ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಗೆ ನಾಡಿನ ಮನ ಗೆದ್ದಿದ್ದ ಸುಷ್ಮಾ

Last Updated 7 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಹೂವಿನಹಡಗಲಿ: 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸೋನಿಯಾಗಾಂಧಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್, ಮಲ್ಲಿಗೆ ನಾಡು ಹೂವಿನಹಡಗಲಿಯಲ್ಲಿ ಗೆದ್ದು ಬೀಗಿದ್ದರು.

ಆಗ ಲೋಕಸಭೆ, ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆದಿತ್ತು. ಎನ್.ಡಿ.ಎ. ಮೈತ್ರಿಕೂಟದ ಅಭ್ಯರ್ಥಿಯಾಗಿ ಲೋಕಸಭೆಗೆ ಸುಷ್ಮಾ ಸ್ವರಾಜ್, ವಿಧಾನಸಭೆಗೆ ಸಂಯುಕ್ತ ಜನತಾದಳದಿಂದ (ಜೆ.ಡಿ.ಯು) ಎಂ.ಪಿ.ಪ್ರಕಾಶ್ ಸ್ಪರ್ಧಿಸಿದ್ದರು. ಈ ಚುನಾವಣಾ ಫಲಿತಾಂಶ ಪ್ರಕಟಗೊಂಡಾಗ ಹಡಗಲಿ ಕ್ಷೇತ್ರದ ಮತಗಳ ಅಂಕಿಅಂಶ ನೋಡಿ ಸುಷ್ಮಾ ಸ್ವರಾಜ್ ಹುಬ್ಬೇರಿಸಿದ್ದರು.

ಗೆಲುವು ಸಾಧಿಸಿದ್ದ ಸೋನಿಯಾಗಾಂಧಿಗೆ ಹಡಗಲಿಯಲ್ಲಿ ಹಿನ್ನಡೆಯಾಗಿದ್ದರೆ, ಸೋತ ಸುಷ್ಮಾ ಸ್ವರಾಜ್ ಆರು ಸಾವಿರ ಮತಗಳ ಮುನ್ನಡೆ ಸಾಧಿಸಿದ್ದರು. ವಿಧಾನಸಭೆಗೆ ಕಾಂಗ್ರೆಸ್ ಅಭ್ಯರ್ಥಿ ನಂದಿಹಳ್ಳಿ ಹಾಲಪ್ಪ ಆಯ್ಕೆಯಾದರೆ ಎನ್. ಡಿ.ಎ. ಅಭ್ಯರ್ಥಿ ಎಂ.ಪಿ.ಪ್ರಕಾಶ ಪರಾಭವಗೊಂಡಿದ್ದರು. ಅಡ್ಡ ಮತ ಚಲಾವಣೆಯ ಈ ಚುನಾವಣಾ ಫಲಿತಾಂಶ ಹಡಗಲಿ ಕ್ಷೇತ್ರದ ರಾಜಕೀಯ ಚರಿತ್ರೆಯಲ್ಲಿ ದಾಖಲೆಯಾಗಿ ಉಳಿದಿದೆ.

ಕ್ಷೇತ್ರದ ಹಳ್ಳಿಗಳಲ್ಲಿ ಪ್ರಚಾರ ಮಾಡಿದ್ದ ಸುಷ್ಮಾ ಕನ್ನಡದಲ್ಲಿಯೇ ಮಾತನಾಡಿ ಜನರನ್ನು ಭಾವನಾತ್ಮಕವಾಗಿ ಸೆಳೆದಿದ್ದರು. ಆಗ ಸಾರ್ವತ್ರಿಕ ಚುನಾವಣೆ ಶ್ರಾವಣ ಮಾಸದಲ್ಲೇ ಬಂದಿತ್ತು. ಪ್ರಚಾರ ಕಾರ್ಯಕ್ಕೆ ಹೋದಲೆಲ್ಲಾ ನಾಲ್ಕಾರು ಮನೆಗಳಿಗೆ ಭೇಟಿ ನೀಡಿ ಅರಿಷಿಣ, ಕುಂಕುಮ ಸ್ವೀಕರಿಸುತ್ತಿದ್ದರು. ವಿವಿಧ ಪೂಜಾ ಕಾರ್ಯಗಳಲ್ಲಿ ಭಾಗವಹಿಸಿ ಸರಳತೆ ಮೆರೆಯುವ ಮೂಲಕ ಮಲ್ಲಿಗೆ ನಾಡಿನ ಜನರ ಮನಸ್ಸು ಗೆದ್ದಿದ್ದರು.

ಕಮಲ ಅರಳುವಂತೆ ಮಲ್ಲಿಗೆ ನೆಲವನ್ನು ಹದಗೊಳಿಸುವಲ್ಲಿ ಸುಷ್ಮಾ ಸ್ವರಾಜ್ ಅವರ ಪಾತ್ರ ದೊಡ್ಡದು. ಭಾವನಾತ್ಮಕ ವಿಷಯಗಳನ್ನು ಬಿತ್ತಿ ಬಿಜೆಪಿ ಸಂಘಟನೆ ಬೇರೂರಲು ಅವರು ಕಾರಣರಾದರು. ಇದರ ಫಲವಾಗಿ ಬಿಜೆಪಿಗೆ ನೆಲೆಯೇ ಇಲ್ಲದಿದ್ದರೂ 2008ರಲ್ಲಿ ಕಮಲ ಅರಳಿ ಚಂದ್ರನಾಯ್ಕ ಶಾಸಕರಾದರು. ವಿಧಿವಶರಾಗಿರುವ ಸುಷ್ಮಾ ಅವರನ್ನು ಕ್ಷೇತ್ರದ ಜನತೆ ನೆನೆದು, ಹಿಂದಿನ ಚುನಾವಣೆಯಲ್ಲಿ ಭಾಗವಹಿಸಿದ್ದ ದಿನಗಳನ್ನು ಮೆಲಕು ಹಾಕುತ್ತಿದ್ದಾರೆ.

‘ನಮ್ಮ ಮನೆಗೆ ಬಂದಿದ್ದ ಸುಷ್ಮಾ ಅಮ್ಮನವರಿಗೆ ಅಭಿಮಾನದಿಂದ ಲಂಬಾಣಿ ಉಡುಗೆ ತೊಡಿಸಿದ್ದೆವು. ಅವರು ಇಡೀ ದಿನ ಅದೇ ಉಡುಗೆಯಲ್ಲೇ ವಿವಿಧ ತಾಂಡಾಗಳಲ್ಲಿ ಪ್ರಚಾರ ಮಾಡಿದ್ದರು. ನಾನು ಗ್ರಾಮ ಪಂಚಾಯ್ತಿಗೆ ಎರಡನೇ ಬಾರಿ ಅಧ್ಯಕ್ಷೆಯಾಗಿರುವುದನ್ನು ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮುಂದೆ ನಿನಗೆ ಒಳ್ಳೆಯ ಭವಿಷ್ಯವಿದೆ ಎಂದು ಹಾರೈಸಿದ್ದರು’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಎಸ್.ಎಂ.ಲಲಿತಾಬಾಯಿ ಸೋಮಿನಾಯ್ಕ ನೆನೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT