ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರವು ಇತ್ತೀಚೆಗೆ ಒಳ ಮೀಸಲಾತಿ ಜಾರಿಗೊಳಿಸುವ ತೀರ್ಮಾನ ತೆಗೆದುಕೊಂಡಿದೆ. ಆದರೆ, ಅಲೆಮಾರಿ ಸಮುದಾಯಗಳನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾ ವಿರೋಧ ವ್ಯಕ್ತಪಡಿಸಿದೆ.
ಈ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದ ಮಹಾಸಭಾ ಕಾರ್ಯಕರ್ತರು ಬಳಿಕ ಮುಖ್ಯಮಂತ್ರಿಯವರ ಹೆಸರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.
ಒಳಮೀಸಲಾತಿಯಿಂದ ಸ್ಪೃಶ್ಯ, ಅಸ್ಪೃಶ್ಯ ಸಮುದಾಯಗಳಿಗೆ ಅನುಕೂಲವಾಗಿದೆ. ಅಲೆಮಾರಿ ಸಮುದಾಯಗಳಿಗೆ ಶೇ 1ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಸಮಾಜ ಮುಖ್ಯವಾಹಿನಿಗೆ ಬರಬೇಕಾದರೆ ಕನಿಷ್ಠ ಶೇ 2ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿದರು.
ಅಲೆಮಾರಿ ಸಮುದಾಯಗಳ ಜನಸಂಖ್ಯೆ ಆಧರಿಸಿ ಮೀಸಲಾತಿ ನೀಡಬೇಕು. ಅನೇಕ ಸೂಕ್ಷ್ಮ, ಅತಿ ಸೂಕ್ಷ್ಮ ಸಮುದಾಯಗಳಿವೆ. ಹಾಗಾಗಿ ಅಲೆಮಾರಿಗಳ ಬೇಡಿಕೆಗೆ ಸ್ಪಂದಿಸಬೇಕು. ಬೇಡಿಕೆ ಕಡೆಗಣಿಸಿದ್ದಲ್ಲಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಣ್ಣ ಮಾರೆಪ್ಪ, ರಾಜ್ಯ ಘಟಕದ ಕಾರ್ಯಾಧ್ಯಕ್ಷ ವಿ.ಸಣ್ಣ ಅಜ್ಜಯ್ಯ, ಕಿನ್ನರಿ ಶೇಕಪ್ಪ, ಭದ್ರಿ, ಗಾಳೆಪ್ಪ, ಶಿವಕುಮಾರ್, ಹನುಮಂತ, ಪಕ್ಕೀರಪ್ಪ ಬಾದಿಗಿ, ಬಾಲಾಜಿ, ರಾಜಕುಮಾರ್ ಇತರರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.