ ಅನುಕೂಲಾಗತೈತಿ, ಮ್ಯಾಗಿನಾಂವ (ದೇವರು) ಮಾಡಿದ್ಹಂಗ ಆಗ್ಲಿ, ನಮ್ಮ ಕಯ್ಯಾಗೇನೈತಿ’ ಎಂದು ಆಕಾಶದತ್ತ ಕೈಮಾಡುತ್ತಾರೆ ರೈತ ಅಪ್ಪಣ್ಣ ಕಣವಿ. 

‘ಆದ್ರೂ ಇನ್ನ ಮ್ಯಾಲೆ ನಮ್ಮೂ ಮಳಿ (ಹಿಂಗಾರಿ ಹಂಗಾಮಿನ)ಚಾಲೂ ಆಕ್ಕಾವ, ದೇವ್ರು ಕೈ ಬಿಡೂದಿಲ್ಲಾ, ದನಾಕರಾ ನೋಡ್ಯಾದ್ರೂ ಮಳಿ ಕೊಟ್ಟಕೊಡ್ತಾನ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಸಾಬು ಮನಿಕಟ್ಟಿ.

‘ಹಿಂಗಾರಿ ಹಂಗಾಮಿನ ಒಣ ಬೇಸಾಯದ 9200 ಎಕರೆ ಭೂಮಿ ಸದ್ಯಕ್ಕೆ ಮಳೆಗಾಗಿ ಬಾಯಿ ತೆರೆದುಕೊಂಡು ನಿಂತಿದೆ. ಜೊತೆಗೆ ಈಗಾಗಲೇ ಕಟಾವಿಗೆ ಬಂದು ನಿಂತಿರುವ ಮುಂಗಾರಿ ಹಂಗಾಮಿನ 10ಸಾವಿರ ಎಕರೆಯಷ್ಟು ಭೂಮಿ ಎರಡನೇ ಬೆಳೆಯ ಬಿತ್ತನೆಗೆ ಸಿದ್ಧಗೊಳ್ಳುತ್ತಿದೆ. ಆದರೆ ಎಲ್ಲವೂ ನಡೆಯುವುದು ಸುರಿಯಲಿರುವ ಹಿಂಗಾರಿ ಮಳೆಗಳ ಮೇಲೆ ಅವಲಂಬಿತವಾಗಿದೆ’ ಎಂದು ಹಿರಿಯ ರೈತರು ಅಭಿಪ್ರಾಯಪಡುತ್ತಾರೆ.

***
ಮೊದ ಮೊದ್ಲು ಸುರ್ದ ಮಳಿ ನೋಡಿ ಈ ವರ್ಷ ನಮ್ಮ ಬರಾ ಇಂಗಿ ಹೋತು ಅಂತಾ ಸಂತೋಷ ಆಗಿತ್ತು, ಯಾಕೋ ಮಳಿರಾಯ ಮುಂದ ಹೋಗಾಕಹತ್ತಿ ಮತ್ತ ಚಿಂತಿ ಮಾಡೂವಂಗ ಆಗೇತಿ ನೋಡ್ರಿ.
ಶಿವಾನಂದಯ್ಯ ಹಿರೇಮಠ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT