ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಲೋಶಿಪ್ ಬಿಡುಗಡೆಗೆ ಆಗ್ರಹ: ಪಟ್ಟು ಬಿಡದ ವಿದ್ಯಾರ್ಥಿಗಳು

ಫೆಲೋಶಿಪ್ ಬಿಡುಗಡೆಗೆ ಆಗ್ರಹ; ಮುಂದುವರೆದ ಅಹೋರಾತ್ರಿ ಧರಣಿ
Last Updated 5 ಡಿಸೆಂಬರ್ 2022, 14:21 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಫೆಲೋಶಿಪ್ ಬಿಡುಗಡೆಗೆ ಆಗ್ರಹಿಸಿ ಹಂಪಿ ಕನ್ನಡ ವಿಶ್ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ವಿ.ವಿ. ಕ್ರಿಯಾಶಕ್ತಿ ಭವನದ ಎದುರು ಭಾನುವಾರ ಆರಂಭಿಸಿರುವ ಅಹೋರಾತ್ರಿ ಧರಣಿ ಸೋಮವಾರವೂ ಮುಂದುವರೆಯಿತು.

ಕೊರೆಯುವ ಚಳಿ ಲೆಕ್ಕಿಸದೇ ವಿದ್ಯಾರ್ಥಿಗಳು ರಾತ್ರಿಯಿಡೀ ಕ್ರಿಯಾಶಕ್ತಿ ಭವನದ ಎದುರು ತೆರೆದ ಜಾಗದಲ್ಲಿ ಧರಣಿ ನಡೆಸಿದರು. ವಿದ್ಯಾರ್ಥಿ/ವಿದ್ಯಾರ್ಥಿನಿಯರೂ ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳಿಗೆ ಫೆಲೋಶಿಪ್ ಕೊಡಬೇಕೆಂದು ರಾಜ್ಯ ಸರ್ಕಾರವೇ ಆದೇಶಿಸಿದೆ. ಅದಕ್ಕಾಗಿ ₹11.89 ಕೋಟಿ ಹಣ ಮಂಜೂರು ಮಾಡಿದೆ. ಹೀಗಿದ್ದರೂ ಫೆಲೋಶಿಪ್ ಏಕೆ ಕೊಡುತ್ತಿಲ್ಲ. ವಿದ್ಯಾರ್ಥಿಗಳನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ಸರಿಯಲ್ಲ. 47 ತಿಂಗಳ ಫೆಲೋಶಿಪ್‌ ಕೂಡಲೇ ಬಿಡುಗಡೆಗೊಳಿಸಬೇಕು. ಬೇಡಿಕೆ ಈಡೇರುವ ತನಕ ಹೋರಾಟ ನಿಲ್ಲುವುದಿಲ್ಲ ಎಂದು ವಿದ್ಯಾರ್ಥಿಗಳು ಸ್ಪಷ್ಟಪಡಿಸಿದರು.

ಸರ್ಕಾರದ ಸೂಚನೆ ಪ್ರಕಾರ, ಕೂಡಲೇ ಫೆಲೋಶಿಪ್ ಬಿಡುಗಡೆಗೊಳಿಸಬೇಕು. ಫೆಲೋಶಿಪ್ ಕೊಡದ ಕಾರಣ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಬಡ ಸಂಶೋಧನಾ ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದರೂ ತರಾತುರಿಯಲ್ಲಿ ‘ನುಡಿಹಬ್ಬ’, ‘ನಮ್ಮ ಹಬ್ಬ’ಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಹಿತಕ್ಕಿಂತ ಬೇರೆ ಯಾವುದೂ ಮುಖ್ಯವಲ್ಲ ಎಂದು ಹೇಳಿದರು. ವಿವಿಧ ವಿಭಾಗಗಳ ಸಂಶೋಧನಾ ವಿದ್ಯಾರ್ಥಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಡಿಸೆಂಬರ್ 8ರಂದು ಕನ್ನಡ ವಿ.ವಿ. ನುಡಿಹಬ್ಬ, 9ರಂದು ನಮ್ಮ ಹಬ್ಬ ನಿಗದಿಯಾಗಿದೆ.

ಧರಣಿ ಸ್ಥಳಕ್ಕೆ ಮಾಜಿಸಂಸದ:

ಮಾಜಿಸಂಸದ, ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ ಅವರು ವಿದ್ಯಾರ್ಥಿಗಳ ಧರಣಿ ಬೆಂಬಲಿಸಿ ಎರಡು ತಾಸು ಅವರೊಟ್ಟಿಗೆ ಕಳೆದರು. ಮುಖಂಡರಾದ ರಾಜಶೇಖರ್‌ ಹಿಟ್ನಾಳ್‌, ಸಿದ್ದನಗೌಡ, ವಿನಾಯಕ ಶೆಟ್ಟರ್‌, ಪತ್ರೇಶ್‌ ಹಿರೇಮಠ, ನಿಂಬಗಲ್‌ ರಾಮಕೃಷ್ಣ, ವೀರಭದ್ರ ನಾಯಕ ಸೇರಿದಂತೆ ಇತರರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಪಿ. ಮಣಿವಣ್ಣನ್‌ ಜೊತೆ ದೂರವಾಣಿಯಲ್ಲಿ ಮಾತನಾಡಿದ ವಿ.ಎಸ್. ಉಗ್ರಪ್ಪ, ಎಸ್ಸಿ/ಎಸ್ಟಿ ವಿದ್ಯಾರ್ಥಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ. ಕೂಡಲೇ ಅವರಿಗೆ ಫೆಲೋಶಿಪ್‌ ಕೊಡಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ‘ಪರಿಶೀಲಿಸಿ ಕ್ರಮ ಜರುಗಿಸಲಾಗುವುದು’ ಎಂದು ಮಣಿವಣ್ಣನ್‌ ತಿಳಿಸಿದರು.

ಸಿ.ಎಂ. ಅವರಿಗೂ ಉಗ್ರಪ್ಪ ಕರೆ ಮಾಡಿದರು. ಆದರೆ, ಅವರು ಸಭೆಯಲ್ಲಿದ್ದ ಕಾರಣ ಮಾತುಕತೆ ನಡೆಯಲಿಲ್ಲ. ‘ನಿಮಗೆ ನ್ಯಾಯ ಕೊಡಿಸಲು ಎಲ್ಲ ರೀತಿಯಿಂದ ಶ್ರಮ ವಹಿಸುವೆ’ ಎಂದು ಉಗ್ರಪ್ಪ ಅವರು ಧರಣಿ ನಿರತ ವಿದ್ಯಾರ್ಥಿಗಳಿಗೆ ಭರವಸೆ ಕೊಟ್ಟರು.

‘ದಮ್ಮು, ತಾಕತ್ತಿನ ಮಾತಾಡುವವರು ಫೆಲೋಶಿಪ್‌ ಕೊಡಿಸಲಿ’:

‘ಮುಖ್ಯಮಂತ್ರಿ, ಈ ಭಾಗದ ಮಂತ್ರಿ ಬಿ. ಶ್ರೀರಾಮುಲು ಅವರು ದಮ್ಮು, ತಾಕತ್ತಿನ ಪ್ರಶ್ನೆ ಮಾಡುತ್ತಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಎಸ್ಸಿ/ಎಸ್ಟಿ ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್‌ ಸಿಕ್ಕಿಲ್ಲ. ಅದಕ್ಕಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ದಮ್ಮು, ತಾಕತ್ತಿನ ಮಾತನಾಡುವ ಸಿ.ಎಂ., ಮಂತ್ರಿಗಳು ವಿದ್ಯಾರ್ಥಿಗಳಿಗೆ ಫೆಲೋಶಿಪ್‌ ಕೊಡಿಸುವ ಕೆಲಸ ಮಾಡಿದರೆ ಶಹಬ್ಬಾಷ್‌ ಅನ್ನಬಹುದಿತ್ತು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ವಿದ್ಯಾರ್ಥಿ ವೇತನ ಕೊಡಲಾಗದಿದ್ದರೆ ಜನಪರ ಕೆಲಸಗಳೇನು ಮಾಡುತ್ತಾರೆ. ಇದರ ಬಗ್ಗೆ ನಮ್ಮ ಪಕ್ಷದ ಶಾಸಕರು ಸದನದಲ್ಲಿ ಧ್ವನಿ ಎತ್ತುವರು’ ಎಂದು ಮಾಜಿಸಂಸದ ವಿ.ಎಸ್‌. ಉಗ್ರಪ್ಪ ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT