ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧರ್ಮೋಜಯ’ ಕಥಾಸಂಕಲನ ಬಿಡುಗಡೆ

Last Updated 20 ನವೆಂಬರ್ 2022, 10:12 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಪ್ರಾಧ್ಯಾಪಕ ದಯಾನಂದ ಕಿನ್ನಾಳ ಅವರು ಬರೆದಿರುವ ‘ಧರ್ಮೋಜಯ’ ಕಥಾ ಸಂಕಲನ ಬಿಡುಗಡೆ ಸಮಾರಂಭ ಭಾನುವಾರ ನಗರದಲ್ಲಿ ನಡೆಯಿತು.

ಸಾಹಿತಿ ಡಾ. ಅರವಿಂದ ಪಾಟೀಲ ಮಾತನಾಡಿ, ದಯಾನಂದ ಕಿನ್ನಾಳ ಅವರು ತಾವು ಕಂಡುಂಡ ನೋವಿನ ನೈಜಚಿತ್ರಗಳು ಕಥಾರೂಪಕಗಳಾಗಿ ಕಥಾ ಸಂಕಲನದಲ್ಲಿ ಗಮನ ಸೆಳೆಯುತ್ತವೆ. ಗ್ರಾಮೀಣ ಪರಿಸರದಲ್ಲಿ ಅನುಭವಿಸಿದ ಕಷ್ಟ ಮತ್ತು ನಷ್ಟಗಳನ್ನೇ ಕಥೆಗಳಾಗಿ ಕಿನ್ನಾಳರು ಬರೆದಿದ್ದಾರೆ. ನಮ್ಮ ತಲೆಮಾರಿನ ಎಲ್ಲಾ ಓದುಗರು ಗ್ರಾಮೀಣ ಪರಿಸರದಿಂದಲೇ ಬೆಳೆದು ಬಂದವರಾಗಿರುವುದರಿಂದ ಅಲ್ಲಿನ ಪರಿಸರದಲ್ಲಿ ಅನುಭವಿಸಿದ ನೋವುಗಳು ನಮ್ಮ ಜೀವನದಲ್ಲೂ ನಡೆದಿವೆ ಏನೋ ಎನ್ನುವಂತೆ ಕಥೆಗಳು ಕಣ್ಣುಕಟ್ಟುತ್ತಾ ಹೋಗುತ್ತವೆ ಎಂದರು.

‘ಅಪ್ಪ-ಅವ್ವ’ ಎನ್ನುವ ಕಥೆಯಲ್ಲಿ ತಂದೆಯ ವಿಶೇಷ ಕಸುಬಾದ ಕುಲಾಯಿ, ಮಚ್ರದಾನಿ (ಸೊಳ್ಳೆಪರದೆ), ಕಸೂತಿಯಿಂದ ಕೂಡಿದ ಅಜ್ಜಿಯ ಅಡಿಕೆ ಚೀಲ, ಐದು ಪದರಿನ ಬಟ್ಟೆ ಕೈಚೀಲ ಹೊಲೆದು ಮಾರುಕಟ್ಟೆಗೆ ಹೋಗಿ ಮಾರಿ, ಬಂದಂತಹ ರೊಕ್ಕದಲ್ಲಿ ದೊಡ್ಡ ಕುಟುಂಬವನ್ನು ಸಾಕುವುದು ಎಷ್ಟು ಕಷ್ಟ ಎನ್ನುವ ನೋವಿನ ಚಿತ್ರಣಗಳು ಅನಾವರಣಗೊಂಡಿವೆ ಎಂದು ತಿಳಿಸಿದರು.

ಲೇಖಕಿ ಸುಧಾ ಚಿದಾನಂದಗೌಡ ಮಾತನಾಡಿ, ಒಬ್ಬ ಲೇಖಕ ತನ್ನೊಳಗಿನ ಭಾವನೆಗಳನ್ನು, ಅಕ್ಷರ ರೂಪಕ್ಕೆ ತಂದು, ಪುಸ್ತಕ ಪ್ರಕಟಿಸುವುದು ಹೆರಿಗೆಯಾದಷ್ಟೇ ಕಷ್ಟದ ಸಂಗತಿ. ಇನ್ನು ಆ ಮಗು ಎಲ್ಲರ ಆಕರ್ಷಣೆಗೆ ಒಳಗಾದಾಗ ತಾಯಿಗೆ ಆಗುವ ಸಂತೋಷದಂತೆ ಲೇಖಕನಿಗೂ ಆಗುತ್ತದೆ. ಈ ಕಾರಣಕ್ಕಾಗಿಯೇ ಸಂವಾದಗಳು ನಡೆಯಬೇಕು. ಆ ಪುಸ್ತಕವನ್ನು ಪರಾಮರ್ಶಿಸಬೇಕು. ಅದರ ಗುಣಾವಗುಣಗಳನ್ನು ಚರ್ಚಿಸಬೇಕು. ಆಗ ಬರವಣಿಗೆಯ ರೂಪು-ರೇಷೆಗಳು ಮೌಲ್ಯ ಹೊಂದುತ್ತವೆ ಎಂದರು.

ಬಂಡಾಯ ಸಾಹಿತ್ಯ ಸಂಘಟನೆಯ ಅಬ್ದುಲ್ ಹೈ, ಪಿ.ಆರ್.ವೆಂಕಟೇಶ್, ಉಪನ್ಯಾಸಕ ಎಚ್.ಎಂ. ನಿರಂಜನ, ಶಿಕ್ಷಕಿ ಟಿ.ಎಂ. ಉಷಾರಾಣಿ, ಲೇಖಕಿ ಭಾರತಿ ಮೂಲಿಮನಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT