ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ಸೆ.6 ರಂದು ಗೋ ಬ್ಯಾಕ್ ಗವರ್ನರ್ ಚಳವಳಿ

ಕಪ್ಪು ಪಟ್ಟಿ, ಬಾವುಟ ಪ್ರದರ್ಶನಕ್ಕೆ ತೀರ್ಮಾನ: ಡಾ.ಗಾದಿಲಿಂಗನಗೌಡ
Published 4 ಸೆಪ್ಟೆಂಬರ್ 2024, 13:26 IST
Last Updated 4 ಸೆಪ್ಟೆಂಬರ್ 2024, 13:26 IST
ಅಕ್ಷರ ಗಾತ್ರ

ಬಳ್ಳಾರಿ: ‘ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರ ವಿರುದ್ಧ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾ ಸಮಿತಿಯು ಸೆ.6ರಂದು ಬಳ್ಳಾರಿಯಲ್ಲಿ ಗೋ ಬ್ಯಾಕ್ ಗವರ್ನರ್ ಚಳವಳಿ ನಡೆಸಲಿದೆ. ಜತೆಗೆ ಕಪ್ಪು ಪಟ್ಟಿ, ಬಾವುಟ ಪ್ರದರ್ಶನ ನಡೆಸಲಾಗುವುದು’ ಎಂದು ಸಮಿತಿಯ ಜಿಲ್ಲಾ ಅಧ್ಯಕ್ಷ ಗಾದಿಲಿಂಗನಗೌಡ ಹೇಳಿದ್ದಾರೆ 

ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಘಟಿಕೋತ್ಸವವು ಸೆ.6ರಂದು ನಡೆಯಲಿದೆ. ಅಂದು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ’ ಎಂದರು. 

‘ರಾಜ್ಯಪಾಲ ಗೆಹಲೋತ್‌ ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದಾರೆ. ಅವರ ನಡೆಯಿಂದಾಗಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಕೇಂದ್ರದ ಏಜೆಂಟ್ ರೀತಿ ವರ್ತಿಸದೇ ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯಬೇಕು ಎಂದು ಕಪ್ಪು ಪಟ್ಟಿ ಪ್ರದರ್ಶನ ನಡೆಸಲಿದ್ದೇವೆ’ ಎಂದು ಹೇಳಿದರು.

‘ಮುಡಾ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ನ್ಯಾಯಾಲಯದ ಆದೇಶ ಏನೇ ಬಂದರೂ ಸ್ವಾಗತಿಸುತ್ತೇವೆ. ಆದರೆ ನಮ್ಮ ಪ್ರತಿಭಟನೆಯ ಉದ್ಧೇಶ ಇರುವುದು ರಾಜ್ಯಪಾಲರ ಧೋರಣೆಯ ವಿರುದ್ಧ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ರಾಜಕೀಯ ಪ್ರೇರಿತ’ ಎಂದರು. 

ಸಮಿತಿಯ ಗೌರವಾಧ್ಯಕ್ಷ ಎ.ಮಾನಯ್ಯ, ‘ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು, ಕಾಂಗ್ರೆಸ್ ನಾಯಕರ ಮೇಲೆ ಅನಗತ್ಯ ಆರೋಪ ಮಾಡುವ ಕುತಂತ್ರ ನಡೆಸಿದ್ದಾರೆ’ ಎಂದರು. 

‘ಕೇಂದ್ರ ಸರ್ಕಾರ ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದೆ. ಕೇಂದ್ರ ಸರ್ಕಾರದ ಈ ಪ್ರಜಾಪ್ರಭುತ್ವ ವಿರೋಧಿ ನಿಲುವುಗಳನ್ನು ಜನರಿಗೆ ತಿಳಿಸುವ ಪ್ರಯತ್ನವನ್ನು ನಾವು ಮಾಡಲಿದ್ದೇವೆ’ ಎಂದು ಗೌರವಾಧ್ಯಕ್ಷ ವಿ.ಎಸ್.ಶಿವಶಂಕರ್ ಹೇಳಿದರು.

‘ಅನುಮತಿಗಾಗಿ ತಮ್ಮ ಕಚೇರಿಗೆ ಬಂದ ಕಡತಗಳ ಪೈಕಿ ರಾಜ್ಯಪಾಲರು ಮುಡಾ ಹಗರಣದ ವಿಚಾರಕ್ಕೆ ತಕ್ಷಣ ಸ್ಪಂದಿಸಿದರು. ಆದರೆ ಅದೇ ರೀತಿ ಬಿಜೆಪಿಯ ಹಲವು ನಾಯಕರ ಕಡತಗಳು ಬಾಕಿ ಇರುವುದು ರಾಜ್ಯಪಾಲರ ಪಕ್ಷಪಾತಿತನವನ್ನು ತೋರಿಸುತ್ತದೆ’ ಎಂದು ಶಿವಶಂಕರ್ ಹೇಳಿದರು.

ಮಹಾನಗರ ಪಾಲಿಕೆಯ ಸದಸ್ಯ ಪಿ.ಗಾದೆಪ್ಪ, ಕಾಂಗ್ರೆಸ್ ಮುಖಂಡ ಪಿ.ಜಗನ್ನಾಥ, ಮೊಹಮ್ಮದ್ ರಫೀಕ್, ಕೆ.ಯರ‍್ರಿಸ್ವಾಮಿ, ಕೆರಕೋಡಪ್ಪ, ಗಾದಿಲಿಂಗಪ್ಪ, ಕಪ್ಪಗಲ್ಲು ಓಂಕಾರೆಪ್ಪ, ಚಂದ್ರು, ರಾಮು ನಾಯ್ಕ್, ಜೋಗಿನ್ ವಿಜಯ್, ಎಲ್.ಮಾರೆಣ್ಣ, ಕೆ.ಮಲ್ಲಿಕಾರ್ಜುನ, ಧನಂಜಯ ಹಮಲ್, ಸಂಗನಕಲ್ಲು ವಿಜಯಕುಮಾರ್, ಬಿ.ಎಂ.ಪಾಟೀಲ್, ಇಮಾಮ್ ಗೋಡೆಕಾರ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT