ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ನಗರಸಭೆ ಸದಸ್ಯ, ಪತ್ನಿ ವಿರುದ್ಧ ಕೇಸ್‌

ಸರ್ಕಾರಿ ಸ್ವತ್ತು ಮಾರಾಟಕ್ಕೆ ಯತ್ನ, ₹16 ಲಕ್ಷ ವಂಚನೆ ಪ್ರಕರಣ
Last Updated 1 ಸೆಪ್ಟೆಂಬರ್ 2022, 11:31 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಿವೇಶನ ಮಾರಾಟಕ್ಕೆ ₹16.28 ಲಕ್ಷ ಪಡೆದು ವಂಚಿಸಿದ ದೂರಿನ ಮೇರೆಗೆ ನಗರಸಭೆಯ ಮಾಜಿ ಸದಸ್ಯ ಡಿ. ವೇಣುಗೋಪಾಲ್‌ ಹಾಗೂ ಅವರ ಪತ್ನಿ ಎಲ್‌. ಭಾಗ್ಯ ಡಿ. ವೇಣುಗೋಪಾಲ್‌ ವಿರುದ್ಧ ಇಲ್ಲಿನ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಣಿಪೇಟೆಯ ಸಂತೋಷ್‌ ಕುದುರೆ ಮೇಟಿ ಎಂಬುವರು ಕೊಟ್ಟಿರುವ ದೂರಿನ ಮೇರೆಗೆ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಆ. 27ರಂದು ಪ್ರಕರಣ ದಾಖಲಾಗಿದೆ.

ನಾನು ನಿವೇಶನ ಖರೀದಿಸಲು ಓಡಾಡುತ್ತಿರುವಾಗ 2000ನೇ ಇಸ್ವಿಯಲ್ಲಿ ಎಲ್‌. ಭಾಗ್ಯ ಮತ್ತು ಡಿ. ವೇಣುಗೋಪಾಲ್‌ ಎಂಬುವರು ಶಿರಸಿನಕಲ್ಲು ಪ್ರದೇಶದಲ್ಲಿ ತಮ್ಮ ಹೆಸರಿನಲ್ಲಿ ನಿವೇಶನ ಇರುವುದಾಗಿ ತಿಳಿಸಿ, ತೋರಿಸಿದರು. ಸ್ನೇಹಿತರೊಂದಿಗೆ ಹೋಗಿ ಖರೀದಿಗೆ ಸಮ್ಮತಿ ಸೂಚಿಸಿ, ₹16 ಲಕ್ಷಕ್ಕೆ ಖರೀದಿಸಲು ಮಾತುಕತೆ ಅಂತಿಮಗೊಳಿಸಿ, ಅದೇ ದಿನ ಭಾಗ್ಯ ಅವರ ಹೆಸರಿನ ಖಾತೆಗೆ ₹2 ಲಕ್ಷ ಹಾಕಿದೆ. 2021ರ ಜುಲೈ 17ರ ವರೆಗೆ ಹಂತ ಹಂತವಾಗಿ ಭಾಗ್ಯ ಅವರ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಿದೆ ಎಂದು ಸಂತೋಷ್ ದೂರಿನಲ್ಲಿ ತಿಳಿಸಿದ್ದಾರೆ.

‘ನಾನೇ ಮಾಜಿ ನಗರಸಭೆ ಸದಸ್ಯನಾಗಿದ್ದು, ನಗರಸಭೆಯಲ್ಲಿ ಮ್ಯುಟೇಶನ್‌ ಮಾಡಿಸಿಕೊಡುತ್ತೇನೆಂದು ₹28,000 ಸಾವಿರ ಪಡೆದು, ಅರ್ಜಿಗಳ ಮೇಲೆ ನನ್ನ ಸಹಿ ಪಡೆದರು. ನಿವೇಶನ ಸರ್ಕಾರಿ ಸ್ವತ್ತು ಎಂಬುದು ನಂತರ ಗೊತ್ತಾಯಿತು. ನೋಂದಣಿ ರದ್ದುಪಡಿಸಿ ನನ್ನ ಹಣ ವಾಪಸ್ ನೀಡಬೇಕೆಂದು ಕೇಳಿದೆ. ‘ನಿನಗೆ ಹಣ ಕೊಡುವುದಿಲ್ಲ. ನನ್ನ ಹೆಂಡತಿ ಮೂಲಕ ನಿನ್ನ ಮೇಲೆ ಜಾತಿ ನಿಂದನೆ ಕೇಸ್‌ ಹಾಕಿಸಿ ಕೋರ್ಟ್‌ಗೆ ಅಲೆದಾಡುವಂತೆ ಮಾಡುತ್ತೇನೆ’ ಎಂದು ಹೇಳಿ ವೇಣುಗೋಪಾಲ್‌ ಪ್ರಾಣ ಬೆದರಿಕೆ ಹಾಕಿದರು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಸ್ವತ್ತು ನನಗೆ ಮಾರಾಟ ಮಾಡಿ ಮೋಸ ಮಾಡಿದ್ದಾರೆ. ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಸಂತೋಷ್‌ ಕುದುರೆ ಮೇಟಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ತನಿಖೆ ಮುಂದುವರೆದಿದೆ.

‘ನಗರದ ವಿವಿಧ ಕಡೆಗಳಲ್ಲಿ ಸರ್ಕಾರಕ್ಕೆ ಸೇರಿದ್ದ 24 ಎಕರೆ ಜಾಗವನ್ನು ಉಳಿಸಲು ಮಾಜಿ ನಗರಸಭೆ ಸದಸ್ಯ ಡಿ. ವೇಣುಗೋಪಾಲ್‌ ಅವರು ಸಹಕಾರ ನೀಡಿದ್ದಾರೆ. ಅವರಿಗೆ ಕೃತಜ್ಞತೆ ತಿಳಿಸುತ್ತೇನೆ’ ಎಂದು ನಗರಸಭೆ ಪೌರಾಯುಕ್ತ ಮನೋಹರ್‌ ಅವರು ಇತ್ತೀಚೆಗೆ ಹೇಳಿದ್ದರು. ಈ ವಿಷಯವನ್ನು ವೇಣುಗೋಪಾಲ್‌ ಹಾಗೂ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈಗ ಅವರ ವಿರುದ್ಧವೇ ಸರ್ಕಾರಿ ಸ್ವತ್ತಿನ ನಕಲಿ ದಾಖಲೆ ಸೃಷ್ಟಿಸಿ, ವಂಚಿಸಿದ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT