ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಕಟ್ಟಡ ಶಿಥಿಲ; ಕುಸಿಯುವ ಭೀತಿ

ಆತಂಕದಲ್ಲಿ ಮಕ್ಕಳು, ಸಿಬ್ಬಂದಿ: ನೂನ ಕಟ್ಟಡ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ
Published 24 ಜನವರಿ 2024, 4:54 IST
Last Updated 24 ಜನವರಿ 2024, 4:54 IST
ಅಕ್ಷರ ಗಾತ್ರ

ತೋರಣಗಲ್ಲು: ಹೋಬಳಿಯ ವಡ್ಡು ಗ್ರಾಮದಲ್ಲಿನ 1ನೇ ಅಂಗನವಾಡಿ ಕೇಂದ್ರದ ಕಟ್ಟಡವು ಹಲವು ವರ್ಷಗಳಿಂದ ಸಂಪೂರ್ಣ ಶಿಥಿಲಗೊಂಡಿದ್ದು, ಬೀಳುವ ಹಂತಕ್ಕೆ ತಲುಪಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 1990ರಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಿಸಲಾಗಿದ್ದು, ಮಳೆಗಾಲದಲ್ಲಿ ಸೋರುತ್ತದೆ. ಕಳೆದ ಎರಡು ವರ್ಷಗಳಿಂದ ಕಟ್ಟಡದ ಸಿಮೆಂಟ್ ಕಾಂಕ್ರೀಟ್‌ನ ಪದರುಗಳು ಕಳಚಿ ಬೀಳುತ್ತಿವೆ. ಕಟ್ಟಡದ ಛಾವಣಿಯ ಕಾಂಕ್ರೀಟ್‌ನ ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಹೊರ ಚಾಚಿಕೊಂಡಿವೆ. ಗೋಡೆಗಳು ಬಿರುಕು ಬಿಟ್ಟಿದ್ದರಿಂದ ಮಕ್ಕಳು, ಸಿಬ್ಬಂದಿ ನಿತ್ಯ ಪ್ರಾಣಭಯದಲ್ಲೇ ಇರುವಂತಾಗಿದೆ.

ಈ ಕೇಂದ್ರದಲ್ಲಿ ಪ್ರಸ್ತುತ 12 ಗಂಡು, 12 ಹೆಣ್ಣು ಸೇರಿ ಒಟ್ಟು 24 ಮಕ್ಕಳು ದಾಖಲಾಗಿದ್ದಾರೆ. ಕಟ್ಟಡದ ದುಸ್ಥಿತಿ ಕಂಡ ಪಾಲಕರು, ತಮ್ಮ ಮಕ್ಕಳನ್ನು ಈ ಅಂಗನವಾಡಿ ಕೇಂದ್ರಕ್ಕೆ ಕಳಿಸಲು ಹಿಂದೇಟು ಹಾಕುತ್ತಿದ್ದು, ಕೇಂದ್ರದಲ್ಲಿ ಮಕ್ಕಳ ಸಂಖ್ಯೆಯೂ ಇಳಿಕೆಯಾಗಿದೆ.

ಅಂಗನವಾಡಿ ಕೇಂದ್ರವು ಶಿಥಿಲಗೊಂಡ ಕಟ್ಟಡದಲ್ಲೇ  ನಡೆಯುತ್ತಿದ್ದರೂ ಮಕ್ಕಳ ಬಗ್ಗೆ ಕಾಳಜಿವಹಿಸದೇ ಮೌನವಹಿಸಿದ ಇಲಾಖೆಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಟ್ಟಡ ಶಿಥಿಲಗೊಂಡು ಸಿಮೆಂಟ್‌ ಪದರುಗಳು ಮಕ್ಕಳು ಹಾಗೂ ಆಹಾರ ಪದಾರ್ಥಗಳ ಮೇಲೆ ಬೀಳುತ್ತದೆ. ಹಳೆಯ ಕಟ್ಟಡಕ್ಕೆ ಬಣ್ಣ ಬಳಿಯಲಾಗಿದೆ. ಮಕ್ಕಳ ಅನುಕೂಲಕ್ಕಾಗಿ ಆದಷ್ಟು ಶೀಘ್ರ ನೂತನ ಕಟ್ಟಡ ನಿರ್ಮಿಸಬೇಕು’ ಎಂದು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ನಾಗರತ್ನ ಒತ್ತಾಯಿಸಿದ್ದಾರೆ.

ತೋರಣಗಲ್ಲು ಹೋಬಳಿಯ ವಡ್ಡು ಗ್ರಾಮದಲ್ಲಿನ 1ನೇ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಗೊಂಡಿರುವುದು
ತೋರಣಗಲ್ಲು ಹೋಬಳಿಯ ವಡ್ಡು ಗ್ರಾಮದಲ್ಲಿನ 1ನೇ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಗೊಂಡಿರುವುದು

Quote - ಅಂಗನವಾಡಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು ಮಕ್ಕಳ ಹಾಗೂ ಸಿಬ್ಬಂದಿ ಹಿತದೃಷ್ಠಿಯಿಂದ ಕೇಂದ್ರವನ್ನು ತ್ವರಿತವಾಗಿ ಬೇರೆಡೆ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ರಂಗಸ್ವಾಮಿ ವಡ್ಡು ಗ್ರಾ.ಪಂ ಪ್ರಭಾರಿ ಪಿಡಿಒ

Quote - ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಗೊಂಡಿರುವ ವಿಷಯ ಗಮನಕ್ಕಿದ್ದು ಕಟ್ಟಡ ತೆರವುಗೊಳಿಸಿ ಅದೇ ಸ್ಥಳದಲ್ಲೇ ನೂತನ ಕಟ್ಟಡ ನಿರ್ಮಿಸಲಾಗುವುದು ಎಳೆ ನಾಗಪ್ಪ ಶಿಶು ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಂಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT