ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಲಿ | ಗರಿಗೆದರಿದ ಸಂಸ್ಕೃತಿ, ಸಂಪ್ರದಾಯ ಆಚರಣೆ  

Published 25 ನವೆಂಬರ್ 2023, 4:52 IST
Last Updated 25 ನವೆಂಬರ್ 2023, 4:52 IST
ಅಕ್ಷರ ಗಾತ್ರ

ಕಂಪ್ಲಿ: ಸುಗ್ಗಿಯ ಬೆಳೆ ಒಕ್ಕಲು ಆರಂಭದ ಸಮಯದಲ್ಲಿ ಬರುವ ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ ಹೆಂಗಳೆಯರ ಹಬ್ಬ ಗೌರಿ ಹುಣ್ಣಿಮೆಯ ಸಡಗರ ತಾಲ್ಲೂಕಿನಲ್ಲಿ ಗರಿಗೆದರಿದೆ.

ಕಲಾವಿದರ ಕೈಚಳಕದಲ್ಲಿ ತಯಾರಾದ ವಿವಿಧ ಅಳತೆಯ ಗೌರಿದೇವಿ ಮೂರ್ತಿಗಳ ಮಾರಾಟ ಮತ್ತೊಂದೆಡೆ ವೈವಿದ್ಯಮಯ ಸಕ್ಕರೆ ಗೊಂಬೆಗಳ ಖರೀದಿಯೂ ಜೋರಾಗಿದೆ.

ಮಠ, ದೇವಸ್ಥಾನ, ಇನ್ನು ಹಲವೆಡೆ ಗ್ರಾಮದ ಮಠಸ್ಥರ ಮನೆಯಲ್ಲಿ ಗೌರಿದೇವಿ ಮೂರ್ತಿಯನ್ನು ನ.26ರಿಂದ ನ.30ರವರೆಗೆ ಪ್ರತಿಷ್ಠಾಪಿಸಲಾಗುತ್ತಿದ್ದು, ಈ ಐದು ದಿನ ಕುಟುಂಬದಲ್ಲಿ ಸಡಗರವೇ ಮನೆ ಮಾಡಿರುತ್ತದೆ.

ಸಕ್ಕರೆಯಿಂದ ತಯಾರಿಸಿದ ಗೌರಿದೇವಿ ಮೂರ್ತಿ, ಶಿವ ಪಾರ್ವತಿ, ಗಣೇಶ, ಗೋಪುರ, ಕಳಸ, ಆರತಿ ಅಚ್ಚು, ಕುದುರೆ, ಒಂಟೆ, ಆನೆ, ಅಂಬಾರಿ ಸೇರಿದಂತೆ ಇತ್ಯಾದಿ ಆಕರ್ಷಕ ವಿವಿಧ ವರ್ಣದ ಗೊಂಬೆಗಳನ್ನು ಮನೆ ಹಿರಿಯರು ಖರೀದಿಸಿ ತರುತ್ತಾರೆ.

ಹಬ್ಬದ ದಿನದಂದು ಹೊಸ ವಸ್ತ್ರಗಳನ್ನು ಧರಿಸುವ ಹೆಂಗಳೆಯರು ತಟ್ಟೆಯಲ್ಲಿ ಸಕ್ಕರೆ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಅದರಲ್ಲಿ ದೀಪಗಳನ್ನು ಇರಿಸಿ ಮಕ್ಕಳೊಂದಿಗೆ ಪಟಾಕಿ ಸಿಡಿಸುತ್ತಾ ಸಂಭ್ರಮಿಸುತ್ತಾರೆ. ಗೌರಿದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಮಠ, ದೇವಸ್ಥಾನ, ಗ್ರಾಮದ ಮಠಸ್ಥರ ಮನೆಗಳಿಗೆ ತೆರಳಿ ಭಕ್ತಿಯಿಂದ ಆರತಿ ಬೆಳಗಿ ನಮಿಸುತ್ತಾರೆ.

ಐದು ದಿನ ರಾತ್ರಿ ಇದೇ ರೀತಿ ಮಹಿಳೆಯರು, ಯುವತಿಯರು ಸಕ್ಕರೆ ಗೊಂಬೆಗಳ ಆರತಿ ಮಾಡುವುದು ವಾಡಿಕೆ. ಕೆಲವರು ಈ ವೇಳೆ ಗೌರಿ ಸಂಪ್ರದಾಯ ಪದಗಳನ್ನು ಹಾಡಿ ಬಳಿಕ ಮಂಗಳಾರತಿ ಮಾಡಿ ಪ್ರಸಾದವನ್ನು ವಿತರಿಸುವ ಸಂಪ್ರದಾಯವೂ ಇದೆ.

ಐದನೆ ದಿನ ರಾತ್ರಿ ಗೌರಿದೇವಿಮೂರ್ತಿಯನ್ನು ವಿಜೃಂಭಣೆಯಿಂದ ವಿಸರ್ಜಿಸುತ್ತಾರೆ. ಆರನೇ ದಿನ (ಡಿ.1ರಂದು) ಸಂಜೆ ಮನೆಯವರೆಲ್ಲರೂ ಮಾಳಿಗೆ ಮೇಲೆ ಕೊಂತಿ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ‘ಕೊಂತಿ (ಕೊಂತೆಮ್ಮ) ರೊಟ್ಟಿ’ ಹಬ್ಬವನ್ನು ಆಚರಿಸುತ್ತಾರೆ.

ಎಳ್ಳು ಹಚ್ಚಿದ ಜೋಳ ಮತ್ತು ಸಜ್ಜೆ ರೊಟ್ಟಿ, ಬದನೆ ಮತ್ತು ಹೀರೆಕಾಯಿಯಿಂದ ಸಿದ್ಧವಾದ ವಿಶೇಷ ಎಣ್ಣೆಗಾಯಿ, ಪುಂಡೆಪಲ್ಯೆ, ಹೆಸರುಕಾಳು ಪಲ್ಯೆ, ಅನ್ನ, ಚಿತ್ರಾನ್ನ, ಸಾಂಬಾರು, ತೊಗರಿಬೇಳೆ ಗಟ್ಟಿ ಪಪ್ಪು, ಗುರೆಳ್ಳುಪುಡಿ, ಶೇಂಗಾಚಟ್ನಿ, ಮಿರ್ಚಿ, ಬಜಿ, ಸಿಹಿ ಖರ್ಜಿಕಾಯಿ ಸೇರಿದಂತೆ ವಿವಿಧ ರುಚಿಕರ ವಿಶೇಷ ಖಾದ್ಯಗಳನ್ನು ಮನೆಯವರೆಲ್ಲರೂ ಬೆಳದಿಂಗಳಲ್ಲಿ ಸವಿಯುತ್ತಾರೆ. ಬಳಿಕ ಹಿರಿಯರಿಂದ ಹಿಡಿದು ಚಿಕ್ಕವರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ನಂತರ ಹತ್ತಿರದ ಬಾವಿ ಅಥವಾ ಕಾಲುವೆಗಳಲ್ಲಿ ಕೊಂತಿ ಮೂರ್ತಿಯನ್ನು ವಿಸರ್ಜಿಸುತ್ತಾರೆ. ಅಂದು ರಾತ್ರಿ ಹೆಂಗೆಳೆಯರೆಲ್ಲರೂ ಸೇರಿಕೊಂಡು ಗ್ರಾಮೀಣ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಮನೆಗೆ ಮರಳಿ ವಿಶ್ರಾಂತಿ ಪಡೆಯುವುದರೊಂದಿಗೆ ಈ ವಿಶಿಷ್ಟ ಹಬ್ಬ ಸಂಪನ್ನಗೊಳುತ್ತದೆ.

ಸಕ್ಕರೆ ಗೊಂಬೆ ತಯಾರಿಸಲು ಈ ಬಾರಿ ಸುಮಾರು 4ಕ್ವಿಂಟಲ್ ಸಕ್ಕರೆ ಖರೀದಿಸಿರುವೆ. ನಾಲ್ಕೈದು ದಿನದಿಂದ ನಮ್ಮ ಕುಟುಂಬದವರೆಲ್ಲರು ಸೇರಿ ತಯಾರಿಕೆಯಲ್ಲಿ ತೊಡಗಿದ್ದೇವೆ.
ಬಿ. ಸದಾಶಿವಪ್ಪ, ಸಕ್ಕರೆ ಗೊಂಬೆ ತಯಾರಕ
ಗ್ರಾಮೀಣ ಸೊಗಡಿನ ಜಾನಪದ ಶೈಲಿಯ ಗೌರಿಹಬ್ಬ ತನ್ನ ಸಡಗರನ್ನು ಇಂದಿಗೂ ಉಳಿಸಿಕೊಂಡಿದೆ. ಈ ಕಾರಣದಿಂದ ನಮ್ಮಂಥ ಕಲಾವಿದರ ಜೀವನ ಮುಂದುವರಿದಿದೆ.
ಸುಮಿತ್ರಮ್ಮ ಪರಶುರಾಮಪ್ಪ, ಜನಪದ ಚಿತ್ರಕಲಾವಿದೆ
ಕಂಪ್ಲಿಯ ವಿಜಯನಗರ ಜನಪದ ಚಿತ್ರಕಲಾವಿದೆ ಸುಮಿತ್ರಮ್ಮ ಪರಶುರಾಮಪ್ಪ ತಯಾರಿಸಿರುವ ಗೌರಿದೇವಿ ಮೂರ್ತಿಗಳು ಮನೆಯಲ್ಲಿಯೇ ಮಾರಾಟಕ್ಕಿಟ್ಟಿರುವ ದೃಶ್ಯ
ಕಂಪ್ಲಿಯ ವಿಜಯನಗರ ಜನಪದ ಚಿತ್ರಕಲಾವಿದೆ ಸುಮಿತ್ರಮ್ಮ ಪರಶುರಾಮಪ್ಪ ತಯಾರಿಸಿರುವ ಗೌರಿದೇವಿ ಮೂರ್ತಿಗಳು ಮನೆಯಲ್ಲಿಯೇ ಮಾರಾಟಕ್ಕಿಟ್ಟಿರುವ ದೃಶ್ಯ
ಕಂಪ್ಲಿಯ ವಿಜಯನಗರ ಜನಪದ ಚಿತ್ರಕಲಾವಿದೆ ಸುಮಿತ್ರಮ್ಮ ಪರಶುರಾಮಪ್ಪ ಗೌರಿದೇವಿ ಮೂರ್ತಿಗೆ ಬಣ್ಣದ ಅಂತಿಮ ಸ್ಪರ್ಶ ನೀಡುತ್ತಿರುವ ದೃಶ್ಯ
ಕಂಪ್ಲಿಯ ವಿಜಯನಗರ ಜನಪದ ಚಿತ್ರಕಲಾವಿದೆ ಸುಮಿತ್ರಮ್ಮ ಪರಶುರಾಮಪ್ಪ ಗೌರಿದೇವಿ ಮೂರ್ತಿಗೆ ಬಣ್ಣದ ಅಂತಿಮ ಸ್ಪರ್ಶ ನೀಡುತ್ತಿರುವ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT