ಹಗರಿಬೊಮ್ಮನಹಳ್ಳಿ: ಮಳೆಗಾಲದಲ್ಲೂ ಕಾವೇರಿದ್ದ ತಾಲ್ಲೂಕಿನಲ್ಲಿ 15 ದಿನಗಳಿಂದ ಸುರಿದ ಮಳೆಯಿಂದಾಗಿ ಭೂಮಿ, ರೈತರ ಮನಸ್ಸು ತಂಪಾಗಿದೆ. ಬರಗಾಲದ ಛಾಯೆಯಿಂದ ಹೊರಬಂದಿರುವ ತಾಲ್ಲೂಕಿನ ಎಲ್ಲೆಡೆ ಹಸಿರುಮಯ ವಾತಾವರಣವಿದೆ.
ತಾಲ್ಲೂಕಿನಲ್ಲಿ ಮುಂಗರು ಹಂಗಾಮಿನಲ್ಲಿ 41,823 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು, ಸದ್ಯ 36,064 ಹೆಕ್ಟೇರ್‌ನಲ್ಲಿ (ಶೇ 86ರಷ್ಟು) ಬಿತ್ತನೆಯಾಗಿದೆ. 15,030 ಹೆಕ್ಟೇರ್ ನೀರಾವರಿ ಪ್ರದೇಶವಿದೆ.
15 ದಿನಗಳಿಂದ ಬಿಟ್ಟೂ ಬಿಡದೆ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆಗಳು ಚುರುಕು ಪಡೆದಿವೆ. ಮಳೆಯಾಶ್ರಿತ ಭೂಮಿಯಲ್ಲಿ ರೈತರು ಮೆಕ್ಕೆಜೋಳ ಬಿತ್ತನೆಯಲ್ಲಿ ತೊಡಗಿದ್ದಾರೆ. 25,695 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 1,455 ಹೆಕ್ಟೇರ್‌ನಲ್ಲಿ ತೊಗರಿ, 2,408 ಹೆಕ್ಟೇರ್‌ನಲ್ಲಿ ಸಜ್ಜೆ, 1,120 ಹೆಕ್ಟೇರ್‌ನಲ್ಲಿ ರಾಗಿ, 2,557 ಹೆಕ್ಟೇರ್‌ನಲ್ಲಿ ಶೇಂಗಾ, 600 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ.
ವಿವಿಧ ರೈತ ಸಂಪರ್ಕ ಕೇಂದ್ರಗಳಲ್ಲಿ ಒಟ್ಟು 2,152.21 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನಿದ್ದು, 1,357.8 ಕ್ವಿಂಟಲ್ ವಿತರಣೆ ಆಗಿದೆ. ಇಲ್ಲಿವರೆಗೂ ಸರಾಸರಿ 226 ಮಿ.ಮೀ ಮಳೆ ಬಿದ್ದಿದೆ. ವಾಡಿಕೆ ಮಳೆ 256.6 ಮಿ.ಮೀ ಆಗಬೇಕಿತ್ತು. ಋತುಮಾನಕ್ಕೆ ಅನುಗುಣವಾಗಿ ನಿಯಮಿತವಾಗಿ ಸುರಿಯದೆ, ಏಕಕಾಲಕ್ಕೆ ಸುರಿದಿದೆ. ಬಿತ್ತನೆ ಮಾಡಿದ್ದ ಬೆಳೆಗಳೆಲ್ಲಾ ನಳನಳಿಸುತ್ತಿವೆ.
41,823 ಹೆಕ್ಟೇರ್ ಬಿತ್ತನೆ ಗುರಿ ಸದ್ಯ 36,064 ಹೆಕ್ಟೇರ್‌ನಲ್ಲಿ ಬಿತ್ತನೆ 25,695 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ
ಮಳೆ ಬಳಿಕ ದಿಢೀರ್ ಬಿಸಿಲು ಬಂದಿದ್ದರಿಂದ ಲದ್ದಿ ಹುಳುಗಳು ಉತ್ಪತ್ತಿಯಾಗಬಹುದು. ಆರಂಭದಿಂದಲೇ ಬೆಳೆಗಳಿಗೆ ಅಗತ್ಯ ಔಷೋಪಚಾರ ಮಾಡಿದರೆ ಸಮಸ್ಯೆ ತಪ್ಪಿಸಬಹುದುಎಚ್.ಸುನೀಲ್ ಕುಮಾರ ನಾಯ್ಕ ಸಹಾಯಕ ಕೃಷಿ ನಿರ್ದೇಶಕ
ಮುಂಗಾರು ತಡವಾದರೂ ಉತ್ತಮವಾಗಿ ಮಳೆ ಬಂದಿದೆ. ಆರಂಭದಲ್ಲಿ ಮಳೆಯಾಗದೇ ಭಯವಾಗಿತ್ತು ರೋಹಿಣಿ ಮಳೆ ಬಂದಿದ್ದರೆ ಬಿಳಿ ಜೋಳ ಬಿತ್ತನೆ ಮಾಡಬಹುದಿತ್ತುಕೆ.ರೇವಣಸಿದ್ದಪ್ಪ ರೈತ ಮಾಲವಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.