ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಸೊರಗುತ್ತಿವೆ ಇಂದಿರಾ ಕ್ಯಾಂಟಿನ್‌ಗಳು

Published 18 ಮಾರ್ಚ್ 2024, 4:41 IST
Last Updated 18 ಮಾರ್ಚ್ 2024, 4:41 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಪಾಲಿಕೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳು ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ಸಮಸ್ಯೆಗೆ ಅಧಿಕಾರಿಗಳು ಗುತ್ತಿಗೆದಾರರನ್ನು ಹೊಣೆ ಮಾಡಿದರೆ, ಗುತ್ತಿಗೆದಾರರು ಬಿಲ್‌ ಬಾಕಿ ಬಿಡುಗಡೆ ಮಾಡಿಲ್ಲ ಎಂದು ಅವಲತ್ತುಕೊಂಡಿದ್ದಾರೆ. ಇಬ್ಬರ ಹಗ್ಗಜಗ್ಗಾಟದಲ್ಲಿ ಕ್ಯಾಂಟಿನ್‌ಗಳು ಮಾತ್ರ ಬಡವಾಗುತ್ತಿದ್ದು, ಅದರ ನೇರ ಪರಿಣಾಮ ಜನರ ಮೇಲೆ ಬೀರಿದೆ.  

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡ) ಆವರಣ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್‌) ಆವರಣ, ಜಿಲ್ಲಾಸ್ಪತ್ರೆ ಆವರಣ, ಬೆಳಗಲ್‌ ಕ್ರಾಸ್‌ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಒಂದೊಂದು ಕ್ಯಾಂಟೀನ್‌ಗಳಿವೆ. ಈ ಪೈಕಿ ಬೆಳಗಲ್‌ ಕ್ರಾಸ್‌ ಮತ್ತು ಎಪಿಎಂಸಿ ಅವರಣದಲ್ಲಿರುವ ಕ್ಯಾಂಟೀನ್‌ಗಳಲ್ಲಂತೂ ಜನ ಒಂದು ಕ್ಷಣ ನಿಂತು ನೆಮ್ಮದಿಯಿಂದ ಉಣ್ಣಲೂ ಆಗದಂಥ ಪರಿಸ್ಥಿತಿ ಇದೆ. 

ಬೆಳಗಲ್‌ ಕ್ರಾಸ್‌ನಲ್ಲಿರುವ ಕ್ಯಾಂಟೀನ್‌ನನ್ನು ದೂಳು ಆವರಿಸಿದ್ದು, ಎಣ್ಣೆ ಜಿಡ್ಡಿನ ಕಪ್ಪು ಕಲೆಗಳಿಂದಲೇ ತುಂಬಿಕೊಂಡಿದೆ. ಹೊರಾಂಗಣದಲ್ಲಿ ಒಳಚರಂಡಿ ವ್ಯವಸ್ಥೆ ತೀವ್ರವಾಗಿ ಹದಗೆಟ್ಟಿದ್ದು, ಕೊಳಚೆ ನೀರು ಆವರಣದಲ್ಲೆಲ್ಲ ತುಂಬಿಕೊಂಡಿದೆ. ಕೈತೊಳೆಯಲೂ ಇಲ್ಲಿ ನಲ್ಲಿಗಳಿಲ್ಲದಂಥ ಪರಿಸ್ಥಿತಿ. ಜತೆಗೆ, ನೀರು ಶುದ್ಧೀಕರಣ ಯಂತ್ರಗಳು ಕೆಟ್ಟು ಮೂಲೆ ಸೇರಿದ್ದು, ಕುಡಿಯಲು ಚಿಕ್ಕ ಚಿಕ್ಕ ಕ್ಯಾನ್‌ಗಳಲ್ಲಿ ನೀರನ್ನು ಇಡಲಾಗಿದೆ. ಕ್ಯಾಂಟೀನ್‌ನಲ್ಲಿರುವ ಶೌಚಾಲಯಗಳಿಗೆ ಬೀಗ ಜಡಿಯಲಾಗಿದ್ದು, ಜನರ ಬಳಕೆಗೆ ಬಾರದಂತಾಗಿವೆ. ಶೌಚಾಲಯವನ್ನು ತೊಳೆಯುವ ಗೊಡವೆಯೇ ಬೇಡವೆಂದು ಹೀಗೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಇನ್ನು, ಎಪಿಎಂಸಿ ಆವರಣದಲ್ಲಿರುವ ಕ್ಯಾಂಟೀನ್‌ ಆವರಣ ತಿಪ್ಪೆಯಂತಾಗಿದ್ದು, ಜನ ಅತ್ತ ಮುಖ ಮಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯೂ ನಳಗಳನ್ನು, ಶೌಚಾಲಯಗಳನ್ನು ಬಂದ್‌ ಮಾಡಲಾಗಿದೆ. ಆವರಣದ ಸುತ್ತಲೂ ಮೇಕೆ, ಕುರಿ, ನಾಯಿಗಳು ಆಶ್ರಯ ಪಡೆದುಕೊಂಡಿವೆ. ಯಂತ್ರಗಳು ಕೆಟ್ಟು ಕುಳಿತಿವೆ.  ಬುಡ ಕಚೇರಿ ಬಳಿ ಇರುವ ಇಂದಿರಾ ಕ್ಯಾಂಟೀನ್‌ ಆವರಣ ಕುಡುಕರ ಅಡ್ಡೆಯಂತಾಗಿದ್ದು, ಸುತ್ತಲೂ ಮದ್ಯದ ಬಾಟಲ್‌ಗಳು ಹರಡಿಕೊಂಡಿವೆ. ವಿಮ್ಸ್ ಆವರಣದಲ್ಲಿರುವ ಕ್ಯಾಂಟೀನ್ ಉತ್ತಮ ಸ್ಥಿತಿಯಲ್ಲಿದೆಯಾದರೂ ಕುಡಿಯುವ ನೀರಿನ ಫಿಲ್ಟರ್ ಕೆಟ್ಟು ಹೋಗಿದೆ.‌ ಶೌಚಾಲಯವನ್ನು ಮುಚ್ಚಲಾಗಿದೆ. 

ಐದು ಕ್ಯಾಂಟಿನ್‌ಗಳಲ್ಲಿ ನಾಲ್ಕರಲ್ಲಿ ಎ.ಸಿ, ವಿದ್ಯುತ್‌ ದೀಪಗಳು ದುರಸ್ತಿಯಾಗಿವೆಯಾದರೂ, ಅವುಗಳನ್ನು ಸರಿಪಡಿಸಿಲ್ಲ. 

ನಗರ ವ್ಯಾಪ್ತಿಯ ಎಲ್ಲ ಕ್ಯಾಂಟೀನ್‌ಗಳಿಗೆ ಬುಡಾ ಆವರಣದಲ್ಲಿರುವ ಅಡುಗೆ ಮನೆಯಿಂದ ಆಹಾರ ಸರಬರಾಜು ಮಾಡಲಾಗುತ್ತದೆ. ಇದಕ್ಕಾಗಿ ನಿಯೋಜಿಸಲಾಗಿರುವ ವಾಹನ ಮುರುಕಲಾಗಿದೆ. ಈ ವಾಹನದ ಸೀಟುಗಳು ಕಿತ್ತು ಬಂದಿದ್ದರೆ, ಕ್ಯಾರಿಯರ್‌ಗೆ ಚಾವಣಿಗೆಯೇ ಇಲ್ಲ. ತುಕ್ಕು ಹಿಡಿದ ವಾಹನ ಹೊಲಸೆದ್ದು ಹೋಗಿದ್ದು, ಆಹಾರದ ಪಾತ್ರೆಗಳಿಗೆ ತಟ್ಟೆಯನ್ನೂ ಮುಚ್ಚದೇ ಸಾಗಿಸಲಾಗುತ್ತಿದೆ. 

2021ರಿಂದ ಬಿಲ್‌ ಬಾಕಿ

ಇಲ್ಲಿನ ಕ್ಯಾಂಟೀನ್‌ಗಳ ನಿರ್ವಹಣೆ ಮತ್ತು ಆಹಾರ ಪೂರೈಕೆ ಗುತ್ತಿಗೆಯನ್ನು ‘ಚೆಫ್‌ ಟಾಕ್‌‘ ಎಂಬ ಖಾಸಗಿ ಸಂಸ್ಥೆಯೊಂದು ಪಡೆದುಕೊಂಡಿದೆ. ಗುತ್ತಿಗೆ ಅವಧಿ ಜನವರಿಗೇ ಮುಕ್ತಾಯಗೊಂಡಿದ್ದು, 2021ರಿಂದಲೂ ಬಿಲ್‌ ಬಾಕಿ ಇದೆ ಎಂದು ಸಂಸ್ಥೆ ಹೇಳಿದೆ. ಗುತ್ತಿಗೆದಾರರಿಗೆ ಬಿಲ್‌ನ ಶೇ. 70ರಷ್ಟು ಮೊತ್ತವನ್ನು ಪಾಲಿಕೆ ಪಾವತಿಸಿದರೆ, ಶೇ. 30ರಷ್ಟನ್ನು ಜಿಲ್ಲಾಡಳಿತ ನೀಡುತ್ತಿದೆ. ಅಂದಾಜು ಮೂರರಿಂದ ನಾಲ್ಕು ಕೋಟಿಯಷ್ಟು ಹಣ ಬಿಡುಗಡೆಯಾಗಬೇಕಿದೆ ಎಂದು ಸಂಸ್ಥೆ ಹೇಳಿದೆ. ಈ ಹಿಂದೆ ಕ್ಯಾಂಟೀನ್‌ ಬಂದ್‌ ಆದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಜಿಲ್ಲಾಡಳಿತವೂ ಮುಂದುವರಿಕೆ ಆದೇಶ ನೀಡಿ ಕ್ಯಾಂಟೀನ್‌ ನಡೆಸುವಂತೆ ಸೂಚಿಸಿತು. ಆದರೆ, ಈ ವರೆಗೆ ಬಿಲ್‌ ಬಾಕಿ ಚುಕ್ತ ಮಾಡುವ ಕೆಲಸ ಮಾತ್ರ ಆಗಿಲ್ಲ. ಇದರಿಂದ ಕ್ಯಾಂಟೀನ್‌ ಮುನ್ನಡೆಸುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ ‘ಚೆಫ್‌ ಟಾಕ್‌‘ನ ಬಸವಲಿಂಗಪ್ಪ ಬಾದರ್ಲಿ.  

ಬಂದ್‌ ಆಗಿದ್ದ ಕ್ಯಾಂಟೀನ್‌ಗಳು: ಬಿಲ್‌ ಬಾಕಿ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಮತ್ತು ಹೊಸ ಟೆಂಡರ್‌ ಆಗದ ಕಾರಣಕ್ಕೆ ಈ ವರ್ಷದ ಆರಂಭದಲ್ಲಿ 15 ದಿನಗಳಿಗೂ ಹೆಚ್ಚು ಕಾಲ ಕ್ಯಾಂಟೀನ್‌ಗಳನ್ನು ಬಂದ್‌ ಮಾಡಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾದ ಬಳಿಕ, ಜಿಲ್ಲಾಡಳಿತದಿಂದ ಮುಂದುವರಿಕೆ ಆದೇಶ ನೀಡಿ ಕ್ಯಾಂಟೀನ್‌ಗಳನ್ನು ಮತ್ತೆ ಆರಂಭಿಸಲಾಗಿತ್ತು.

ನಳ, ಗೇಟ್‌ ಕಳವು: ಕೆಲ ಕ್ಯಾಂಟೀನ್‌ಗಳಲ್ಲಿ ಗೇಟ್‌ಗಳನ್ನು, ನಳಗಳನ್ನ ದುಷ್ಕರ್ಮಿಗಳು ಕಿತ್ತುಕೊಂಡ ಹೋದ ಉದಾಹರಣೆಗಳಿವೆ. ಕಿಟಕಿ ಗಾಜುಗಳನ್ನೂ ಒಡೆದು ಹಾಕಲಾಗಿದೆ. ಈ ಬಗ್ಗೆ ದೂರನ್ನೂ ದಾಖಲಿಸಲಾಗಿದೆ ಎಂದು ಕ್ಯಾಂಟೀನ್‌ ನಿರ್ವಾಹಕ ಮಹದೇವ್‌  ಪ್ರಜಾವಾಣಿಗೆ ತಿಳಿಸಿದ್ದಾರೆ.

ಎಪಿಎಂಸಿ ಯಾರ್ಡ್‌ನ ಕ್ಯಾಂಟೀನ್‌ ಆವರಣಕ್ಕೆ ರೈತರು ಕಸ ಸುರಿದು ಹೋಗುತ್ತಿದ್ದು, ಈ ಬಗ್ಗೆ ಎಪಿಎಂಸಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. 

ಮೂರು ವರ್ಷಗಳಿಂದ ಬಿಲ್ ಬಾಕಿ ಬಿಡುಗಡೆಯಾಗಿಲ್ಲ. ಐದೂ ಕ್ಯಾಂಟಿನ್‌ಗಳನ್ನು ನಿರ್ವಹಿಸಲು ತಿಂಗಳಿಗೆ ಅಂದಾಜು ₹16 ಲಕ್ಷ ಹಣ ಬೇಕು. ಇದರಿಂದ ಕ್ಯಾಂಟಿನ್‌ಗಳನ್ನು ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. 
– ಬಸವಲಿಂಗಪ್ಪ ಬಾದರ್ಲಿ,  ಗುತ್ತಿಗೆದಾರ 
ಎರಡು ಕ್ಯಾಂಟೀನ್‌ಗಳಲ್ಲಿ ಸಮಸ್ಯೆ ಇರುವುದು ಸತ್ಯ. ನಿತ್ಯವೂ ಪ್ರತಿ ಕ್ಯಾಂಟಿನ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆ ಸರಿಪಡಿಸಲಾಗುವುದು. ಜತೆಗೆ ಬಿಲ್‌ ಬಾಕಿ ಬಿಡುಗಡೆಯಾಗದಿರುವುದು ಸಮಸ್ಯೆಯಾಗಿದೆ. 
– ಮಹದೇವ್‌, ಕ್ಯಾಂಟೀನ್‌ಗಳ ನಿರ್ವಾಹಕ  
ಬಡವರ ಹಿತದೃಷ್ಟಿಯಿಂದ ತೆರೆಯಲಾಗಿರುವ ಕ್ಯಾಂಟೀನ್‌ಗಳ ಬಗ್ಗೆ ಆಡಳಿತ ವ್ಯವಸ್ಥೆ ಇಷ್ಟು ಅಸಡ್ಡೆ ತೋರಬಾರದು. ಜತೆಗೆ, ಪೂರೈಸುವ ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಆಗ ಮಾತ್ರ ಇದರ ಉದ್ದೇಶ ಈಡೇರುತ್ತದೆ. 
–ಯರ್ರಿಸ್ವಾಮಿ, ಆಟೋ ಚಾಲಕ, ಎಪಿಎಂಸಿ ಆವರಣ 
ಬಿಲ್‌ ಬಾಕಿ ಬಿಡುಗಡೆ ಮಾಡಲು ಸಹಿ ಹಾಕಲಾಗಿದೆ. ಅಷ್ಟಕ್ಕೂ ಗುತ್ತಿಗೆದಾರರು ಬಿಲ್‌ ಬಾಕಿ ವಿಚಾರ ಮುಂದಿಟ್ಟುಕೊಂಡು ಕ್ಯಾಂಟಿನ್‌ಗಳನ್ನು ನಿರ್ಲಕ್ಷಿಸುವಂತಿಲ್ಲ. ಮುಂದುವರಿಕೆ ಆದೇಶ ಇದ್ದ ಮೇಲೆ ಸೂಕ್ತ ರೀತಿ ನಡೆಸಬೇಕಾಗುತ್ತದೆ. 
– ಖಲೀಲ್‌ ಸಾಬ್‌, ಬಳ್ಳಾರಿ ಪಾಲಿಕೆ ಆಯುಕ್ತ 
ಕೆಟ್ಟುಹೋಗಿರುವ ನೀರು ಶುದ್ಧೀಕರಣ ಯಂತ್ರ 
ಕೆಟ್ಟುಹೋಗಿರುವ ನೀರು ಶುದ್ಧೀಕರಣ ಯಂತ್ರ 
ಎಪಿಎಂಸಿ ಯಾರ್ಡ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಕೈತೊಳೆಯುವ ನಳಗಳನ್ನು ಬಂದ್‌ ಮಾಡಿರುವುದು  
ಎಪಿಎಂಸಿ ಯಾರ್ಡ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಕೈತೊಳೆಯುವ ನಳಗಳನ್ನು ಬಂದ್‌ ಮಾಡಿರುವುದು  
ಬೆಳಗಲ್‌ ಕ್ರಾಸ್‌ನ ಇಂದಿರಾ ಕ್ಯಾಂಟ್‌ನ ಒಳಾಂಗಣದಲ್ಲಿ ಕಂಡ ದೃಶ್ಯ 
ಬೆಳಗಲ್‌ ಕ್ರಾಸ್‌ನ ಇಂದಿರಾ ಕ್ಯಾಂಟ್‌ನ ಒಳಾಂಗಣದಲ್ಲಿ ಕಂಡ ದೃಶ್ಯ 
ಎಪಿಎಂಸಿ ಯಾರ್ಡ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ನ
ಎಪಿಎಂಸಿ ಯಾರ್ಡ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT