ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡ್ಲಿಗಿ: ಶುದ್ಧ ಕುಡಿಯುವ ನೀರಿಗೆ ಬರ

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ವಿಳಂಬ
Published 20 ಅಕ್ಟೋಬರ್ 2023, 4:36 IST
Last Updated 20 ಅಕ್ಟೋಬರ್ 2023, 4:36 IST
ಅಕ್ಷರ ಗಾತ್ರ

ಕೂಡ್ಲಿಗಿ: ತಾಲ್ಲೂಕಿನ ಗ್ರಾಮೀಣ ಭಾಗದ ಜನರಿಗೆ ಕುಡಿಯಲು ಫ್ಲೋರೈಡ್‍ಯುಕ್ತ ನೀರು ಸರಬರಾಜಾಗುತ್ತಿದೆ. ಅನೇಕ ಹಳ್ಳಿಗಳಲ್ಲಿ ನೀರು ಶುದ್ಧೀಕರಿಸುವ ಘಟಗಳಿದ್ದರೂ, ಜನರಿಗೆ ಉಪಯೋಗವಾಗುತ್ತಿಲ್ಲ.

ತಾಲ್ಲೂಕಿನಲ್ಲಿ ಜನರಿಗೆ ಶುದ್ಧ ನೀರನ್ನು ನೀಡುವ ಉದ್ದೇಶದಿಂದ ಆರಂಭವಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ವಿಳಂಬವಾಗುತ್ತಿದೆ. ಇದರಿಂದ ಕೊಳವೆ ಬಾವಿಗಳಿಂದಲೇ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

ತಾಲ್ಲೂಕಿನಲ್ಲಿ ಅಂತರ್ಜಲ ತೀವ್ರವಾಗಿ ಕುಸಿದಿರುವುದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗುವುದರ ಜೊತೆಗೆ ಕೊಳವೆ ಬಾವಿಗಳ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗುತ್ತದೆ.

ಅಂತರ್ಜಲ ಹೆಚ್ಚಳಕ್ಕೆ ಪೂರಕವಾಗಿರುವ ಇಲ್ಲಿನ ಕೆರೆಗಳು ನಿರ್ವಹಣೆ ಇಲ್ಲದೆ ಹೂಳು ತುಂಬಿವೆ. ಅಲ್ಲದೆ ಕ್ಷೇತ್ರದ ಮಹತ್ವಕಾಂಕ್ಷೆಯ 74 ಕೆರೆ ತುಂಬಿಸುವ ಯೋಜನೆಯೂ ನನೆಗುದಿಗೆ ಬಿದ್ದಿದೆ. ಬಹುಗ್ರಾಮ ಯೋಜನೆಡಿಯಲ್ಲಿ ತುಂಗಾಭದ್ರ ನದಿಯಿಂದ ಕ್ಷೇತ್ರದ 208 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಕಾಮಗಾರಿ ಆರಂಭಗೊಂಡು ನಾಲ್ಕೈದು ವರ್ಷ ಕಳೆದರೂ ವಿವಿಧ ಕಾರಣಗಳಿಂದಾಗಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

ಇದರ ಭಾಗವಾಗಿರುವ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮನೆ ಮನೆಗೆ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗಳು ಈಚೆಗೆ ಆರಂಭವಾಗಿವೆ. ಇದರಿಂದಾಗಿ ತಾಲ್ಲೂಕಿನ ಜನರು ಫ್ಲೋರೈಡ್‍ಯುಕ್ತ ನೀರನ್ನು ಕುಡಿಯಬೇಕಾದ ಸ್ಥಿತಿ ಇದೆ.

ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಏಜೆನ್ಸಿಗಳ ಮೂಲಕ 178 ನೀರು ಶುದ್ಧೀಕರಿಸುವ ಘಟಗಳನ್ನು ಸ್ಥಾಪನೆ ಮಾಡಲಾಗಿದೆ. ಆದರೆ ಇವುಗಳಲ್ಲಿ 32 ಘಟಕಗಳು ಹಾಳಾಗಿವೆ. ಪಟ್ಟಣದಲ್ಲಿಯೂ 18 ಘಟಗಳು ಸ್ಥಾಪನೆ ಮಾಡಿದ್ದು, ನೀರು ಸರಬರಾಜು ಇಲ್ಲದೆ 3 ಘಟಕಗಳನ್ನು ಮುಚ್ಚಲಾಗಿದೆ.

ಸರ್ಕಾರದಿಂದ ಸ್ಥಾಪನೆ ಮಾಡಿರುವ ಘಟಕಗಳಲ್ಲಿ ₹ 5ಕ್ಕೆ 20 ಲೀಟರ್ ನೀರು ಸಿಗುತ್ತದೆ. ಆದರೆ ಕೆಲವು ಘಟಕಗಳಲ್ಲಿನ ನೀರಿನ ಗುಣಮಟ್ಟದ ಬಗ್ಗೆ ಅನುಮಾನ ಇರುವುದರಿಂದ ಇಲ್ಲಿ ನೀರು ತರುವುದಕ್ಕೆ ಜನರು ಹಿಂಜರಿಯುತ್ತಿದ್ದಾರೆ. ಇದರಿಂದ ₹ 10ಕ್ಕೆ 20 ಲೀಟರ್ ನೀರನ್ನು ನೀಡಿ ಖಾಸಗಿ ಶುದ್ಧ ನೀರಿನ ಘಟಗಳ ಮಾಲೀಕರು ಲಾಭ ಮಾಡಿಕೊಳ್ಳುತ್ತಿದ್ದಾರೆ.

ಶುದ್ಧ ನೀರಿನ ಘಟಗಳು ನಿರಂತರವಾಗಿ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ಕೆಲ ದಿನ ಶುದ್ಧ ನೀರು ಇನ್ನು ಕೆಲ ದಿನ ಕೊಳವೆ ಬಾವಿ ನೀರನ್ನೇ ಕುಡಿಯಬೇಕು. ಇದರಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಅದ್ದರಿಂದ ಶುದ್ಧ ನೀರನ್ನು ಕುಡಿಯಲು ಮುಂದಾಗುವುದಿಲ್ಲ ಎಂದು ಅಗ್ರಹಾರದ ಬಸವರಾಜ ಹೇಳುತ್ತಾರೆ.

ಸದ್ಯ ತಾಲ್ಲೂಕಿನಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಮುಂದಿನ ದಿನಗಳಲ್ಲಿ 25 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಊಂಟಾಗಬಹುದು. ಸಮಸ್ಯೆ ನಿವಾರಣೆಗೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ.

–ವೈ. ರವಿಕುಮಾರ್ ಕಾರ್ಯನಿರ್ವಹಣಾಧಿಕಾರಿ ತಾಲ್ಲೂಕು ಪಂಚಾಯ್ತಿ ಕೂಡ್ಲಿಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT