ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಾಯನಿಕ ಬಳಸಿ ಉಬ್ಬು ಶಿಲ್ಪ ಸ್ವಚ್ಛ; ಕಂಗೊಳಿಸಲಿದೆ ಹಂಪಿ ಕೃಷ್ಣ ದೇಗುಲ

20 ಜನರ ತಂಡದಿಂದ ಕೆಲಸ
Last Updated 20 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು (ಎ.ಎಸ್‌.ಐ.) ತಾಲ್ಲೂಕಿನ ಹಂಪಿ ಕೃಷ್ಣ ದೇಗುಲದ ಜೀರ್ಣೊದ್ಧಾರ ಕೆಲಸ ಕೈಗೆತ್ತಿಕೊಂಡಿದೆ.

ಮೈಸೂರಿನಿಂದ ಇಲ್ಲಿಗೆ ಬಂದಿರುವ ಎ.ಎಸ್‌.ಐ.ನ ನುರಿತ ತಂಡ ಹಾಗೂ ಸ್ಥಳೀಯರು ಸೇರಿದಂತೆ ಒಟ್ಟು 20 ಜನ ಸೇರಿಕೊಂಡು ದೇವಸ್ಥಾನಕ್ಕೆ ಮೊದಲಿನ ರೂಪ ಕೊಡುತ್ತಿದ್ದಾರೆ.

ದೇವಸ್ಥಾನದ ಒಳ ಹಾಗೂ ಹೊರ ಭಾಗದಲ್ಲಿ ಬಿದಿರಿನ ಕಟ್ಟಿಗೆಗಳನ್ನು ಕಟ್ಟಿಕೊಂಡಿದ್ದು, ಅದರ ಮೇಲೆ ನಿಂತುಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ರಸಾಯನಿಕದಿಂದ ದೇಗುಲದ ಕಲ್ಲು ಬಂಡೆಗಳು, ಅದರ ಮೇಲೆ ಕೆತ್ತನೆ ಮಾಡಿರುವ ಉಬ್ಬು ಶಿಲ್ಪಗಳು, ಮೂರ್ತಿಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಇದರಿಂದಾಗಿ ನಿಧಾನವಾಗಿ ದೇವಸ್ಥಾನ ಮೊದಲಿನ ರೂಪಕ್ಕೆ ತಿರುಗುತ್ತಿದೆ.

ವಾಹನಗಳ ಹೊಗೆ, ದೂಳು, ಜಾಡು ಕಟ್ಟಿಕೊಂಡು ದೇವಸ್ಥಾನ ಕಳೆಗುಂದಿತ್ತು. ಕೆಲವು ಭಕ್ತರು ಮೂರ್ತಿಗಳು, ಉಬ್ಬು ಶಿಲ್ಪಗಳಿಗೆ ವಿಭೂತಿ ಹಚ್ಚಿದ್ದರು. ದೀರ್ಘಕಾಲದಿಂದ ಈ ರೀತಿ ನಡೆಯುತ್ತ ಬಂದಿರುವುದರಿಂದ ಅದರ ಮೂಲ ಚಹರೆಯೇ ಬದಲಾಗಿತ್ತು. ಈಗ ಇಡೀ ದೇಗುಲವನ್ನು ರಸಾಯನಿಕದಿಂದ ಸ್ವಚ್ಛಗೊಳಿಸಿ, ಮೊದಲಿನ ಸ್ಥಿತಿಗೆ ತರಲಾಗುತ್ತಿದೆ.

ಎರಡು ವರ್ಷಗಳ ಹಿಂದೆ ವಿರೂಪಾಕ್ಷೇಶ್ವರ ದೇಗುಲದ ಬಿಷ್ಟಪ್ಪಯ್ಯ ಗೋಪುರವನ್ನು ಜೀರ್ಣೊದ್ಧಾರಗೊಳಿಸಲಾಗಿತ್ತು. ಆಗ ರಸಾಯನಿಕದಿಂದ ಸ್ವಚ್ಛಗೊಳಿಸಿ, ನಂತರ ನೈಸರ್ಗಿಕ ಬಣ್ಣ ಬಳಿಯಲಾಗಿತ್ತು. ಅದಾದ ನಂತರ ಅನಂತಶಯನಗುಡಿ, ಹಜಾರರಾಮ ದೇಗುಲಗಳನ್ನು ಅಭಿವೃದ್ಧಿ ಪಡಿಸಲಾಗಿತ್ತು. ಈಗ ಕೃಷ್ಣ ದೇಗುಲದ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ.

‘ಹಂಪಿ ಪರಿಸರದಲ್ಲಿ ಸಾಕಷ್ಟು ಸ್ಮಾರಕಗಳಿವೆ. ಪ್ರತಿಯೊಂದಕ್ಕೂ ಅವುಗಳದ್ದೇ ಆದ ಮಹತ್ವವಿದೆ. ಹೊಗೆ, ದೂಳು, ಜನರಿಂದ ಅವುಗಳ ಮೂಲ ಸ್ವರೂಪವೇ ಮಾಯವಾಗಿತ್ತು. ಈಗ ಅವುಗಳಿಗೆ ರಸಾಯನಿಕದಿಂದ ಸ್ವಚ್ಛಗೊಳಿಸಲಾಗುತ್ತಿದೆ. ಈಗ ಕೃಷ್ಣ ದೇಗುಲದ ಜೀರ್ಣೊದ್ಧಾರ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಸಂಪೂರ್ಣ ಕೆಲಸ ಮುಗಿದ ನಂತರ ಅದು ನಿರ್ಮಾಣಗೊಂಡಾಗ ಹೇಗಿತ್ತೋ ಆ ರೀತಿ ಕಾಣಿಸಿಕೊಳ್ಳಲಿದೆ’ ಎಂದು ಎ.ಎಸ್‌.ಐ. ಹಂಪಿ ವೃತ್ತದ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT