ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಸರಿಧಾರಿಗಳಿಂದ ಭವ್ಯ ಶೋಭಾಯಾತ್ರೆ

Last Updated 19 ಡಿಸೆಂಬರ್ 2018, 15:41 IST
ಅಕ್ಷರ ಗಾತ್ರ

ಹೊಸಪೇಟೆ: ಎಲ್ಲಿ ನೋಡಿದರಲ್ಲಿ ಹನುಮನ ಮುದ್ರೆಯಿರುವ ಕೇಸರಿ ಧ್ವಜಗಳು, ಸಂಪೂರ್ಣ ಕೇಸರಿ ವಸ್ತ್ರ ಧರಿಸಿದ ಯುವಕರು, ಹೂವಿನಿಂದ ವಿಶೇಷ ರೀತಿಯಲ್ಲಿ ಅಲಂಕರಿಸಿದ ರಥದಲ್ಲಿ ಆಂಜನೇಯನ ಪ್ರತಿಮೆ, ಹನುಮ–ಶ್ರೀರಾಮನಿಗೆ ಭಕ್ತಿಯಿಂದ ಜೈಕಾರ.

ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗ ದಳದಿಂದ ಬುಧವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಹನುಮ ಮಾಲಾ ಸಂಕೀರ್ತನಾ ಯಾತ್ರೆಯಲ್ಲಿ ಕಂಡು ಬಂದ ದೃಶ್ಯಗಳಿವು.

ಸಂಜೆ 7.30ಕ್ಕೆ ವಡಕರಾಯ ದೇಗುಲದಲ್ಲಿ ಬಾಲಮಠದ ಚಿಂತಾಮಣಿ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ನಂತರ ಅಲ್ಲಿಂದ ಭವ್ಯ ಶೋಭಾ ಯಾತ್ರೆ ಆರಂಭಗೊಂಡಿತು.

ಕೇರಳದ ಚಂಡೆ ಮದ್ದಳೆ, ಸಾಂಪ್ರದಾಯಿಕ ನೃತ್ಯ, ಹನುಮ–ಶ್ರೀರಾಮ, ಉಗ್ರ ನರಸಿಂಹನ ವೇಷಧಾರಿಗಳು, ಬೆಳಗಾವಿಯ ಶಿವಮುದ್ರ ತಂಡದ ಡೊಳ್ಳು ಕುಣಿತ, ಸ್ಥಳೀಯ ಯುವಕರು ಭಕ್ತಿಯಲ್ಲಿ ಮೈಮರೆತು ಕೇಸರಿ ಧ್ವಜಗಳನ್ನು ಬೀಸುತ್ತ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಜಯಘೋಷ ಹಾಕಿದರು.

ರಸ್ತೆಯ ಎರಡೂ ಬದಿ ಜನ ಕಟ್ಟಡಗಳ ಮೇಲೆ ನಿಂತು ಹೂವಿನ ಸುರಿಮಳೆಗರೆದು ಸ್ವಾಗತ ಕೋರಿದರು. ಇನ್ನೊಂದೆಡೆ ಮೇನ್‌ ಬಜಾರ್‌ನ ದರ್ಗಾ ಮಸೀದಿ ಬಳಿ ಮುಸ್ಲಿಂ ಸಮಾಜದವರು ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಹಣ್ಣು ವಿತರಿಸಿ ಸೌಹಾರ್ದತೆ ಮೆರೆದರು.

ವಡಕರಾಯ ದೇಗುಲದಿಂದ ಆರಂಭಗೊಂಡ ಮೆರವಣಿಗೆ ಮೇನ್‌ ಬಜಾರ್‌, ಮಹಾತ್ಮ ಗಾಂಧಿ ವೃತ್ತ, ಬಸ್‌ ನಿಲ್ದಾಣ, ರಾಮ ಟಾಕೀಸ್‌, ವಾಲ್ಮೀಕಿ ವೃತ್ತದ ಮೂಲಕ ಸಾಗಿ ಸಣ್ಣಕ್ಕಿ ವೀರಭದ್ರೇಶ್ವರ ದೇಗುಲದ ಬಳಿ ಕೊನೆಗೊಂಡಿತು. ಮೆರವಣಿಗೆ ಹಾದು ಹೋಗುವ ಮಾರ್ಗಗಳಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು. ಜನ ತಡರಾತ್ರಿ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ನಿಂತುಕೊಂಡು ಶೋಭಾಯಾತ್ರೆ ಕಣ್ತುಂಬಿಕೊಂಡರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಶವ, ವಿಶ್ವ ಹಿಂದೂ ಪರಿಷತ್ತಿನ ನರಸಿಂಹಮೂರ್ತಿ, ರಾಘವೇಂದ್ರ, ವಿಜಯಲಕ್ಷ್ಮಿ ಹಿರೇಮಠ, ಅಶೋಕ್‌ ಜೀರೆ, ಅನಿಲ್‌ ಜೋಷಿ, ಅನಂತ ಸ್ವಾಮಿ, ಬಸವರಾಜ ನಾಲತ್ವಾಡ, ಕಿಶೋರ್‌ ಪತ್ತಿಕೊಂಡ, ಶ್ರೀನಿವಾಸ ರೆಡ್ಡಿ, ರಾಣಿ ಸಂಯುಕ್ತಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT