ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುರುಗೋಡು: ತುಂಬಿದ ಗುಂಡಿಗನೂರು ಕೆರೆ; 15 ಲಕ್ಷ ಮೀನು ಮರಿಗಳ ಸಾಕಣೆ

ರೈತರ ಮುಖದಲ್ಲಿ ಮಂದಹಾಸ
Published : 23 ಸೆಪ್ಟೆಂಬರ್ 2024, 5:33 IST
Last Updated : 23 ಸೆಪ್ಟೆಂಬರ್ 2024, 5:33 IST
ಫಾಲೋ ಮಾಡಿ
Comments

ಕುರುಗೋಡು: ಮುಂಗಾರು ಆರಂಭದಿಂದ ಉತ್ತಮ ಮಳೆಯಾಗಿರುವುದರಿಂದ ಇಲ್ಲಿಗೆ ಸಮೀಪದ ಗುಂಡಿಗನೂರು ಕೆರೆ ತುಂಬಿದೆ. ಮೀನು ಸಾಕಾಣಿಕೆ, ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

380 ಎಕರೆಯಲ್ಲಿ ವ್ಯಾಪಿಸಿರುವ ಗುಂಡಿಗನೂರು ಕೆರೆ ನೀರನ್ನು ಗುಂಡಿಗನೂರು, ಕ್ಯಾದಿಗೆಹಾಳು, ಹಾವಿನಹಾಳು, ಹಾವಿನಹಾಳು ಕ್ಯಾಂಪ್, ಮುದ್ದಟನೂರು, ಮುದ್ದಟನೂರು ಕ್ಯಾಂಪ್, ಸಿರಿಗೇರಿ ಮತ್ತು ಎಚ್. ವೀರಾಪುರ ಗ್ರಾಮ ವ್ಯಾಪ್ತಿಯಲ್ಲಿ 350 ಎಕರೆ ಕೃಷಿ ಭೂಮಿ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ.

ವಾಣಿಜ್ಯ ಬೆಳೆಗಳಾದ ಭತ್ತ, ಹತ್ತಿ, ಮೆಣಸಿನಕಾಯಿ, ತೋಟಗಾರಿಕೆ ಬೆಳೆಗಳಾದ ಅಂಜೂರ, ಪಪ್ಪಾಯ ಮತ್ತು ದಾಳಿಂಬೆ ಬೆಳೆಯಲಾಗುತ್ತದೆ. ಜತೆಗೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಮೀನುಸಾಕಾಣಿಕೆ ಸಹಕಾರಿ ಸಂಘದ ಸದಸ್ಯರು ಮೀನುಗಾರಿಕೆ ಇಲಾಖೆ ಸಹಾಯ ಧನದಲ್ಲಿ ಪ್ರತಿವರ್ಷ 15 ಲಕ್ಷ ಮೀನಿನ ಮರಿಗಳನ್ನು ಈ ಕೆರೆಯಲ್ಲಿ ಸಾಕುತ್ತಿದ್ದಾರೆ.

ಹೂಳು ತುಂಬಿದ ಕಾರಣ ಕೆರೆಒತ್ತುವರಿ ಪರಿಣಾಮ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆರ್ಥಿಕ ಸಹಾಯದ ₹25 ಲಕ್ಷ ಅನುದಾನದಲ್ಲಿ ಕಳೆದ ವರ್ಷ ಹೂಳೆತ್ತಲಾಗಿದೆ. ಇದರಿಂದ ಕೆರೆಯಲ್ಲಿ ಸಂಗ್ರಹ ಸಾಮರ್ಥ್ಯ ಹೆಚ್ಚಾಗಿದ್ದು ನೀರಿನ ಬವಣೆ ನೀಗಿದೆ. ಈ ವರ್ಷ ಪ್ರಾರಂಭದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಕೆರೆ ಅವಧಿಗೂ ಮುನ್ನ ತುಂಬುತ್ತಿರುವುದು ಸಂತಸ ತಂದಿದೆ ಎಂದು ನೀರು ಬಳಕೆದಾರರ ಸಹಕಾರಿ ಸಂಘದ ಅಧ್ಯಕ್ಷ ಗುಂಡಿಗನೂರು ಪಂಪನ ಗೌಡ ‘ಪ್ರಜಾವಾಣಿ’ ಜತೆ ಮಾಹಿತಿ ಹಂಚಿಕೊಂಡರು.

‘ಪ್ರತಿವರ್ಷ ತುಂಗಭದ್ರಾ ಕೆಳಮಟ್ಟದ ಕಾಲುವೆಯಿಂದ 150 ಕ್ಯುಸೆಕ್ ನೀರು ಹರಿಸಿ ಗುಂಡಿಗನೂರು ಕೆರೆಯನ್ನು ತುಂಬಿಸಲಾಗುತ್ತಿತ್ತು. ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಅವಧಿಗೆ ಮುನ್ನ ಕೆರೆತುಂಬಿದೆ. ಕೆರೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರೈತರ ಬೆಳೆಗೆ ಸಮರ್ಪಕ ನೀರು ದೊರೆಯುತ್ತಿದೆ’ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆ ಎಇಇ ರಾಮರೆಡ್ಡಿ.

ಕೆರೆಯ ಸುತ್ತಮುತ್ತ ಕೆಲವು ವ್ಯಕ್ತಿಗಳು ಮೀನಿನ ಕೆರೆಗಳನ್ನು ನಿರ್ಮಿಸಿಕೊಂಡು ಅನಧಿಕೃತವಾಗಿ ಕೆರೆಯ ನೀರನ್ನು ಬಳಕೆಮಾಡಿಕೊಳ್ಳುತ್ತಿದ್ದಾರೆ. ಕೆಲವರು ಕೆರೆಯ ಅಂಗಳದಲ್ಲಿಯೇ ಮೀನಿನ ಕೆರೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೀನು ಸಾಗಾಣಿಕೆದಾರರ ಸಹಕಾರಿ ಸಂಘದ ಸದಸ್ಯ ಬಿ.ಹನುಮಂತ ಆಗ್ರಹಿಸಿದರು.

ಒತ್ತುವರಿಯಿಂದ 380 ಎಕರೆಯಲ್ಲಿದ್ದ ಕೆರೆ 212 ಎಕರೆಗೆ ಕುಸಿದಿದೆ. ಒತ್ತುವರಿ ತೆರವುಗೊಳಿಸಿದರೆ ನೀರಾವರಿ ಪ್ರದೇಶವನ್ನು ಹೆಚ್ಚಿಸಬಹುದು
-ಪ್ರಕಾಶ ಗೌಡ, ನೀರು ಬಳಕೆದಾರರ ಸಹಕಾರ ಸಂಘದ ಉಪಾಧ್ಯಕ್ಷ ಗುಂಡಿಗನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT