ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಸಮೃದ್ಧಿ ಮರೆಸಿದ ಅತಿವೃಷ್ಟಿಯ ನೋವು

ಹೊಸಪೇಟೆ ತಾಲ್ಲೂಕಿನಲ್ಲಿ ಒಟ್ಟು 79 ಮನೆಗಳಿಗೆ ಹಾನಿ; 54 ಮನೆಗೆ ನೀರು
Last Updated 28 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯ ಬಹುತೇಕ ಭಾಗಗಳು ಅತಿವೃಷ್ಟಿಗೆ ಸಾಕ್ಷಿಯಾಗಿವೆ. ಅದಕ್ಕೆ ಹೊಸಪೇಟೆ ತಾಲ್ಲೂಕು ಕೂಡ ಹೊರತಾಗಿಲ್ಲ. ಆದರೆ, ಮಳೆಯಿಂದ ಸಮೃದ್ಧಿ ಸೃಷ್ಟಿಯಾಗಿದ್ದು, ಅದು ಎಲ್ಲವೂ ಮರೆಸುವಂತೆ ಮಾಡಿದ್ದು ಸುಳ್ಳಲ್ಲ.

ಸಾಧಾರಣ ಮಳೆ ಅಥವಾ ಕೊರತೆ ಮಳೆಗೆ ಸಾಕ್ಷಿಯಾಗುವ ಹೊಸಪೇಟೆಯಲ್ಲಿ ಈ ಸಲ ಸರಾಸರಿಗಿಂತಲೂ ಅಧಿಕ ಮಳೆಯಾಗಿದೆ. ಅದರಲ್ಲೂ ಆಗಸ್ಟ್‌ ಕೊನೆಯಲ್ಲಿ ಸುರಿದ ಭಾರಿ ಮಳೆ ಜನರನ್ನು ಭಾರಿ ಸಂಕಷ್ಟಕ್ಕೆ ತಳ್ಳಿತು. ಹಾನಿಗೂ ಎಡೆಮಾಡಿಕೊಟ್ಟಿತು.

ತಾಲ್ಲೂಕಿನಲ್ಲಿ ಒಟ್ಟು 74 ಮನೆಗಳಿಗೆ ಹಾನಿಯಾಗಿದೆ. ಈಗಾಗಲೇ ಹಾನಿಗೊಂಡ ಮನೆಗಳ ವಿವರ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಇನ್ನಷ್ಟೇ ಪರಿಹಾರ ವಿತರಿಸಬೇಕಿದೆ. 54 ಮನೆಗಳಿಗೆ ಮಳೆ ನೀರು ನುಗ್ಗಿ ಬೆಳೆ, ಕಾಳು ಹಾಳಾಗಿದ್ದು, ಪ್ರತಿಯೊಬ್ಬರಿಗೆ ತಲಾ ₹10 ಸಾವಿರ ಪರಿಹಾರ ವಿತರಿಸಲಾಗಿದೆ.

ತಾಲ್ಲೂಕಿನ ಮರಿಯಮ್ಮನಹಳ್ಳಿ ಹಾಗೂ ಕಮಲಾಪುರ ಹೋಬಳಿಗಳಲ್ಲಿ ಹೆಚ್ಚಿನ ಮನೆಗಳಿಗೆ ಹಾನಿಯಾಗಿದೆ. ಎರಡೂ ಹೋಬಳಿಗಳಲ್ಲಿ ತಲಾ 32 ಮನೆಗಳಿಗೆ ಹಾನಿಯಾದರೆ, ಹೊಸಪೇಟೆಯಲ್ಲಿ 15 ಮನೆಗಳಿಗೆ ಹಾನಿ ಉಂಟಾಗಿದೆ. ಇನ್ನು ಹೊಸಪೇಟೆಯಲ್ಲಿ 22 ಮನೆಗಳಿಗೆ ನೀರು ನುಗ್ಗಿದರೆ, ಮರಿಯಮ್ಮನಹಳ್ಳಿ ಹೋಬಳಿಯಲ್ಲಿ 37 ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿ ಜನರನ್ನು ಮಳೆ ಸಂಕಷ್ಟಕ್ಕೆ ದೂಡಿತು. ಆದರೆ, ಜಿಲ್ಲಾಡಳಿತ ತಕ್ಷಣವೇ ₹10 ಸಾವಿರ ಪರಿಹಾರ ಒದಗಿಸಿರುವುದರಿಂದ ಅವರಿಗೆ ಸ್ವಲ್ಪಮಟ್ಟಿನ ನೆರವಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 181.90 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಇದರಲ್ಲಿ ಮೆಕ್ಕೆಜೋಳ ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿದೆ. 59.43 ಹೆಕ್ಟೇರ್‌ ಮೆಕ್ಕೆಜೋಳ ಹಾನಿಯಾಗಿದೆ. 54.58 ಹೆಕ್ಟೇರ್‌ ಹತ್ತಿ, 28.20 ಹೆಕ್ಟೇರ್‌ ಸೂರ್ಯಕಾಂತಿ, 21.13 ಹೆಕ್ಟೇರ್‌ ಭತ್ತ, 5.54 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಜೋಳ ಸಂಪೂರ್ಣ ಹಾಳಾಗಿದೆ.

ಹೆಚ್ಚಿನ ಮಳೆಯಿಂದ ಮನೆ, ಬೆಳೆ ಹಾನಿಯಾಗಿರುವುದು ಒಂದೆಡೆಯಾದರೆ ತಾಲ್ಲೂಕಿನ ಬಹುತೇಕ ಕೆರೆ, ಕಟ್ಟೆಗಳು, ಚೆಕ್‌ ಡ್ಯಾಂಗಳು ಭರ್ತಿಯಾಗಿವೆ. ಸುತ್ತಮುತ್ತಲಿನ ಬೆಟ್ಟಗುಡ್ಡಗಳು ಹಸಿರು ಹೊದ್ದು ನಿಂತಿವೆ. ಸಮೃದ್ಧಿಯ ವಾತಾವರಣ ನೆಲೆಸಿದ್ದು, ತಡವಾಗಿ ಬಿತ್ತನೆ ಮಾಡಿದ ರೈತರಿಗೆ ಅನುಕೂಲವೂ ಆಗಿದೆ.

***

ವಿಜಯನಗರ ಜಿಲ್ಲೆಯಲ್ಲಿ ಏಪ್ರಿಲ್‌ 1ರಿಂದ ಸೆ. 13ರ ವರೆಗೆ ಸುರಿದ ಮಳೆಗೆ ಹಾನಿಯಾದ ಬೆಳೆಗಳ ತಾಲ್ಲೂಕುವಾರು ಹಾನಿ, ಪರಿಹಾರದ ವಿವರ

ತಾಲ್ಲೂಕು; ಹೆಕ್ಟೇರ್‌; ಪರಿಹಾರ (ಲಕ್ಷಗಳಲ್ಲಿ)

ಹೊಸಪೇಟೆ; 181.90; 36.08

ಕೂಡ್ಲಿಗಿ; 18.80; 5.11

ಕೊಟ್ಟೂರು; 10; 1.49

ಹಗರಿಬೊಮ್ಮನಹಳ್ಳಿ; 68.24; 11.88

ಹೂವಿನಹಡಗಲಿ; 924.34; 132.74

ಹರಪನಹಳ್ಳಿ; 4640.86; 648.38

ಆಧಾರ: ಕೃಷಿ ಇಲಾಖೆ, ವಿಜಯನಗರ ಜಿಲ್ಲೆ


ಮೇ ತಿಂಗಳಿಂದ ಸೆಪ್ಟೆಂಬರ್‌ ತನಕ ಸುರಿದ ಮಳೆಗೆ ಹಾನಿಯಾದ ಮನೆಗಳ ವಿವರ

15 ಮನೆಗಳು ಹೊಸಪೇಟೆಯಲ್ಲಿ

32 ಕಮಲಾಪುರ ಹೋಬಳಿ

32 ಮರಿಯಮ್ಮನಹಳ್ಳಿ ಹೋಬಳಿ

22 ಹೊಸಪೇಟೆಯಲ್ಲಿ ಮನೆಗೆ ನೀರು ನುಗ್ಗಿ ಹಾನಿ

37 ಮರಿಯಮ್ಮನಹಳ್ಳಿಯಲ್ಲಿ ಮನೆಗೆ ನೀರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT