ಕೊಟ್ಟೂರು: ವೀರಶೈವ ಲಿಂಗಾಯತ ಸಮುದಾಯವನ್ನು ಓಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು. ವೀರಶೈವ ಮಹಾಸಭಾದ ಬೇಡಿಕೆಯನ್ನು ಈಡೇರಿಸಿ ಅಧಿಕೃತ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸಬೇಕು ಎಂದು ರಂಭಾಪುರಿ ಪೀಠಾಧೀಶ ವೀರಸೋಮೇಶ್ವರ ಶಿವಾಚಾರ್ಯರು ಒತ್ತಾಯಿಸಿದರು.
ಪಟ್ಟಣದ ಅಗಡೇರ ಓಣಿಯಲ್ಲಿನ ವೀರಭದ್ರೇಶ್ವರ ಬೆಳ್ಳಿ ಮೂರ್ತಿ ಪ್ರತಿಸ್ಠಾಪನೆ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಪೂಜಾ ನೆರವೇರಿಸಿ ಆನಂತರ ಆಯೋಜಿಸಿದ್ದ ಧರ್ಮ ಜಾಗೃತಿ ಸಭೆಯಲ್ಲಿ ಭಾನುವಾರ ಆಶೀರ್ವಚನ ನೀಡಿದರು.
ಒಳ ಪಂಗಡಗಳಿಗೆ ಯಾವುದೇ ರೀತಿಯಲ್ಲಿ ತೊಡಕಾಗದು ಎಂಬ ಸದುದ್ದೇಶದಿಂದ ಮಹಾಸಭಾ ಓಬಿಸಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದೆ. ಇದಕ್ಕೆ ಎಲ್ಲಾ ಪೀಠಾಚಾರ್ಯರು ಮತ್ತು ಮಠಾಧೀಶರುಗಳು ಬೆಂಬಲ ವ್ಯಕ್ತಪಡಿಸದ್ದೇವೆ ಎಂದರು.
ಸರ್ವ ಜನಾಂಗಕ್ಕೆ ಒಳಿತಾಗುವ ಆಡಳಿತ ಸೂತ್ರಗಳನ್ನು ರೂಪಿಸಿ ಸಮಾಜದ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೊಳಿಸಿ ಕಾರ್ಯೋನ್ಮುಖವಾಗಬೇಕು ಎಂದು ಹೇಳಿದರು.
ಕಟ್ಟೇಮನಿ ಹಿರೇಮಠದ ಮಠಾಧೀಶ ಯೋಗಿರಾಜೇಂದ್ರ ಶಿವಾಚಾರ್ಯರು ಮಾತನಾಡಿ, ರಂಭಾಪುರಿ ಪೀಠದಲ್ಲಿ ರೇಣುಕಾಚಾರ್ಯರ 51 ಅಡಿ ಎತ್ತರದ ಶಿಲಾ ವಿಗ್ರಹವನ್ನು ಪ್ರತಿಷ್ಠಾಪಿಸುವ ಕಾರ್ಯವನ್ನು ಪೀಠಾಧೀಶರು ಕೈಗೊಂಡಿದ್ದು ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದರು.
ಅಗಡಿ ಹಿರೇಮಠ ಬಳಗದ ಎ.ಎಚ್.ಎಂ.ವೀರಯ್ಯ, ಎ.ಎಚ್.ಎಂ. ಪ್ರಭು, ಎ.ಎಚ್.ಎಂ.ಪ್ರಸಾದ್, ಅಡಕಿ ಮಂಜುನಾಥ ಮುಂತಾದ ಭಕ್ತರು ಪಾಲ್ಗೊಂಡಿದ್ದರು.