ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಹಿನ್ನೋಟ: ಹ್ಯಾಟ್ರಿಕ್‌ ಗಟ್ಟಿಗಿತ್ತಿ ಬಸವರಾಜೇಶ್ವರಿ

ಶಾಸಕಿ, ಸಂಸದೆ, ಸಚಿವೆಯಾಗಿ ಮಿಂಚಿದ್ದ ನಾಯಕಿ * ಕುಟುಂಬ ರಾಜಕಾರಣವನ್ನೂ ಎದುರಿಸಿದ್ದ ದಿಟ್ಟೆ
Published 24 ಏಪ್ರಿಲ್ 2024, 4:59 IST
Last Updated 24 ಏಪ್ರಿಲ್ 2024, 4:59 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಪ್ರಖರವಾಗಿ ಹೊಳೆಯುವ ಹೆಸರು ಕೇಂದ್ರದ ಮಾಜಿ ಸಚಿವೆ ಬಸವರಾಜೇಶ್ವರಿ.

ಕ್ಷೇತ್ರಕ್ಕೆ ಈ ವರೆಗೆ ನಡೆದಿರುವ ಚುನಾವಣೆಗಳಲ್ಲಿ ಮೂವರು ಮಹಿಳೆಯರಿಗೆ ಇಲ್ಲಿನ ಮತದಾರರು ಮಣೆ ಹಾಕಿದ್ದಾರೆ. ಈ ಪೈಕಿ ಬಸವರಾಜೇಶ್ವರಿ ಸತತ ಮೂರು ಬಾರಿ ಸಂಸದರಾಗಿ, ಕೇಂದ್ರದ ಮಂತ್ರಿಯಾಗಿ ಛಾಪು ಮೂಡಿಸಿದ್ದರು. ಇನ್ನುಳಿದಂತೆ ಸೋನಿಯಾ ಗಾಂಧಿ ಮತ್ತು ಜೆ. ಶಾಂತಾ ಅವರು ತಲಾ ಒಂದು ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ.

1954ರಲ್ಲೇ ಕಾಂಗ್ರೆಸ್‌ ಸೇರಿದ್ದ ಬಸವರಾಜೇಶ್ವರಿ ಅವರು 1984ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದ್ದರು. ಎದುರಾಳಿ ಜೆಎನ್‌ಪಿ ಪಕ್ಷದ ಎಂ.ಪಿ. ಪ್ರಕಾಶ್‌ ಅವರನ್ನು 72,286 ಮತಗಳ ಅಂತರದಿಂದ ಸೋಲಿಸಿ ದೊಡ್ಡ ಜಯ ದಾಖಲಿಸಿದ್ದರು. 1989ರ ಸಾರ್ವತ್ರಿಕ ಚುನಾವಣೆಯಲ್ಲಿ ಬಸವರಾಜೇಶ್ವರಿ ಪುನರಾಯ್ಕೆಯಾದರು. ಅವರು ಜನತಾ ದಳದ ಎನ್‌. ತಿಪ್ಪಣ್ಣ ಅವರನ್ನು 76,085 ಮತಗಳಿಂದ ಸೋಲಿಸಿದ್ದರು. 1991ರಲ್ಲಿ ಬಸವರಾಜೇಶ್ವರಿ ಜನತಾದಳದ ವೈ. ನೆಟ್ಟಕಲ್ಲಪ್ಪ ಅವರನ್ನು 65,981 ಮತಗಳಿಂದ ಮಣಿಸಿದ್ದರು.

ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಬಸವರಾಜೇಶ್ವರಿ ಅವರನ್ನು ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್‌ ಅವರು ತಮ್ಮ ಸರ್ಕಾರದ ಕೊನೇ ಅವಧಿಯಲ್ಲಿ (1993ರ ಜನವರಿ 19ರಿಂದ 1995ರ ಸೆ.15ರ ವರೆಗೆ) ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಸರ್ಕಾರದಲ್ಲಿ ಅವರು, ಮಾನವ ಸಂಪನ್ಮೂಲ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಸಚಿವೆಯಾಗಿದ್ದರು.

ಕಾಂಗ್ರೆಸ್‌ನಲ್ಲಿದ್ದು ಹಂತ ಹಂತವಾಗಿ ಅಧಿಕಾರಕ್ಕೇರಿದ್ದ ಬಸವರಾಜೇಶ್ವರಿ ಅವರು 2004ರಲ್ಲಿ ಬಿಜೆಪಿ ಸೇರಿದ್ದರು. ಆ ಮೂಲಕ ಕಾಂಗ್ರೆಸ್‌ನೊಂದಿಗಿನ ತಮ್ಮ 50 ವರ್ಷಗಳ ಸಂಬಂಧವನ್ನು ಅಂತ್ಯಗೊಳಿಸಿದ್ದರು. 2008ರ ಫೆಬ್ರುವರಿಯಲ್ಲಿ ಅವರು ನಿಧನರಾದರು.

ಮಾನ್ವಿಯ ಹ್ಯಾಟ್ರಿಕ್‌ ಶಾಸಕಿ: ಬಸವರಾಜೇಶ್ವರಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಹ್ಯಾಟ್ರಿಕ್‌ ಸಂಸದೆಯಷ್ಟೇ ಅಲ್ಲ. ಪಕ್ಕದ ರಾಯಚೂರು ಜಿಲ್ಲೆಯ ಮಾನ್ವಿ ಕ್ಷೇತ್ರದ ಹ್ಯಾಟ್ರಿಕ್‌ ಶಾಸಕಿಯೂ ಹೌದು. 1957ರಿಂದ 1972ರ ವರೆಗೆ ಅವರು ಮಾನ್ವಿಯಿಂದ ಸತತ ಮೂರು ಬಾರಿ ಗೆಲುವು ಸಾಧಿಸಿದ್ದರು.

1968ರಿಂದ 1971ರ ನಡುವೆ ವೀರೇಂದ್ರ ಪಾಟೀಲರ ಸರ್ಕಾರದಲ್ಲಿ ಕರ್ನಾಟಕದ ಸಮಾಜ ಕಲ್ಯಾಣ ಸಚಿವೆಯಾಗಿಯೂ ಸೇವೆ ಸಲ್ಲಿಸಿದ್ದರು. ನಂತರ ಎರಡು ಅವಧಿಗೆ (1976 ಮತ್ತು 1984ರ ವರೆಗೆ) ಅವರು ವಿಧಾನಪರಿಷತ್‌ ಸದಸ್ಯೆಯಾಗಿಯೂ ಆಯ್ಕೆಯಾಗಿದ್ದರು. 1984ರಲ್ಲಿ ಮಗ್ಗುಲು ಬದಲಿಸಿದ್ದ ಅವರ ರಾಜಕೀಯ ಜೀವನ ರಾಷ್ಟ್ರ ರಾಜಕಾರಣದತ್ತ ಹೊರಳಿತ್ತು.

ರಾಜ್ಯದ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಬಸವರಾಜೇಶ್ವರಿ  (ಚಿತ್ರ: facebook.com/smt.basavarajeshwari)
ರಾಜ್ಯದ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಬಸವರಾಜೇಶ್ವರಿ  (ಚಿತ್ರ: facebook.com/smt.basavarajeshwari)

ರಾಜೀನಾಮೆ ಕೇಳಿದ್ದ ರಾವ್

ಭಾರತದ ಪ್ರತಿನಿಧಿಯಾಗಿ ಜಾಗತಿಕ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುವ ಅವಕಾಶ ಬಸವರಾಜೇಶ್ವರಿ ಅವರಿಗೆ ದಕ್ಕಿತ್ತು. ಮಹಿಳೆಯರ ಅಧಿಕಾರ ಮತ್ತು ಅಭಿವೃದ್ಧಿ ಕುರಿತಂತೆ ಮಾತನಾಡಲು 1995ರಲ್ಲಿ ಬೀಜಿಂಗ್‌ನ ಮಹಿಳಾ ಸಮಾವೇಶಕ್ಕೆ ತೆರಳಿದ್ದ ಸಂದರ್ಭದಲ್ಲಿಯೇ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಬಸವರಾಜೇಶ್ವರಿಗೆ ಅವರಿಗೆ ತುರ್ತುಕರೆ ಮಾಡಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೇಳಿದ್ದರು! ‘ಯಾಕೆ ಹೀಗಾಯ್ತು ಎಂಬ ಪ್ರಶ್ನೆ ಇಂದಿಗೂ ಒಗಟಾಗಿಯೇ ಉಳಿದಿದೆ’ ಎಂದು ಬಸವರಾಜೇಶ್ವರಿ ಅವರು ಹೇಳಿಕೊಂಡಿದ್ದರು. ಕರ್ನಾಟಕ ವಿಧಾನಸಭೆ 2006ರಲ್ಲಿ ಹೊರತಂದಿದ್ದ ‘ಪರಿಭಾವಂತ ಸಂಸದೀಯ ಪಟು– ಬಸವರಾಜೇಶ್ವರಿ’ ಎಂಬ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT