ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಗ್ರಾಮದಲ್ಲಿ ಇಬ್ಬರ ಜೀವ ಉಳಿಸಿದ ನೆನಪು!

Last Updated 30 ಜೂನ್ 2018, 17:14 IST
ಅಕ್ಷರ ಗಾತ್ರ

ಬಳ್ಳಾರಿ: ಇಂದು ವೈದ್ಯರ ದಿನಾಚರಣೆ. ಈ ಸಂದರ್ಭದಲ್ಲಿ ಬಳ್ಳಾರಿ ನಗರದ ಇಬ್ಬರು ವೈದ್ಯರ ನಿಸ್ಪೃಹ ಸೇವೆ, ಹಲವು ವೈದ್ಯರು ಆಹ್ವಾನಿಸಿಕೊಳ್ಳುತ್ತಿರುವ ಸಂಪಾದನೆಯ ಒತ್ತಡದ ಕುರಿತು ನಮ್ಮ ಮುಖ್ಯ ವರದಿಗಾರ ಕೆ.ನರಸಿಂಹಮೂರ್ತಿ ಬೆಳಕು ಚೆಲ್ಲಿದ್ದಾರೆ.

‘ಮಳೆಯೊಂದರ ರಾತ್ರಿ ವಿದ್ಯುದಾಘಾತಕ್ಕೆ ಸಿಲುಕಿ, ಸತ್ತೇಹೋದರೆಂದು ನಂಬಲಾಗಿದ್ದ ಸಹೋರರಿಬ್ಬರಿಗೆ ತುರ್ತು ಚಿಕಿತ್ಸೆ ನೀಡಿ ಅವರನ್ನು ಪಾರು ಮಾಡಿದ ನೆನಪು ಈಗಲೂ ಹಚ್ಚಹಸುರಾಗಿದೆ..’ –ನಗರದ ಜಿಲ್ಲಾಸ್ಪತ್ರೆಯ ಕ್ಷಕಿರಣ ತಜ್ಞ ಡಾ.ವಿ.ಚಂದ್ರಬಾಬು ಆ ದಿನಗಳನ್ನು ಸ್ಮರಿಸಿಕೊಂಡರು.

1985ರಲ್ಲಿ ಎಂಬಿಬಿಎಸ್ ಪಾಸಾದ ಬಳಿಕ ಅವರಿಗೆ ವೈದ್ಯ ಹುದ್ದೆ ದೊರಕಿದ ಕೂಡಲೇ ಸಿರುಗುಪ್ಪ ತಾಲ್ಲೂಕಿನ ಕಟ್ಟಕಡೆಯ ಕುಗ್ರಾಮ ರಾವಿಹಾಳ್‌ಗೆ ವರ್ಗಾವಣೆಯಾಗಿತ್ತು. ಆಗಿನ ಪ್ರಾಥಮಿಕ ಆರೋಗ್ಯ ಘಟಕಕ್ಕೆ ತೆರಳಿದಾಗ ಆ ಹಳ್ಳಿಗೆ ಬಸ್‌ ಸೌಕರ್ಯವಿರಲಿಲ್ಲ.

‘ಸೋಮವಾರದಿಂದ ಶನಿವಾರದವರೆಗೆ ಅಲ್ಲಿನ ವಸತಿಗೃಹದಲ್ಲೇ ವಾಸವಿರುತ್ತಿದ್ದ ನನಗೆ ಗ್ರಾಮೀಣ ಆರೋಗ್ಯ ಸೇವೆಯ ಎಲ್ಲ ಮಜಲುಗಳೂ ಅರ್ಥವಾದವು’ ಎಂದು ಹೇಳಿದರು. ‘ಪ್ರಾಥಮಿಕ ಆರೋಗ್ಯ ಘಟಕದ ಎದುರಿನ ಪುಟ್ಟ ಹೋಟೆಲ್‌ನ ಮುಂಭಾಗ ನಿಂತಿದ್ದ ಅದೇ ಗ್ರಾಮದ ಸಹೋದರರಿಬ್ಬರು ವಿದ್ಯುದಾಘಾತಕ್ಕೆ ಸಿಲುಕಿದರು. ಅವರನ್ನು ಕೂಡಲೇ ಘಟಕಕ್ಕೆ ಕರೆತಂದು ಚಿಕಿತ್ಸೆ ನೀಡಿದೆ. ಅದೊಂದು ಅವಿಸ್ಮರಣೀಯ ಅನುಭವ’ ಎಂದರು. ‘ನಂತರ, ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದಾಗ ನಡೆಸಿದ ಶವಪರೀಕ್ಷೆ ಮತ್ತು ನಂತರ ನೀಡಿದ ವರದಿಯಿಂದ 11 ಮಂದಿ ನಿರಪರಾಧಿಗಳು ಶಿಕ್ಷೆಯಿಂದ ಪಾರಾಗಿದ್ದರು’ ಎಂದು ಅವರು ಸ್ಮರಿಸಿದರು.

‘55 ವರ್ಷದ ಶಿಕ್ಷಕರೊಬ್ಬರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂಬ ದೂರಿನ ಮೇರೆಗೆ ಅವರೆಲ್ಲರನ್ನೂ ಬಂಧಿಸಲಾಗಿತ್ತು. ಜಾಮೀನು ದೊರಕಿರಲಿಲ್ಲ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಶಿಕ್ಷಕರು ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಖಚಿತವಾಗಿತ್ತು. ಆ ವಿಷಯವೇ ಅವರನ್ನ ರಕ್ಷಿಸಿತ್ತು’ ಎಂದು ಅವರು ಧನ್ಯತೆಯ ಭಾವವನ್ನು ವ್ಯಕ್ತಪಡಿಸಿದರು.

ಮೂರು ವರ್ಷದಿಂದ ಜಿಲ್ಲಾ ಆಸ್ಪತ್ರೆಯ ಕ್ಷಕಿರಣ ತಜ್ಞರಾಗಿರುವ ಅವರು, ಖಾಸಗಿ ಕ್ಲಿನಿಕ್‌ ತೆರೆದಿಲ್ಲ ಎಂಬುದು ಹೆಗ್ಗಳಿಕೆ. ಅವರ ಮಗ ಡಾ.ರಾಜೇಶ್‌, ದೆಹಲಿಯಲ್ಲಿ ಕ್ಷಕಿರಣ ವಿಷಯದಲ್ಲಿ ಹಾಗೂ ಮಗಳು ಡಾ.ಗೀತಾಂಜಲಿ ವಿಮ್ಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ‘ಅವರಿಗೂ ಕೂಡ ವೈದ್ಯರಾಗಿ ಅತಿಯಾದ ಸಂಪಾದನೆಗಾಗಿ ಒತ್ತಡ ಆಹ್ವಾನಿಸಕೊಳ್ಳುವುದು ಸರಿಯಲ್ಲ ಎಂಬ ಅರಿವು ಮೂಡಿದೆ. ಇದು ನಮ್ಮ ಕುಟುಂಬದ ವಾತಾವರಣ ಅವರಿಗೆ ಕಲಿಸಿರುವ ಪಾಠ’ ಎಂದು ಹೇಳಿದರು.

ವೈದ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಾವ ಉದ್ದೇಶದಿಂದ ವೈದ್ಯರಾದೆವು? ಈಗ ವೈದ್ಯರಾಗಿ ಏನು ಮಾಡುತ್ತಿದ್ದೇವೆ ಎಂಬುದನ್ನು ಪ್ರಾಮಾಣಿಕವಾಗಿ ಗಮನಿಸಿಕೊಳ್ಳಬೇಕು
ಡಾ.ವಿ.ಚಂದ್ರಬಾಬು, ಕ್ಷಕಿರಣ ತಜ್ಞ, ಜಿಲ್ಲಾಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT