ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಡೂರು: ಅಡಿಕೆ ಬೆಳೆಯತ್ತ ರೈತರ ಆಸಕ್ತಿ

ಸಂಡೂರು ತಾಲ್ಲೂಕಿನಲ್ಲಿ 900 ಹೆಕ್ಟೇರ್ ಪ್ರದೇಶದಲ್ಲಿ‌ ಬೆಳೆ
ರಾಮು ಅರಕೇರಿ
Published 4 ಆಗಸ್ಟ್ 2024, 5:17 IST
Last Updated 4 ಆಗಸ್ಟ್ 2024, 5:17 IST
ಅಕ್ಷರ ಗಾತ್ರ

ಸಂಡೂರು: ತಾಲ್ಲೂಕಿನ ರೈತರು ಕಳೆದ ಎರಡು ವರ್ಷಗಳಿಂದ ಅಡಿಕೆ ಬೆಳೆಯ ಮೇಲೆ‌ ಆಸಕ್ತಿ‌ ಹೆಚ್ಚಿಸಿಕೊಂಡಿದ್ದಾರೆ. ತೋಟಗಾರಿಕೆ‌ ಇಲಾಖೆ‌ ಸಮೀಕ್ಷೆ ಪ್ರಕಾರ 320 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ನಾಟಿಯಾಗಿದ್ದರೂ, ಸುಮಾರು 900 ಹೆಕ್ಟೇರ್ ಪ್ರದೇಶದಷ್ಟು ಅಡಿಕೆ ತಾಲ್ಲೂಕಿನ ಮೂರು ಹೋಬಳಿಗಳಲ್ಲಿ ಆವರಿಸಿಕೊಂಡಿದೆ.

ತಾಲ್ಲೂಕಿನಲ್ಲಿ ಗಣಿಗಾರಿಕೆ‌ ಚಟುವಟಿಕೆ‌ ಹೆಚ್ಚಾಗಿದೆ. ಇದರಿಂದಾಗಿ ಕೃಷಿ ಕಾರ್ಮಿಕರ ಕೊರತೆ ಹೆಚ್ಚಾಗಿದೆ. ಜಿಂದಾಲ್‌ನಂತಹ ಬೃಹತ್ ಕೈಗಾರಿಕೆ ಇರುವುದರಿಂದ ಕೃಷಿ ಕಾರ್ಮಿಕರು ಕೆಲಸಕ್ಕೆ ಸಿಗುತ್ತಿಲ್ಲ. ಈ ಕಾರಣದಿಂದಾಗಿ ರೈತರು ಬಹುವಾರ್ಷಿಕ ಬೆಳೆಗಳತ್ತ ಮುಖ ಮಾಡಿದ್ದಾರೆ. ವಾಣಿಜ್ಯ ಬೆಳೆಯಾದ ಅಡಿಕೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತಿದೆ. ಹೀಗಾಗಿ ಅಡಿಕೆ ಬೆಳೆಗೆ ರೈತರು ಆಸಕ್ತಿ ತೋರುತ್ತಿದ್ದಾರೆ.  

ನಿಷೇಧಿತ ವಲಯ: 

1991ರ ಗೋರಕ್‌ಸಿಂಗ್ ವರದಿ‌ ಶಿಫಾರಸ್ಸಿನ ಅನ್ವಯ ಮಲೆನಾಡು, ಕರಾವಳಿ ಪ್ರದೇಶವನ್ನು‌ ಹೊರತುಪಡಿಸಿ ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ ಅಡಿಕೆ ಬೆಳೆ ಬೆಳೆಯುವುದು ನಿಷಿದ್ಧ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಈ ಭಾಗದಲ್ಲಿ ಅಡಿಕೆ ಬೆಳೆಗೆ ಯಾವುದೇ ಉತ್ತೇಜನ ದೊರೆಯುವುದಿಲ್ಲ. ಅತಿವೃಷ್ಟಿ ಹಾಗೂ ಅನಾವೃಷ್ಟಿ ಉಂಟಾದಾಗ ಅಡಿಕೆ ಬೆಳೆಗೆ ಪರಿಹಾರ ದೊರೆಯದು. ಹೀಗಿದ್ದರೂ ರೈತರು ಅಡಿಕೆ ಬೆಳೆಗೆ ಮುಂದಾಗಿದ್ದಾರೆ ಎನ್ನುತ್ತಾರೆ ಈ ಭಾಗದ ರೈತರು.   

ಪೂರಕ ವಾತಾವರಣ:

ತಾಲ್ಲೂಕಿನಲ್ಲಿ ಮೂರು‌ ಹೋಬಳಿಗಳಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಅಭಿಪ್ರಾಯದಂತೆ ಸಂಡೂರು ಹೋಬಳಿ‌ ಅಡಿಕೆ ಬೆಳೆಗೆ ತುಸು ಪೂರಕ ವಾತಾವರಣ ಹೊಂದಿದೆ. ಅರೆ ಮಲೆನಾಡಿನಂತಿರುವ ಸಂಡೂರು, ಭುಜಂಗನಗರ, ನರಸಿಂಗಾಪುರ ಹಾಗೂ ಸುಶೀಲಾನಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಊರುಗಳಲ್ಲಿ ಹಾಗೂ ಬೆಟ್ಟಕ್ಕೆ ಅಂಟಿಕೊಂಡಿರುವ ಜಿ.ಎಲ್ ಹಳ್ಳಿ, ಅಂಕಮ್ಮನಾಳ್ , ತುಂಬರಗುದ್ದಿ ಪ್ರದೇಶಗಳಲ್ಲಿ ಈ ಬೆಳೆ‌ ಬೆಳೆಯಲು ಉತ್ತಮವಾಗಿದೆ. ಉಳಿದಂತೆ ಚೋರನೂರು ಹೋಬಳಿಯ ಯಾವುದೇ ರೈತರು ಅಡಿಕೆ ಬೆಳೆ ಆಯ್ಕೆ ವಿಚಾರದಲ್ಲಿ ಯೋಚಿಸುವುದು ಒಳಿತು. ತೋರಣಗಲ್ಲು‌ ಹೋಬಳಿಯಂತೂ ಧೂಳು, ಅಂತರ್ಜಲ ಕೊರತೆಯಿಂದಾಗಿ ಅಡಿಕೆ ಬೆಳೆಗೆ ಅಡ್ಡಿಯಾಗಬಹುದು’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ‌ ನಿರ್ದೇಶಕ ಹನುಮಪ್ಪ ನಾಯಕ.

ರೈತರು ಹೊಣೆ:  

ಈ ಭಾಗದಲ್ಲಿ ಹೆಚ್ಚುತ್ತಿರುವ ಅಡಿಕೆ ಬೆಳೆಯ ಸಾಧಕ ಬಾಧಕಗಳಿಗೆ ರೈತರೇ ಜವಾಬ್ದಾರರು. ಅಡಿಕೆ ಗೊನೆ ಬಿಡುವಾಗ 25 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ ಇರಬೇಕು. ಆದರೆ, ಈ ಭಾಗದಲ್ಲಿ ಎಲ್ಲಾ ಕಾಲಕ್ಕೂ ಅದನ್ನು ನಿರೀಕ್ಷಿಸುವಂತಿಲ್ಲ. ಅಂತರ್ಜಲ ಕುಸಿತ ಉಂಟಾದರೆ ಗಿಡಗಳನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ ಎನ್ನುತ್ತಾರೆ ಅವರು.  

ಗಿಡಗಳಿಗೆ ಸಕಾಲಕ್ಕೆ ನೀರು ಸಿಗದೇ ಇದ್ದಾಗ ಒಣಗುವ ಸಾಧ್ಯತೆ ಇರುತ್ತದೆ. ಆಗ ರೈತರು ಟ್ಯಾಂಕರ್ ಮೂಲಕ ಗಿಡಗಳಿಗೆ ನೀರುವ ಹರಿಸುವುದು ಅನಿವಾರ್ಯವಾಗಲಿದೆ. ವಿಶೇಷವಾಗಿ ಈ ಭಾಗದಲ್ಲಿ ಕೆಂಪುನುಸಿ, ಬಿಳಿ ನುಸಿ, ಬಸವನ ಹುಳು, ಕಾಂಡ ಕೊರಕ, ಸೊರಗು ರೋಗ ಸೇರಿದಂತೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ರೈತರು ಜಾಗೃತಿ ವಹಿಸಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ಪಡೆಯಬೇಕು ಎನ್ನುತ್ತಾರೆ  ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಉದಯ ಟಿ.ವಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT