ಬಳ್ಳಾರಿ: ಕೃಷಿ ಉತ್ಪನ್ನ ಕಾಯ್ದೆ (ಎಪಿಎಂಸಿ) ತಿದ್ದುಪಡಿ ಪ್ರಸ್ತಾವ ಕೈಬಿಡುವಂತೆ ಬಳ್ಳಾರಿ ಜಿಲ್ಲಾ ಅಕ್ಕಿ ಮತ್ತು ಹತ್ತಿ ಗಿರಣಿಗಳ ಮಾಲೀಕರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ.
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಇದರಿಂದಾಗಿ ಅಕ್ಕಿ ಗಿರಣಿಗಳೂ ಸೇರಿದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಹೊರಗೆ ವಹಿವಾಟು ನಡೆಸುವ ಕೃಷಿ ಆಧಾರಿತ ಉದ್ಯಮಗಳಿಗೆ ತೊಂದರೆ ಆಗಲಿದೆ ಎಂದು ರಾಜ್ಯ ಅಕ್ಕಿ ಗಿರಣಿಗಳ ಮಾಲೀಕರ ಸಂಘದ ಉಪಾಧ್ಯಕ್ಷ ಕಂಪ್ಲಿ ಹೇಮಯ್ಯಸ್ವಾಮಿ ಹಾಗೂ ಬಳ್ಳಾರಿ ಜಿಲ್ಲಾ ಅಕ್ಕಿ ಗಿರಣಿಗಳ ಮಾಲೀಕರ ಸಂಘದ ಅಧ್ಯಕ್ಷ ಎನ್.ಜಿ. ಬಸವರಾಜ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕಾಯ್ದೆ ತಿದ್ದುಪಡಿ ಪ್ರಸ್ತಾವ ವಿರೋಧಿಸಿ ಇಂದು ಸಾಂಕೇತಿಕವಾಗಿ ಅಕ್ಕಿ ಗಿರಣಿಗಳನ್ನು ಬಂದ್ ಮಾಡಲಾಗಿದೆ. ಸರ್ಕಾರ ಈ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳುವ ಮುನ್ನ ನಮ್ಮನ್ನು ಮಾತುಕತೆಗೆ ಕರೆಯಬೇಕು. ಸರ್ಕಾರ ಚರ್ಚೆಗೆ ಕರೆಯಲಿದೆ ಎಂಬ ವಿಶ್ವಾಸವಿದೆ’ ಎಂದು ಅವರು ಹೇಳಿದರು.
‘ಎಪಿಎಂಸಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವವರಿಂದ ಶೇ 0.65ರಷ್ಟು ಸೇವಾ ಶುಲ್ಕ ಸುಂಕ ಸಂಗ್ರಹಿಸಲಾಗುತ್ತಿದೆ. ಇನ್ಮುಂದೆ ಮಾರುಕಟ್ಟೆ ಹೊರಗೆ ರೈತರಿಂದ ಕೃಷಿ ಉತ್ಪನ್ನ ಖರೀದಿಸುವವರಿಂದಲೂ ಶೇ 1.5ರಷ್ಟು ಸುಂಕ ಸಂಗ್ರಹಿಸುವ ಉದ್ದೇಶ ಸರ್ಕಾರಕ್ಕಿದೆ. ಮಾರುಕಟ್ಟೆ ಹೊರಗೆ ವ್ಯಾಪಾರ–ವಹಿವಾಟು ನಡೆಸುವ ಗಿರಣಿಗಳ ಮಾಲೀಕರು ಯಾವುದೇ ಸೌಕರ್ಯ ಬಳಸುವುದಿಲ್ಲ. ಹೀಗಿರುವಾಗ ನಾವು ಸೇವಾ ಶುಲ್ಕ ಏಕೆ ಕಟ್ಟಬೇಕು’ ಎಂದು ಹೇಮಯ್ಯಸ್ವಾಮಿ ಮತ್ತು ಬಸವರಾಜ ಕೇಳಿದರು.
ರಾಜ್ಯ ಸರ್ಕಾರ ಕೃಷಿ ಮಾರುಕಟ್ಟೆ ಹೊರಗೆ ಕೃಷಿ ಉತ್ಪನ್ನಗಳನ್ನು ಖರೀದಿಸುವ ಗಿರಣಿಗಳ ಮಾಲೀಕರಿಂದ ಸುಂಕ ಸಂಗ್ರಹ ಮಾಡುವುದರಿಂದ ಅಂತಿಮವಾಗಿ ರೈತರಿಗೆ ಹೊರೆಯಾಗಲಿದೆ ಎಂದು ಅವರು ಎಚ್ಚರಿಸಿದರು.
ರಾಜ್ಯದಲ್ಲಿ ಸುಮಾರು ಎರಡು ಸಾವಿರ ಅಕ್ಕಿ ಗಿರಣಿಗಳಿವೆ. ಈ ಉದ್ಯಮವನ್ನು ನಂಬಿಕೊಂಡು ಸಾವಿರಾರು ಕುಟುಂಬಗಳು ಬದುಕುತ್ತಿವೆ. ದೊಡ್ಡ ಉದ್ಯಮಗಳಿಗೆ ರತ್ನಗಂಬಳಿ ಹಾಸುವ ಸರ್ಕಾರ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಕತ್ತು ಹಿಸುಕಲು ಹೊರಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯವಾಗಿ ಬೆಳೆಯುತ್ತಿರುವ ಭತ್ತದ ಜತೆಗೆ ಹೊರ ರಾಜ್ಯಗಳಿಂದಲೂ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಖರೀದಿಸಿ ನಮ್ಮ ಗಿರಣಿಗಳಲ್ಲೇ ಸಂಸ್ಕರಿಸಿ, ರಾಜ್ಯದ ಜನರಿಗೆ ಲಭ್ಯವಾಗುವಂತೆ ಸಿಎಂಆರ್ ಮಿಲ್ ಪಾಯಿಂಟ್ ಪ್ರಕ್ರಿಯೆ ತ್ವರಿತಗೊಳಿಸಬೇಕು. ಇದರಿಂದ ಅನ್ನಭಾಗ್ಯ ಯೋಜನೆಗೆ ಅನುಕೂಲವಾಗಲಿದೆ ಎಂದು ಹೇಮಯ್ಯಸ್ವಾಮಿ ಮತ್ತು ಬಸವರಾಜ ಸಲಹೆ ಮಾಡಿದರು.
ವಿದ್ಯುತ್ ದರ ಏರಿಕೆಗೆ ವಿರೋಧ ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳಕ್ಕೆ ಅಕ್ಕಿ ಮತ್ತು ಅಕ್ಕಿ ಗಿರಣಿಗಳ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇಂಧನ ಹೊಂದಾಣಿಕೆ ಶುಲ್ಕ ₹2.64 ಅನ್ನು ನಾವು ಕಟ್ಟುವುದಿಲ್ಲ ಎಂದೂ ಅವರು ಪ್ರಕಟಿಸಿದರು. ಬಳ್ಳಾರಿ ನಗರ ಅಕ್ಕಿ ಗಿರಣಿ ಮಾಲೀಕರ ಸಂಘದ ಕಾರ್ಯದರ್ಶಿ ಶ್ರೀಕಾಂತ್ ಜಿಲ್ಲಾ ಹತ್ತಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಡಿ. ತಿಪ್ಪೇಸ್ವಾಮಿ ಗೌರವ ಅಧ್ಯಕ್ಷ ಎಸ್. ದೊಡ್ಡನಗೌಡ ಖಜಾಂಚಿ ರಾಘವೇಂದ್ರ ಚಾಗಿ ಬಿ. ನಾಗರಾಜ ಕೆ.ಪಿ. ಶ್ರೀನಿವಾಸುಲು ಮತ್ತಿತರರು ಇದ್ದರು. ಆನಂತರ ಗಿರಣಿ ಮಾಲೀಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.