ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಲೂಗಡ್ಡೆ ಚಿಪ್ಸ್‌ನಿಂದ ಬದಲಾದ ಬದುಕು

ಫಾಲೋ ಮಾಡಿ
Comments

ಹಗರಿಬೊಮ್ಮನಹಳ್ಳಿ: ಆಲೂಗಡ್ಡೆ ಚಿಪ್ಸ್‌ ತಯಾರಿಸಿ, ಮಾರುಕಟ್ಟೆ ಸೃಷ್ಟಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆತಾಲ್ಲೂಕಿನ ನಂದಿಪುರದ ಬಿ.ಎಂ. ಗುರುಲಿಂಗಯ್ಯ ಹಾಗೂ ಅವರ ಪತ್ನಿ ಬಸಮ್ಮ.

ಮೂರು ವರ್ಷಗಳಿಂದ ಈ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಅವರು, ತಾಲ್ಲೂಕಿನ ಹಲವು ಗ್ರಾಮಗಳು ಸೇರಿದಂತೆ ಅನ್ಯ ತಾಲ್ಲೂಕುಗಳಿಗೂ ಚಿಪ್ಸ್‌ ಪೂರೈಸುತ್ತಾರೆ. ಗುಣಮಟ್ಟ ಕಾಪಾಡಿಕೊಂಡಿರುವುದರಿಂದ ಅವರ ಬಳಿಗೆ ಹೋಗಿ ಕೆಲವು ವ್ಯಾಪಾರಸ್ಥರು ಚಿಪ್ಸ್‌ ಖರೀದಿಸಿ, ಕೊಂಡೊಯ್ಯುತ್ತಾರೆ. ವರ್ಷದಿಂದ ವರ್ಷಕ್ಕೆ ಅವರ ಉದ್ಯಮ ಬೆಳೆಯುತ್ತಿದೆ.

₹25 ಸಾವಿರ ಬಂಡವಾಳದೊಂದಿಗೆ ಆಲೂಗಡ್ಡೆ ಚಿಪ್ಸ್‌ ತಯಾರಿಸಿ, ಮಾರಾಟ ಮಾಡಲು ಶುರು ಮಾಡಿದರು. ಅದು ಕೈಹಿಡಿದ ನಂತರ ಬಾಳೆಕಾಯಿ ಚಿಪ್ಸ್‌ ಕೂಡ ಮಾಡಲು ಆರಂಭಿಸಿದರು. ಆರಂಭದಲ್ಲಿ ಪತಿ, ಪತ್ನಿ ಇಬ್ಬರೂ ಆಲೂಗಡ್ಡೆ ಸಿಪ್ಪೆ ಸುಲಿದು, ಎಣ್ಣೆಯಲ್ಲಿ ಕರಿಯುತ್ತಿದ್ದರು. ಬೇಡಿಕೆ ಹೆಚ್ಚಾದಂತೆಲ್ಲ ಕೆಲಸವೂ ಹೆಚ್ಚಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯಿಂದ ₹1.50 ಲಕ್ಷ ಪಡೆದು, ಅದರಲ್ಲಿ ₹1.10 ಲಕ್ಷದಲ್ಲಿ ಸಿಪ್ಪೆ ಸುಲಿಯುವ ಯಂತ್ರ ಖರೀದಿಸಿದರು. ಸಣ್ಣ ಘಟಕ ಆರಂಭಿಸಿ, ಅಲ್ಲೇ ಕೆಲಸ ಆರಂಭಿಸಿದರು. ಪ್ರತಿ ತಿಂಗಳು ಎರಡು ಕ್ವಿಂಟಲ್‌ ಚಿಪ್ಸ್‌ ತಯಾರಿಸಿ, ಮಾರುಕಟ್ಟೆಗೆ ಪೂರೈಸುತ್ತಾರೆ.

‘ಮೂರು ಕೆ.ಜಿ. ಆಲೂಗಡ್ಡೆಯಿಂದ ಕೆ.ಜಿ. ಚಿಪ್ಸ್‌ ತಯಾರಾಗುತ್ತದೆ. ಕೆ.ಜಿ. ಚಿಪ್ಸ್‌ ತಯಾರಿಸಲು ₹100ರಿಂದ ₹120 ವೆಚ್ಚ ತಗಲುತ್ತದೆ. ಮಾರುಕಟ್ಟೆಯಲ್ಲಿ ₹180ರಿಂದ ₹190ರ ವರೆಗೆ ಮಾರಾಟ ಮಾಡುತ್ತೇವೆ’ ಎಂದು ಗುರುಲಿಂಗಯ್ಯ ತಿಳಿಸಿದರು.

‘ನಾನು ಒಣ ಚಿಪ್ಸ್‌ಗೆ ಖಾರದ ಪುಡಿ ಮತ್ತು ಉಪ್ಪು ಮಿಶ್ರಣ ಮಾಡಿದರೆ, ನನ್ನ ಹೆಂಡತಿ 40 ಗ್ರಾಂನ 25 ಪ್ಯಾಕೆಟ್‌ಗಳನ್ನು ಕೆ.ಜಿ ಬಂಡಲ್‌ ಮಾಡುತ್ತಾರೆ. ಇದುವರೆಗೂ ಮಾರುಕಟ್ಟೆಯ ಸಮಸ್ಯೆ ಆಗಿಲ್ಲ. ಅನೇಕರು ಮುಂಗಡ ಹಣ ನೀಡಿ ಬೇಡಿಕೆ ಸಲ್ಲಿಸುತ್ತಾರೆ’ ಎಂದು ತಿಳಿಸಿದರು.

‘ತಿಂಗಳಿಗೆ ₹16ರಿಂದ ₹18 ಸಾವಿರ ಆದಾಯ ಬರುತ್ತಿದೆ. ಸಂಘ ನೀಡಿದ ಶೇಕಡ 50ರಷ್ಟು ಸಾಲ ಮರುಪಾವತಿ ಮಾಡಿದ್ದೇನೆ.ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸ್ವಸಹಾಯ ಸಂಘಗಳ ಸದಸ್ಯರು ಸ್ವಯಂ ಉದ್ಯೋಗದ ಅಧ್ಯಯನ ಪ್ರವಾಸಕ್ಕಾಗಿ ಇಲ್ಲಿಗೆ ಬಂದು ಮಾಹಿತಿ ಪಡೆದುಕೊಂಡು ಹೋಗುತ್ತಿದ್ದಾರೆ’ ಎಂದು ಗುರುಲಿಂಗಯ್ಯ ವಿವರಿಸಿದರು.

ಗುರುಲಿಂಗಯ್ಯ ಅವರಿಗೆ ಸ್ವಂತ ಕೃಷಿ ಭೂಮಿ ಇದೆ. ಆದರೆ, ಕೃಷಿಯಲ್ಲಿ ಕೈಸುಟ್ಟುಕೊಂಡ ನಂತರ ಕೆಲಕಾಲ ಕಂಪನಿಯೊಂದರಲ್ಲಿ ಕೆಲಸ ಮಾಡಿದರು. ಜೀವನ ನಿರ್ವಹಣೆ ಕಷ್ಟವಾದಾಗ ಚಿಪ್ಸ್‌ ಉದ್ದಿಮೆಯತ್ತ ಮುಖ ಮಾಡಿದರು. ಅದರಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT