ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ–ಬಳ್ಳಾರಿ ಚತುಷ್ಪಥಕ್ಕೆ ಮುಕ್ತಿ ಯಾವಾಗ?- ಆಮೆಗತಿ ಕಾಮಗಾರಿ

2017ರಲ್ಲಿ ಆರಂಭಗೊಂಡ ಕಾಮಗಾರಿ ಇನ್ನೂ ಆಮೆಗತಿಯಲ್ಲೇ ಸಾಗಿದೆ
Last Updated 15 ನವೆಂಬರ್ 2021, 11:52 IST
ಅಕ್ಷರ ಗಾತ್ರ

ಹೊಸಪೇಟೆ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಹೊಸಪೇಟೆ–ಬಳ್ಳಾರಿ ನಡುವಿನ ಚತುಷ್ಪಥ ಕಾಮಗಾರಿ ಮುಗಿದು ಎರಡು ವರ್ಷಗಳಾಗುತ್ತಿತ್ತು. ಆದರೆ, ಆಮೆಗತಿಯಲ್ಲಿ ಕೆಲಸ ಸಾಗಿರುವುದರಿಂದ ಜನರ ಬವಣೆ ತಪ್ಪಿಲ್ಲ.

ಈ ಚತುಷ್ಪಥ ಪೂರ್ಣಗೊಂಡಿದ್ದರೆ ಹೊಸಪೇಟೆಯಿಂದ ಬಳ್ಳಾರಿಗೆ 45 ನಿಮಿಷಗಳಲ್ಲಿ ಕ್ರಮಿಸಬಹುದಾಗಿತ್ತು. ಆದರೆ, ಬಹುತೇಕ ಕಡೆ ಅರ್ಧಂಬರ್ಧ ಕಾಮಗಾರಿ, ಕಿರು ಸೇತುವೆ, ಮೇಲುಸೇತುವೆ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿರುವುದರಿಂದ ಈಗಲೂ ಬಳ್ಳಾರಿಗೆ ಕ್ರಮಿಸಲು ಒಂದೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತದೆ.

ತಾಲ್ಲೂಕಿನ ವಡ್ಡರಹಳ್ಳಿ, ಪಾಪಿನಾಯಕನಹಳ್ಳಿ, ಧರ್ಮಸಾಗರ, ಬೈಲುವದ್ದಿಗೇರಿ ಬಳಿ ಬೈಪಾಸ್‌ ನಿರ್ಮಿಸಲಾಗಿದೆ. ಆದರೆ, ಇನ್ನೂ ಅದಕ್ಕೆ ಸಂಪರ್ಕ ಕಲ್ಪಿಸದ ಕಾರಣ ಬಸ್ಸು, ಅದಿರಿನ ಲಾರಿಗಳು, ಕೈಗಾರಿಕೆಗಳಿಗೆ ಕಚ್ಚಾ ವಸ್ತು ಪೂರೈಸುವ ಸರಕು ಸಾಗಣೆ ಲಾರಿಗಳು ಗ್ರಾಮಗಳಿಂದಲೇ ಹಾದು ಹೋಗುತ್ತಿವೆ. ಮಳೆ ಬಂದಾಗಲೆಲ್ಲಾ ಗುಂಡಿಗಳು ನಿರ್ಮಾಣವಾಗುತ್ತವೆ. ಅವುಗಳನ್ನು ಮುಚ್ಚುವುದೇ ದೊಡ್ಡ ಕೆಲಸವಾಗಿದೆ.

ಹಲವೆಡೆ ಒಂದು ಬದಿಯಲ್ಲಿ ಮಾತ್ರ ಸಿ.ಸಿ. ರಸ್ತೆ ನಿರ್ಮಿಸಲಾಗಿದೆ. ಅದನ್ನು ರೈತರು ಕಣವಾಗಿ ಮಾಡಿಕೊಂಡಿದ್ದಾರೆ. ಭತ್ತ, ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳನ್ನು ಒಣ ಹಾಕುತ್ತಿದ್ದಾರೆ. ಇನ್ನೊಂದು ಬದಿಯಲ್ಲಿ ರಸ್ತೆ ನಿರ್ಮಿಸದ ಕಾರಣ ಹಳೆಯ ರಸ್ತೆಯಲ್ಲೇ ಎದುರು–ಬದುರು ವಾಹನಗಳು ಸಂಚರಿಸುವ ಅನಿವಾರ್ಯತೆ ಇದೆ. ಕಿರಿದಾದ ಈ ರಸ್ತೆಯಲ್ಲಿ ಅಪಘಾತಗಳು ಸರ್ವೇ ಸಾಮಾನ್ಯ.

ಅದರಲ್ಲೂ ದ್ವಿಚಕ್ರ ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಇದೆ. ಇಷ್ಟೆಲ್ಲ ಗಂಭೀರ ಪರಿಸ್ಥಿತಿಯಿದ್ದರೂ ರಾಷ್ಟ್ರೀಯ ಹೆದ್ದಾರಿ 63ರ ಚತುಷ್ಪಥ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ ಎಂಬ ಪ್ರಶ್ನೆಗೆ ಸದ್ಯ ಯಾವುದೇ ಉತ್ತರವಿಲ್ಲ. ‘ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಹೆಸರು ಹೇಳಲಿಚ್ಛಿಸದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಿದ್ಧ ಉತ್ತರ ನೀಡುತ್ತಾರೆ.

2017ರಲ್ಲಿ ಆರಂಭಗೊಂಡಿರುವ ಈ ಕಾಮಗಾರಿ 2019ನೇ ಸಾಲಿನ ಮಾರ್ಚ್‌ನಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, 2021ನೇ ವರ್ಷ ಮುಗಿಯಲು ಬಂದರೂ ಯಾವುದೇ ಹೇಳಿಕೊಳ್ಳುವಂತಹ ಪ್ರಗತಿಯಾಗಿಲ್ಲ.

ಹೊಸಪೇಟೆಯಿಂದ ಬಳ್ಳಾರಿ ಮೂಲಕ ಆಂಧ್ರಪ್ರದೇಶದ ಗುಂತಕಲ್‌ ರಸ್ತೆ ವರೆಗೆ 95.37 ಕಿ.ಮೀ ಚತುಷ್ಪಥ ಕಾಮಗಾರಿ 2017ರ ಮಾರ್ಚ್‌ನಲ್ಲಿ ಆರಂಭಗೊಂಡಿತ್ತು. ಆರಂಭದಲ್ಲಿ ಪಿ.ಎನ್‌.ಸಿ. ಕಂಪನಿಗೆ ರಸ್ತೆ ನಿರ್ಮಾಣದ ಜವಾಬ್ದಾರಿ ವಹಿಸಲಾಗಿತ್ತು. ಆದರೆ, ಸಿಬ್ಬಂದಿ ಕೊರತೆಯಿಂದ ಕಂಪನಿ ಹಿಂದೆ ಸರಿದಿತ್ತು. ಮರು ಟೆಂಡರ್‌ ಕರೆದು, ಗ್ಯಾಮನ್‌ ಇಂಡಿಯಾ ಕಂಪನಿಗೆ ವಹಿಸಲಾಯಿತು. ಆರಂಭದ ಆರು ತಿಂಗಳು ಶರವೇಗದಲ್ಲಿ ಕಾಮಗಾರಿ ನಡೆಯಿತು. ಬಳಿಕ ಮಣ್ಣಿನ ಕೊರತೆ, ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಇಡೀ ಕಾಮಗಾರಿ ನಿಂತು ಹೋಗಿತ್ತು. ಈಗ ಪುನಃ ಕಾಮಗಾರಿ ಆರಂಭಗೊಂಡಿದೆ. ಆದರೆ, ಆಮೆಗತಿಯಲ್ಲಿ.

95.37 ಕಿ.ಮೀ ಚತುಷ್ಪಥ ನಿರ್ಮಾಣಕ್ಕೆ ₹867 ಕೋಟಿ ಅಂದಾಜು ವೆಚ್ಚದ ಯೋಜನೆ ಹಾಕಿಕೊಳ್ಳಲಾಗಿತ್ತು. ಈಗ ನಾಲ್ಕು ವರ್ಷ ವಿಳಂಬವಾಗಿದ್ದರಿಂದ ಸಹಜವಾಗಿಯೇ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಜನಸಾಮಾನ್ಯರ ತೆರಿಗೆ ಹಣಕ್ಕೆ ಯಾವುದೇ ಬೆಲೆಯಿಲ್ಲವೇ ಎನ್ನುವುದು ಸಾರ್ವಜನಿಕರ ಪ್ರಶ್ನೆ.

ಹೊಸಪೇಟೆ–ಬಳ್ಳಾರಿ–ಗುಂತಕಲ್‌ ರಸ್ತೆ ವರೆಗಿನ ಚತುಷ್ಪಥ ಹೀಗಿರುತ್ತೆ
* 95.37 ಕಿ.ಮೀ ಚತುಷ್ಪಥ ನಿರ್ಮಾಣ
* 7.92 ಕಿ.ಮೀ ಹೊಸಪೇಟೆ ಬೈಪಾಸ್‌
* 4.44 ಕಿ.ಮೀ ತೋರಣಗಲ್ಲು ಬೈಪಾಸ್‌
* 4.12 ಕಿ.ಮೀ ಕುಡಿತಿನಿ ಬೈಪಾಸ್‌
* 28.49 ಕಿ.ಮೀ ಬಳ್ಳಾರಿ ಬೈಪಾಸ್‌
* 2 ದೊಡ್ಡ ಸೇತುವೆಗಳು
* 64 ಕಿರು ಸೇತುವೆಗಳು
* 2 ಮೇಲ್ಸೇತುವೆ
* 2 ಟೋಲ್‌ ಗೇಟ್‌
* 10 ಅಂಡರ್‌ಪಾಸ್‌

ಅರೆ ಬರೆ ಕಾಮಗಾರಿ

ಕೂಡ್ಲಿಗಿ: ಪಟ್ಟಣದಲ್ಲಿ ಕೈಗೊಂಡಿರುವ ಒಳ ಚರಂಡಿ ಯೋಜನೆಯ ಕಾಮಗಾರಿ ಅನೇಕ ಕಡೆ ಸಮರ್ಪಕವಾಗಿಲ್ಲ.
ಒಳಚರಂಡಿಗೆ ಪೈಪುಗಳನ್ನು ಹಾಕುವಾಗ ರಸ್ತೆಗಳನ್ನು ಅಗೆಯಲಾಗಿದೆ. ಆದರೆ, ಅವುಗಳನ್ನು ಸರಿಯಾಗಿ ಮುಚ್ಚಿಲ್ಲ. ಚೇಂಬರ್‌ಗಳು ರಸ್ತೆಗಿಂತ ಎತ್ತರದಲ್ಲಿರುವುದರಿಂದ ಸಂಚಾರ ದುಸ್ತರವಾಗಿದೆ. ಅನೇಕ ಸಲ ವಾಹನ ಸವಾರರು ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ. ಹೀಗಿದ್ದರೂ ಅಧಿಕಾರಿಗಳು ಜಾಣ ಮೌನಕ್ಕೆ ಜಾರಿದ್ದಾರೆ.

‘ನೆಮ್ಮದಿ ಊರು’ ಅರೆಬರೆ
ಹೂವಿನಹಡಗಲಿ: ಪಟ್ಟಣದಲ್ಲಿ ಐದು ವರ್ಷಗಳ ಹಿಂದೆ ಅನುಷ್ಠಾನಗೊಂಡ ‘ನೆಮ್ಮದಿ ಊರು’ ಯೋಜನೆ ಅರೆಬರೆಯಾಗಿದೆ. ಹಳೆ ಸಂತೆ ಮೈದಾನದಲ್ಲಿ ಅಪೂರ್ಣಗೊಂಡಿರುವ ವಾಣಿಜ್ಯ ಸಂಕೀರ್ಣ ಕಟ್ಟಡ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.
2016ರಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ‘ಮ್ಯಾಕ್ರೋ’ ಯೋಜನೆ ಅಡಿ ‘ನೆಮ್ಮದಿ ಊರು’ ಯೋಜನೆಗೆ ₹7 ಕೋಟಿ ಮಂಜೂರಾಗಿತ್ತು. ಸಂತೆ ಮೈದಾನದಲ್ಲಿ ₹1.75 ಕೋಟಿ ಮೊತ್ತದ ವಾಣಿಜ್ಯ ಮಹಲ್‌, ₹1.64 ಕೋಟಿ ವೆಚ್ಚದ ಟೌನ್ ಹಾಲ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ನಿರ್ಮಿತಿ ಕೇಂದ್ರದವರು ಲಭ್ಯ ಅನುದಾನ ಮುಗಿಯುವವರೆಗೆ ಮಾತ್ರ ನಿರ್ಮಾಣ ಕೆಲಸ ಕೈಗೊಂಡು ಕಾಮಗಾರಿಗಳನ್ನು ಅಪೂರ್ಣಗೊಳಿಸಿದ್ದಾರೆ. ಬಾಕಿ ಅನುದಾನ ಬಿಡುಗಡೆಗೊಳಿಸುವಲ್ಲಿ ಯಾರೂ ಇಚ್ಛಾಶಕ್ತಿ ತೋರದ ಕಾರಣ ಕಾಮಗಾರಿಗಳು ಅರೆಬರೆಯಾಗಿ ಉಳಿದಿವೆ. ‘ನೆಮ್ಮದಿ ಊರು ಯೋಜನೆಯನ್ನು ನಿರ್ಮಿತಿ ಕೇಂದ್ರದವರು ಅನುಷ್ಠಾನಗೊಳಿಸಿದ್ದಾರೆ. ಅನುದಾನ ಕೊರತೆಯಿಂದ ಕಾಮಗಾರಿಗಳು ಅಪೂರ್ಣಗೊಂಡಿವೆ’ ಎಂದು ಪುರಸಭೆ ಮುಖ್ಯಾಧಿಕಾರಿ ನಾಸಿರ್ ಬಾಷಾ ತಿಳಿಸಿದ್ದಾರೆ.

ಕುಂಟುತ್ತಾಲೇ ಸಾಗಿರುವ ಕಟ್ಟಡ ಕಾಮಗಾರಿ
ಹಗರಿಬೊಮ್ಮನಹಳ್ಳಿ: ಪಟ್ಟಣ ಸಮೀಪದ ಚಿಂತ್ರಪಳ್ಳಿ ಬಳಿ ₹2.34 ಕೋಟಿ ಮೊತ್ತದಲ್ಲಿ ನಿರ್ಮಾಣಗೊಳ್ಳುತ್ತಿರುವ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡದ ಕಾಮಗಾರಿ ಅಪೂರ್ಣಗೊಂಡಿದೆ. ಅನುದಾನದ ಕೊರತೆಯಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಕುಂಟುತ್ತಾಲೇ ಸಾಗಿದೆ. ಇದರಿಂದಾಗಿ ಪರಿಶಿಷ್ಟವರ್ಗದ ವಿದ್ಯಾರ್ಥಿಗಳು ಮೂಲಸೌಕರ್ಯಗಳು ಇಲ್ಲದ ಬಾಡಿಗೆ ಕಟ್ಟಡದಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದ್ದಾರೆ.

ಕೆಆರ್‍ಐಡಿಎಲ್ ನಿರ್ಮಾಣದ ಹೊಣೆ ಹೊತ್ತಿದೆ. ಕಾಮಗಾರಿ ಆರಂಭಿಸಲು ವಿಳಂಬ ಮಾಡಿರುವುದೇ ಸಮಸ್ಯೆಗೆ ಮೂಲ ಕಾರಣ. ಮೊದಲ ಕಂತಿನಲ್ಲಿ ಸರ್ಕಾರದಿಂದ ₹1.35 ಕೋಟಿ ಬಿಡುಗಡೆಯಾಗಿದೆ, ಆ ಹಣದಲ್ಲಿಯೇ ಅರ್ಧದಷ್ಟು ಕಾಮಗಾರಿ ನಡೆದಿದೆ. ಹಣಕಾಸು ಇಲಾಖೆ ಮತ್ತು ನಿಗಮದ ನಡುವಿನ ಹಗ್ಗ ಜಗ್ಗಾಟದಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಸರ್ಕಾರ ನೀಡಿದ ಕಾಲಾವಧಿಯಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದರೆ ಉದ್ಘಾಟನೆಗೊಂಡು ಮೂರು ವರ್ಷ ಕಳೆಯುತ್ತಿತ್ತು. ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತಿತ್ತು.
‘ಇನ್ನೂ ಬಾಕಿ ಉಳಿದ ಹಣ ಬಿಡುಗಡೆಯಾದರೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಈ ಕುರಿತು ಪರಿಶಿಷ್ಟ ವರ್ಗದ ಕಲ್ಯಾಣ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ’ ಎಂದು ಕೆಆರ್‌ಐಡಿಎಲ್‌ ಮೇಲ್ವಿಚಾರಕ ಎಲಿಗಾರ ಕುಬೇರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT