ಹೊಸಪೇಟೆ (ವಿಜಯನಗರ): ಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಮಾದರಿ ನೀತಿ ಸಂಹಿತೆ ಜಾರಿ ಕುರಿತು ಸಿಐಡಿ ಕಾನೂನು ಸಲಹೆಗಾರ ಮಹೇಶ್ ವೈದ್ಯ ಅವರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ನೋಡಲ್ ಅಧಿಕಾರಿಗಳು ಹಾಗೂ ಪೊಲೀಸರಿಗೆ ಪಾಠ ಮಾಡಿದರು.
ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ದಾಖಲಿಸುವಾಗ ಹಿಂದಿನ ಪ್ರಕರಣಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಹೀಗಾದಾಗ ವಿಷಯವನ್ನು ಸುಲಭವಾಗಿ ನಿಭಾಯಿಸಬಹುದು. ಮತದಾರರನ್ನು ಸೆಳೆಯಲು ವಿವಿಧ ರೀತಿಯ ಉಡುಗೊರೆ ಕೊಡಲಾಗುತ್ತದೆ. ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹಣ ಸಾಗಾಟ ಮಾಡಲಾಗುತ್ತದೆ. ಚೆಕ್‌ಪೋಸ್ಟ್‌ಗಳಲ್ಲಿರುವ ಅಧಿಕಾರಿಗಳು, ಸಿಬ್ಬಂದಿ ಕೂಲಂಕಷವಾಗಿ ವಾಹನಗಳನ್ನು ಪರಿಶೀಲಿಸಿ ಆಯಾ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಅಧಿಕಾರಿಗಳು ದಾಖಲಿಸುವ ಪ್ರಕರಣಗಳನ್ನು ಆಧರಿಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಹಣ ಅಥವಾ ಉಡುಗೊರೆಗಳ ರೂಪದಲ್ಲಿ ಸಿಗುವ ಸಾಮಗ್ರಿ ಅಥವಾ ಹಣದ ಮೂಲ, ಅದರ ಮಾಲೀಕತ್ವದ ಮಾಹಿತಿ ಜೊತೆಗೆ ಅದನ್ನು ಯಾರಿಗೆ ಸಾಗಿಸಲು ಮುಂದಾಗಿದ್ದರು ಎಂಬ ಮಾಹಿತಿಯು ಮುಖ್ಯವಾಗಿರುತ್ತದೆ. ಸಮಗ್ರ ತನಿಖೆಗೆ ಅವಶ್ಯವಿರುವ ಮಾಹಿತಿಯನ್ನು ದೂರು ದಾಖಲಿಸುವ ವೇಳೆ ದಾಖಲಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್., ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ ಜಿ., ಯೋಜನಾ ನಿರ್ದೇಶಕ ಚಂದ್ರಶೇಖರ್, ಉಪವಿಭಾಗಧಿಕಾರಿ ಸಿದ್ದರಾಮೇಶ್ವರ, ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಜಿ.ವಿ. ಇತರರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.