ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ಹೂವಿನಹಡಗಲಿ ತಾಲ್ಲೂಕಿನ ಅಭಿವೃದ್ಧಿಗೆ ಮುಳುವಾದ ವಿಜಯನಗರ ಜಿಲ್ಲೆ ರಚನೆ

Last Updated 27 ಜುಲೈ 2022, 9:50 IST
ಅಕ್ಷರ ಗಾತ್ರ

ಹೂವಿನಹಡಗಲಿ: ಪಟ್ಟಣದಲ್ಲಿ ದಶಕಗಳ ಹಿಂದೆ ನೆಲೆಗೊಂಡಿದ್ದ ವಿಭಾಗೀಯ ಕಚೇರಿಗಳು ಒಂದೊಂದಾಗಿ ಎತ್ತಂಗಡಿಯಾಗುತ್ತಿವೆ.

ಕಳೆದ ತಿಂಗಳಷ್ಟೇ ಲೋಕೋಪಯೋಗಿ ವಿಭಾಗೀಯ ಕಚೇರಿ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಗೊಂಡಿತ್ತು. ಈಗ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಕಚೇರಿಯ ಸರದಿ. ಇಲ್ಲಿನ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗೀಯ ಕಚೇರಿಯನ್ನು ವಿಜಯನಗರ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಗೊಳಿಸಲು ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ನದೀಮ್ ಅಹ್ಮದ್ ಆದೇಶಿದ್ದಾರೆ.

ಇಲ್ಲಿನ ವಿಭಾಗೀಯ ಕಚೇರಿಗಳು ಒಂದೊಂದಾಗಿ ಎತ್ತಂಗಡಿಯಾಗುತ್ತಿದ್ದರೂ ಇಲ್ಲಿನ ಜನಪ್ರತಿನಿಧಿಗಳಿಂದಾಗಲೀ, ಸಂಘ ಸಂಸ್ಥೆಗಳಿಂದಾಗಲೀ ಸಣ್ಣ ಪ್ರತಿರೋಧವೂ ವ್ಯಕ್ತವಾಗಿಲ್ಲ.

ಬಳ್ಳಾರಿ ಜಿಲ್ಲೆಯಲ್ಲಿದ್ದಾಗಲೂ ಹೂವಿನಹಡಗಲಿ ತಾಲ್ಲೂಕು ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. 180 ಕಿ.ಮೀ. ದೂರದ ಜಿಲ್ಲಾ ಕೇಂದ್ರಕ್ಕೆ ಅಲೆದು ಇಲ್ಲಿನ ಜನರು ರೋಸಿ ಹೋಗಿದ್ದರು. ಬಳ್ಳಾರಿ ಜಿಲ್ಲೆ ವಿಭಜನೆಯಾಗಿ ವಿಜಯನಗರ ಜಿಲ್ಲೆ ರಚನೆಯಾದಾಗ ಹೆಚ್ಚು ಸಂಭ್ರಮಿಸಿದ್ದ ಹೂವಿನಹಡಗಲಿ ಜನತೆ, ಇದೀಗ ಕಚೇರಿಗಳು ಒಂದೊಂದಾಗಿ ಎತ್ತಂಗಡಿ ಆಗುತ್ತಿರುವುದರಿಂದ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಹಿಂದುಳಿದ ಹೂವಿನಹಡಗಲಿ ತಾಲ್ಲೂಕನ್ನು ಅಭಿವೃದ್ಧಿಪಡಿಸಲುಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರು 1998ರಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, 2006ರಲ್ಲಿ ಲೋಕೋಪಯೋಗಿ ವಿಭಾಗ ಕಚೇರಿ, ಡಿವೈಎಸ್ಪಿ ಕಚೇರಿಗಳನ್ನು ಮಂಜೂರುಗೊಳಿಸಿದ್ದರು. ಹೂವಿನಹಡಗಲಿಯನ್ನು ಜಿಲ್ಲಾ ಕೇಂದ್ರವಾಗಿಸಬೇಕು ಎಂಬ ಇಚ್ಛೆಯೂ ಅವರದಾಗಿತ್ತು. ಆ ಕಾರಣಕ್ಕಾಗಿಯೇ ಎಲ್ಲ ಕಚೇರಿಗಳಿಗೂ ಸುಸಜ್ಜಿತ ಸ್ವಂತ ಕಟ್ಟಡ, ಸಿಬ್ಬಂದಿ ವಸತಿಗೃಹ, ಮೂಲಸೌಕರ್ಯ ಕಲ್ಪಿಸಿದ್ದರು. ಇಲ್ಲಿನ ವಿಭಾಗೀಯ ಕಚೇರಿಗಳು ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ತಾಲ್ಲೂಕುಗಳನ್ನು ಒಳಗೊಂಡಿದ್ದವು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, ಜಿಲ್ಲಾ ಖನಿಜ ಪ್ರತಿಷ್ಠಾನ, ಕೇಂದ್ರ, ರಾಜ್ಯ ಸರ್ಕಾರಗಳ ವಿಶೇಷ ಅಭಿವೃದ್ಧಿ ಯೋಜನೆ, ಶಾಸಕ, ಸಂಸದರ ನಿಧಿ ಸೇರಿದಂತೆ ವಾರ್ಷಿಕ ಸಾವಿರಾರು ಕೋಟಿ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಮೇಲ್ವಿಚಾರಣೆಯನ್ನು ವಿಭಾಗೀಯ ಕಚೇರಿಗಳಿಂದ ನಿರ್ವಹಿಸಲಾಗುತಿತ್ತು. ಹಿಂದುಳಿದ ಈ ಮೂರು ತಾಲ್ಲೂಕುಗಳ ಅಭಿವೃದ್ಧಿ ಕೆಲಸಗಳು ತ್ವರಿತವಾಗಿ ನಡೆಯುತ್ತಿದ್ದವು. ಇದೀಗ ವಿಭಾಗೀಯ ಕಚೇರಿಗಳು ಸ್ಥಳಾಂತರಗೊಂಡಿದ್ದರಿಂದ ತಾಲ್ಲೂಕಿನ ಮಹತ್ವ ಕುಗ್ಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಅಭಿವೃದ್ಧಿಗೂ ತೊಡಕಾಗಲಿದೆ.

2002ರಲ್ಲಿ ಇಲ್ಲಿನ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗೀಯ ಕಚೇರಿಯನ್ನು ಹಗರಿಬೊಮ್ಮನಹಳ್ಳಿಗೆ ಸ್ಥಳಾಂತರಗೊಳಿಸುವ ಪ್ರಕ್ರಿಯೆ ಆರಂಭವಾಗಿತ್ತು. ಆಗ ಶಾಸಕರಾಗಿದ್ದ ನಂದಿಹಳ್ಳಿ ಹಾಲಪ್ಪ, ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿ ಕಚೇರಿ ಉಳಿಸಿಕೊಂಡಿದ್ದರು. ಈಗ ಯಾರೊಬ್ಬರೂ ಸೊಲ್ಲು ಎತ್ತುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT