ಬಳ್ಳಾರಿ: ನಗರದ ಬ್ರೂಸ್‍ಪೇಟೆ ಠಾಣೆ ವ್ಯಾಪ್ತಿಯಲ್ಲಿ 2021 ರ ಮೇ 03ರಂದು ನಡೆದ ಇಸ್ಮಾಯಿಲ್ ಎಂಬಾತನ ಕೊಲೆ ಪ್ರಕರಣದಲ್ಲಿ ಪಿ. ಖಾಸೀಂ, ತುಕಾರಾಮ ಮತ್ತು ಮೆಹಮೂದ್ ಎಂಬುವರಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಎ.ಪಿ.ಎಂ.ಸಿಗೆ ಕೆಲಸಕ್ಕೆ ಹೋಗುವ ವಿಚಾರದಲ್ಲಿ ಮೃತ ಇಸ್ಮಾಯಿಲ್‍ನೊಂದಿಗೆ ಜಗಳ ತೆಗೆದು ದೂರವಾಣಿ ಮೂಲಕ ಕಣೆಕಲ್ ಬಸ್ ನಿಲ್ದಾಣಸಮೀಪ ಕರೆದು, ಮಚ್ಚು ಕತ್ತಿಯಿಂದ ಮುಖಕ್ಕೆ ಮತ್ತು ತಲೆಗೆ ಹೊಡೆದು ತಪ್ಪಿಸಿಕೊಂಡು ಹೋಗದಂತೆ ಕೈಕಾಲುಗಳನ್ನು ಹಿಡಿದು ಕೊಲೆ ಮಾಡಿದ್ದಾರೆಂದು ಪ್ರಕರಣ ದಾಖಲಿಸಿದ್ದ ಬ್ರೂಸ್ ಪೇಟೆ ಠಾಣೆ ತನಿಖಾಧಿಕಾರಿ ಆರೋಪಿತರ ವಿರುದ್ಧ ಸಾಕ್ಸ್ಯಗಳನ್ನು ಸಂಗ್ರಹಿಸಿ ದೋಷಾರೋಪ ಪಟ್ಟಿಯನ್ನು ತಯಾರಿಸಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಒಟ್ಟು 23 ಜನ ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಿ, ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿತರನ್ನು ತಪ್ಪಿಸ್ಥತರು ಎಂದು ಪರಿಗಣಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಎಚ್. ಪುಷ್ಪಾಂಜಲಿದೇವಿ ಕಲಂ 302 ಐಪಿಸಿ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ₹ 25 ಸಾವಿರ ದಂಡ ವಿಧಿಸಿದ್ದು.ಕಲಂ 114ರ ಐಪಿಸಿ ಅಡಿಯಲ್ಲಿ 7 ವರ್ಷ ಕಠಿಣ ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿದ್ದಾರೆ.
ಆರೋಪಿತರು ದಂಡ ಕೊಡಲು ತಪ್ಪಿದಲ್ಲಿ ಪುನಃ 3 ವರ್ಷಗಳ ಹೆಚ್ಚಿನ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿರುತ್ತಾರೆ. ಆರೋಪಿತರು ನೀಡಿದ ದಂಡದಲ್ಲಿ ₹ 1.05 ಲಕ್ಷ ಗಳನ್ನು ಮೃತನ ತಂದೆ ತಾಯಿಗೆ ನೀಡಬೇಕೆಂದು ಆದೇಶಿಸಿದ್ದಾರೆ.
ಕಲಂ 357(ಎ) ಸಿಅರ್‍ಪಿಸಿ ಅಡಿಯಲ್ಲಿ ಮೃತನ ಕುಟಂಬಕ್ಕೆ ಪರಿಹಾರ ನೀಡಬೇಕೆಂದು ಸಹ ಜಿಲ್ಲಾ ಕಾನೂನು ನೇರವು ಸಮಿತಿಗೆ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಂ.ಬಿ. ಸುಂಕಣ್ಣ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.