ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಲೋಕಸಭಾ ಕ್ಷೇತ್ರ | ಸ್ಟಾರ್‌ ಪ್ರಚಾರಕರಿಂದ ರಂಗೇರಿದ್ದ ಕಣ

ಬಳ್ಳಾರಿ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ: ಘಟಾನುಘಟಿಗಳ ಪ್ರಚಾರ
ಹರಿಶಂಕರ್‌ ಆರ್‌.
Published 6 ಮೇ 2024, 5:27 IST
Last Updated 6 ಮೇ 2024, 5:27 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಇನ್ನೇನಿದ್ದರೂ ಕಡೇ ಗಳಿಗೆ ಕಸರತ್ತುಗಳದ್ದೇ ‘ಆಟ’! ಆದರೆ, ಕಣದಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾದ ಕಾಂಗ್ರೆಸ್‌ನ ಇ.ತುಕಾರಾಂ ಮತ್ತು ಬಿಜೆಪಿಯ ಬಿ.ಶ್ರೀರಾಮುಲು ಅವರ ಪರವಾಗಿ ಈ ವರೆಗೆ ಘಟಾನುಘಟಿ ನಾಯಕರು ಬಹಿರಂಗ ಪ್ರಚಾರ ನಡೆಸಿ, ಕಣವನ್ನು ಮತ್ತಷ್ಟು ರಂಗೇರಿಸಿದ್ದಾರೆ. 

ಕಾಂಗ್ರೆಸ್ ಪರವಾಗಿ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಸಚಿವರಾದ ಬಿ.ನಾಗೇಂದ್ರ, ಜಮೀರ್‌ ಆಹಮದ್‌ ಖಾನ್‌, ಸಂತೋಷ್‌ ಲಾಡ್‌, ಕ್ಷೇತ್ರ ವ್ಯಾಪ್ತಿಯ ಶಾಸಕರು ಸೇರಿದಂತೆ ಹಲವರು ಪ್ರಚಾರ ನಡೆಸಿದರು. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮೊದಲಾದವರ‍್ಯಾರೂ ಬಹಿರಂಗ ಪ್ರಚಾರಕ್ಕೆ ಬರಲಿಲ್ಲ.

ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ನಗರದಲ್ಲಿ ನಡೆದಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದರಾದರೂ, ಪ್ರಚಾರದಲ್ಲಿ ತೊಡಗಿಕೊಳ್ಳಲಿಲ್ಲ. ಸಚಿವ ರಾಮಲಿಂಗಾ ರೆಡ್ಡಿ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಅವರು ಪತ್ರಿಕಾಗೋಷ್ಠಿಗೆ ಸೀಮಿತರಾದರು. ಇನ್ನುಳಿದಂತೆ ಮಾಜಿ ಸಂಸದ ವಿ.ಎಸ್‌ ಉಗ್ರಪ್ಪ ಒಂದೆರಡು ಸಮಾವೇಶಗಳಲ್ಲಿ ಕಂಡರಾದರೂ, ಹೆಚ್ಚು ಪ್ರಚಾರ ನಡೆಸಲಿಲ್ಲ. 

ಬಿಜೆಪಿ ಪರವಾಗಿ ನರೇಂದ್ರ ಮೋದಿ ಹೊಸಪೇಟೆಯ ಬೃಹತ್‌ ಸಮಾ ವೇಶದಲ್ಲಿ ಪಾಲ್ಗೊಂಡರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವೀರಶೈವ ಲಿಂಗಾಯತ ನಾಯಕರ ಸಭೆ ನಡೆಸಿದರು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿ ಯೂರಪ್ಪ ಸ್ಥಳೀಯ ಸಮಾವೇಶದಲ್ಲಿ ಭಾಗವಹಿಸಿದರು. ಮೈತ್ರಿ ಪಕ್ಷ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸಮಾವೇಶದಲ್ಲಿ ಕಾಣಿಸಿಕೊಂಡರಾದರೂ, ಪ್ರಚಾರಕ್ಕೆಂದು ಕ್ಷೇತ್ರಕ್ಕೆ ಬರಲೇ ಇಲ್ಲ. ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಅವರೂ ಕ್ಷೇತ್ರದಲ್ಲಿ ಕಾಣಿಸಿಕೊಂಡರು. ಇನ್ನುಳಿದಂತೆ ಶಾಸಕ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ, ಪಕ್ಷದ ಮಾಜಿ ಶಾಸಕರು, ಶಾಸಕರು, ಜೆಡಿಎಸ್‌ನ ಕೆಲ ನಾಯಕರು ಪ್ರಚಾರ ನಡೆಸಿದರು. ಸಂಸದ ವೈ ದೇವೇಂದ್ರಪ್ಪ ಒಂದೆರಡು ಸಮಾವೇಶಗಳಲ್ಲಿ ಕಂಡರು. ಆದರೆ ಪ್ರಚಾರದಲ್ಲಿ ಭಾಗಿಯಾಗಲಿಲ್ಲ. 

ಸಭೆ–ಸಮಾವೇಶ: ಕಾಂಗ್ರೆಸ್‌, ಬಿಜೆಪಿ ಪಕ್ಷಗಳೆರಡೂ ಕ್ಷೇತ್ರದಲ್ಲಿ ಬಹಿರಂಗ ಮತ್ತು ಸ್ಥಳೀಯ ಮಟ್ಟದ ಸಮಾವೇಶ ನಡೆಸಿದವು. ಬಳ್ಳಾರಿ ಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬೃಹತ್‌ ಸಮಾವೇಶದಲ್ಲಿ ಭಾಗವಹಿಸಿ, ಬಿಜೆಪಿಯನ್ನು ಚೊಂಬು ಪಾರ್ಟಿ ಎಂದು ಮೂದಲಿಸಿದರು. ಹೊಸಪೇಟೆಯಲ್ಲಿ ನಡೆದ ಬಿಜೆಪಿಯ ಬೃಹತ್‌ ಸಮಾವೇಶದಲ್ಲಿ ನರೇಂದ್ರ ಮೋದಿಯವರೇ ಭಾಗವಹಿಸಿ ಶ್ರೀರಾಮುಲು ಪರವಾಗಿ ಪ್ರಚಾರ ಮಾಡಿದರು. ಉಳಿದಂತೆ ಉಭಯ ಪಕ್ಷಗಳಲ್ಲೂ ರೋಡ್‌ ಶೋ ನಡೆಸಿವೆ. 

ಕ್ಷೇತ್ರಕ್ಕೇ ಸೀಮಿತರಾದ ಶ್ರೀರಾಮುಲು: ಶ್ರೀರಾಮುಲು ಅವರ ಬಿಜೆಪಿಯ ಸ್ಟಾರ್‌ ಪ್ರಚಾರಕರಾಗಿದ್ದರೂ ಅವರು ಈ ಬಾರಿ ಕ್ಷೇತ್ರ ಬಿಟ್ಟು ಬೇರೆಕಡೆಗೆ ಹೋಗಲಿಲ್ಲ. ಅವರಿಗೆ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಕ್ಷೇತ್ರದಲ್ಲೇ ಉಳಿದು ಪ್ರಚಾರ ನಡೆಸಿದರು. 

ಗಮನ ಸೆಳೆದ ಪ್ರಚಾರಕರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಒಡೆಯರ್‌ ಅವರು ಚುನಾವಣೆಯ ಕಡೇ ಹಂತದಲ್ಲಿ ಬಳ್ಳಾರಿಗೆ ಆಗಮಿಸಿ ಪರಿಶಿಷ್ಟ ಜಾತಿ ಮಹಿಳೆಯೊಬ್ಬರ ಮನೆಗೆ ಭೇಟಿ ನೀಡಿದರು. ಈ ಮೂಲಕ ಪರಿಶಿಷ್ಟ ಜಾತಿ ಮತ ಸೆಳೆಯುವ ಪ್ರಯತ್ನ ಮಾಡಿದರು.

ಪ್ರಚಾರದಲ್ಲಿ ಕಾಣದ ನಾಸೀರ್: ಚುನಾವಣೆ ಹೊಸ್ತಿಲಲ್ಲಿರುವಾಗಲೇ ‘ಪಾಕಿಸ್ತಾನ್‌ ಜಿಂದಾಬಾದ್‌’ ಘೋಷಣೆ ಪ್ರಕರಣ ಕಾಂಗ್ರೆಸ್‌ಗೆ ಹಿನ್ನಡೆ ಸೃಷ್ಟಿಸಿತ್ತು. ಈ ವಿವಾದದ ಕೇಂದ್ರ ಬಿಂದುವಾಗಿದ್ದ ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಅವರು ಈ ಬಾರಿ ಪ್ರಚಾರದಲ್ಲಿ ಕಾಣಲೇ ಇಲ್ಲ.

ರಾಜ್ಯಸಭಾ ಚುನಾವಣೆ ಗೆದ್ದ ಬಳಿಕ ಮೊದಲ ಬಾರಿಗೆ ಬಳ್ಳಾರಿಗೆ ಬಂದ ಅವರನ್ನು ರೋಡ್‌ ಶೋ ಮೂಲಕ ಕರೆತರಲಾಯಿತು. ಇದೂ ಕೂಡ ವಿವಾದ ಸೃಷ್ಟಿಸಿತು. ರಾಹುಲ್‌ ಗಾಂಧಿ ಅವರು ಬಳ್ಳಾರಿಗೆ ಆಗಮಿಸಿದಾಗ ವೇದಿಕೆಯಲ್ಲಿ ಒಮ್ಮೆ ಮಾತ್ರ ನಾಸಿರ್‌ ಕಾಣಿಸಿಕೊಂಡಿದ್ದು ಬಿಟ್ಟರೆ ಅವರು ಇನ್ನೆಲ್ಲಿಯೂ ಅಷ್ಟಾಗಿ ಕಾಣಲೇ ಇಲ್ಲ.

ರೆಡ್ಡಿ ಅನುಪಸ್ಥಿತಿ ತುಂಬಿದ ಅರುಣಾಲಕ್ಷ್ಮಿ ಚುನಾವಣೆ ಘೋಷಣೆಯಾದ ಕೆಲ ದಿನಗಳಲ್ಲೇ ಶಾಸಕ ಜನಾರ್ದನ ರೆಡ್ಡಿ ಅವರ ಕೆಆರ್‌ಪಿಪಿ ಪಕ್ಷ ಬಿಜೆಪಿಯಲ್ಲಿ ವಿಲೀನಗೊಂಡಿತು.

ಇದು ಬಳ್ಳಾರಿಯ ಮಟ್ಟಿಗೆ ಬಿಜೆಪಿಗೆ ಹೆಚ್ಚಿನ ಬಲ ತಂದುಕೊಟ್ಟಿತು ಎಂದು ವಿಶ್ಲೇಷಿಸಲಾಯಿತು. ಆದರೆ, ಕೆಆರ್‌ಪಿಪಿ ನಾಯಕ ಜನಾರ್ದನ ರೆಡ್ಡಿ ಅವರು ಬಳ್ಳಾರಿಗೆ ಬರುವಂತಿರಲಿಲ್ಲ. ಆದರೆ, ಅವರ ಪತ್ನಿ ಲಕ್ಷ್ಮೀ ಅರುಣಾ ಅವರು ರೆಡ್ಡಿ ಸ್ಥಾನವನ್ನು ತುಂಬುವ ಪ್ರಯತ್ನ ಮಾಡಿದರು.

ಆದರೆ, ಜನಾರ್ದನ ರೆಡ್ಡಿ ಅವರು ಕಣದಲ್ಲಿದ್ದು, ರೂಪಿಸುತ್ತಿದ್ದ ತಂತ್ರಗಾರಿಕೆಗಳು ಬಿಜೆಪಿಗೆ ಸಿಗದಂತಾಯಿತು. ಬರೆದುಕೊಟ್ಟ ಬಾಷಣವೇ ಆದರೂ, ಅವುಗಳನ್ನು ಲಕ್ಷ್ಮೀ ಅರುಣಾ ಅವರು ಸಮಾವೇಶಗಳಲ್ಲಿ ಅತ್ಯಂತ ಪ್ರಕರವಾಗಿ ನಿರೂಪಿಸಿದ್ದು ಗಮನಸೆಳೆಯಿತು. 

ಸಮಸ್ಯೆ ಗೌಣ: ರಾಜಕೀಯವೇ ಎಲ್ಲ...

ಮಾಜಿ ಸಚಿವ ಬಿ. ಶ್ರೀರಾಮುಲು ಅವರು ನನಗೆ ರಾಜಕೀಯ ಪುನರ್ಜನ್ಮ ನೀಡಿ ಎಂದು ಮತದಾರರಲ್ಲಿ ಬೇಡಿದರೆ, ಈ ಚುನಾವಣೆಯನ್ನು ಗೆದ್ದು ಸೋನಿಯಾ ಗಾಂಧಿ ಅವರಿಗೆ ಉಡುಗೊರೆಯಾಗಿ ನೀಡುವುದಾಗಿ ಕಾಂಗ್ರೆಸ್‌ ನಾಯಕರು ಚುನಾವಣೆ ಪ್ರಚಾರಗಳಲ್ಲಿ ಹೇಳುತ್ತಾ ಬಂದರು. ಆದರೆ, ಕ್ಷೇತ್ರದ ಸಮಸ್ಯೆಗಳನ್ನು ಯಾರೊಬ್ಬರೂ ಗಂಭೀರವಾಗಿ ಚರ್ಚಿಸಲೇ ಇಲ್ಲ. ಹೀಗಾಗಿ ಬಳ್ಳಾರಿಯ ಸಮಸ್ಯೆಗಳು ತೆರೆ ಮರೆಗೆ ಸರಿದವು. ರಾಜಕೀಯ ಭಾಷಣಗಳೇ ಪ್ರಾಧಾನ್ಯತೆ ಪಡೆದುಕೊಂಡವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT