ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಲಿಯಲ್ಲಿ ‘ಮಹಾಸತಿ’ ಕಲ್ಲು ಪತ್ತೆ

Published 27 ಡಿಸೆಂಬರ್ 2023, 15:41 IST
Last Updated 27 ಡಿಸೆಂಬರ್ 2023, 15:41 IST
ಅಕ್ಷರ ಗಾತ್ರ

ಕಂಪ್ಲಿ (ಬಳ್ಳಾರಿ): ಇಲ್ಲಿಯ ಕೋಟೆ ಪ್ರದೇಶಕ್ಕೆ ತೆರಳುವ ಬೆನಕನ ಕಾಲುವೆ ದಂಡೆ ಬಳಿ ‘ಮಹಾಸತಿ’ ಕಲ್ಲು ಪತ್ತೆಯಾಗಿದೆ.

ಬಿಳಿಕಾಡು ಕಲ್ಲಿನಲ್ಲಿ ಸುಂದರ ಉಡುಗೆ ತೊಟ್ಟ ಮಹಿಳೆಯೊಬ್ಬಳ ಚಿತ್ರ ಕೆತ್ತನೆ ಮಾಡಲಾಗಿದೆ. ಕಾಲಬಳಿಯ ಸೊಂಟದಲ್ಲಿ ಬಾಕು(ಕಿರುಗತ್ತಿ) ಸಿಕ್ಕಿಸಿಕೊಂಡ ವೀರನ ಚಿತ್ರವಿದೆ. ಮೇಲ್ಭಾಗದಲ್ಲಿ ಸತಿಯ ಬಲಗೈ ತುಂಡಾಗಿದ್ದು, ಯಾವುದೇ ಅಕ್ಷರಗಳು ಕಾಣುವುದಿಲ್ಲ. ಅದರಿಂದ ಇದು ಮಹಾಸತಿ ಕಲ್ಲು ಎಂದು ಗುರುತಿಸಲಾಗಿದೆ.

ಈ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ..ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ಇದು 17ನೇ ಶತಮಾನದ ಮಹಾಸತಿ ಕಲ್ಲು. ವಿಜಯನಗರತೋತ್ತರ ಕಾಲದ ಈ ಕಲ್ಲಿನಲ್ಲಿ ಅಕ್ಷರಗಳಿರುವುದಿಲ್ಲ. ಕೇವಲ ಮಹಾಸತಿಯನ್ನು ಚಿತ್ರಿಸಲಾಗಿದೆ. ತುರುಬು ಕಟ್ಟಿದ ಆಕರ್ಷಕ ಕೇಶ ಅಲಂಕಾರ, ದೊಡ್ಡ ಕಿವಿಯ ಆಭರಣ ತೊಟ್ಟಿದ್ದು, ಉಡುಪು ಧರಿಸಿದ್ದಾಳೆ, ಬಳೆ ಕಡಗ, ತೋಳು ಕಡಗ, ಕೊರಳಲ್ಲಿ ಹಾರ ಗೋಚರಿಸುತ್ತದೆ. ಬಲಗೈ ಎತ್ತಿ ಹರಸುತ್ತಿದ್ದು, ಎಡಗೈಯಲ್ಲಿ ನಿಂಬೆಹಣ್ಣು ಹಿಡಿದಿರುವುದರಿಂದ ಶುಭಸೂಚಕದ ಸಂಕೇತದಂತಿದೆ. ವೀರನೊಬ್ಬ ಹೋರಾಟದಲ್ಲಿ ಮರಣವನ್ನಪ್ಪಿದ್ದರಿಂದ ಪತ್ನಿ ಮಹಾಸತಿಯಾದ ಸನ್ನಿವೇಶವಿರಬಹುದು ಎಂದು ಅಭಿಪ್ರಾಯಪಟ್ಟರು.

ಇಲ್ಲಿಯ ತುಂಗಭದ್ರಾ ನದಿಯಿಂದ ಶಾತವಾಹನ ಕಂಪನಿಯವರು ಪೈಪ್ ಅಳವಡಿಸಿ ನೀರು ತೆಗೆದುಕೊಂಡು ಹೋಗಿದ್ದಾರೆ. ಕೆಲ ದಿನಗಳಿಂದ ಪೈಪ್ ದುರಸ್ತಿ ಕಾರ್ಯ ನಡೆಯುತ್ತಿದ್ದು, ಅಲ್ಲಿ ಈ ಮಹಾಸತಿ ಕಲ್ಲು ಪತ್ತೆಯಾಗಿದೆ. ಇದನ್ನು ಸಂರಕ್ಷಿಸುವಲ್ಲಿ ಪುರಸಭೆ ಆಡಳಿತ ಗಮನಹರಿಸಬೇಕು ಎಂದು ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ. ಹೇಮಯ್ಯಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಒತ್ತಾಯಿಸಿದರು.

‘ಮಹಾಸತಿ ಕಲ್ಲನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಸಂರಕ್ಷಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಕೆ. ದುರುಗಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT