ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಕೊಟ್ಟೂರಿನ ‘ರ್‍ಯಾಂಕ್‌ ಕಾಲೇಜು’

ಒಂದೂವರೆ ದಶಕದಲ್ಲಿ ಗಮನಾರ್ಹ ಸಾಧನೆ; 2015ರಿಂದ ಸತತವಾಗಿ ರಾಜ್ಯಕ್ಕೆ ಮೊದಲ ರ್‍ಯಾಂಕ್‌
Last Updated 20 ಜೂನ್ 2022, 19:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಶೈಕ್ಷಣಿಕ ಕ್ಷೇತ್ರದಲ್ಲಿ ಕೊಟ್ಟೂರಿನ ‘ಇಂದು’ ಕಾಲೇಜು ಒಂದೂವರೆ ದಶಕದಲ್ಲಿ ಗಮನಾರ್ಹ ಸಾಧನೆ ಮಾಡುವುದರ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ‘ರ್‍ಯಾಂಕ್‌ ಕಾಲೇಜು’ ಎಂಬ ಖ್ಯಾತಿ ಗಳಿಸಿದೆ.

ಅದರಲ್ಲೂ 2015ರಿಂದ ಸತತವಾಗಿ ಈ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳು ರಾಜ್ಯಕ್ಕೆ ಮೊದಲ ರ್‍ಯಾಂಕ್‌ ಗಳಿಸುತ್ತಿರುವುದು ವಿಶೇಷ. ಈ ಸಲದ ಪಿ.ಯು. ಪರೀಕ್ಷೆಯಲ್ಲೂ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

ಕಲಾ ವಿಭಾಗದಲ್ಲಿ ಶ್ವೇತಾ ಹಾಗೂ ಸಹನಾ 594 ಸಮಾನ ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ
ರ್‍ಯಾಂಕ್‌ ಗಳಿಸಿದ್ದಾರೆ. ಇದೇ ಕಾಲೇಜಿನ ಜಿ. ಮೌನೇಶ್‌ 593 ಅಂಕ ಗಳಿಸಿ ಎರಡನೇ ರ್‍ಯಾಂಕ್‌ ಪಡೆದಿದ್ದಾರೆ. ಇದು ಇಷ್ಟಕ್ಕೆ ಸೀಮಿತವಾಗಿಲ್ಲ. ಕಲಾ ವಿಭಾಗದಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿ ಈ ಕಾಲೇಜಿನ 34 ವಿದ್ಯಾರ್ಥಿಗಳು ರ್‍ಯಾಂಕ್‌ ಗಳಿಸಿರುವುದು ವಿಶೇಷ. ವಿಜ್ಞಾನ ವಿಭಾಗದಲ್ಲಿ ನಿಶಾಂಕ್‌ ಎಂಬ ವಿದ್ಯಾರ್ಥಿ 5ನೇ ರ್‍ಯಾಂಕ್‌ ಗಳಿಸಿದ್ದಾನೆ. ಹೀಗೆ ‘ಇಂದು’ ಕಾಲೇಜು ಈಗ ‘ರ್‍ಯಾಂಕ್‌ ಕಾಲೇಜು’ ಎಂಬ ಹೆಸರಿನಿಂದ ಚಿರಪರಿಚಿತವಾಗಿದೆ.

ಪ್ರತಿ ವರ್ಷ ಇಲ್ಲಿನ ಹೆಚ್ಚಿನ ವಿದ್ಯಾರ್ಥಿಗಳು ರ್‍ಯಾಂಕ್‌ ಗಳಿಸುತ್ತಿರುವುದರಿಂದ ಬೀದರ್‌ನಿಂದ ಚಾಮರಾಜನಗರದಿಂದ ವಿದ್ಯಾರ್ಥಿಗಳು ಆಕರ್ಷಿತರಾಗಿ ಈ ಕಾಲೇಜಿನಲ್ಲಿ ವ್ಯಾಸಂಗಕ್ಕೆ ಸೇರುತ್ತಿದ್ದಾರೆ. 2006–07ನೇ ಇಸ್ವಿಯಲ್ಲಿ ಎಲ್‌.ಕೆ.ಜಿ.ಯಿಂದ ಪದವಿ ತನಕ ಈ ಕಾಲೇಜು ಆರಂಭಗೊಂಡಿತ್ತು. ಅದರಲ್ಲೂ ಪಿ.ಯು.ನಲ್ಲಿ 80ರಿಂದ 100 ವಿದ್ಯಾರ್ಥಿಗಳಿದ್ದರು. ಈಗ 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದು ಓದುತ್ತಿದ್ದಾರೆ. ಎಲ್‌.ಕೆ.ಜಿ.ಯಿಂದ ಪದವಿ ವರೆಗೆ ಒಟ್ಟು 5,000ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. 200 ಜನ ಬೋಧಕ ಸಿಬ್ಬಂದಿಯೇ ಇದ್ದಾರೆ. ಹಾಸ್ಟೆಲ್‌ ವ್ಯವಸ್ಥೆ ಕೂಡ ಇದೆ.

‘ಇಂದಿರಾ ಚಾರಿಟಬಲ್‌ ಅಂಡ್‌ ಎಜ್ಯುಕೇಶನ್‌ ಟ್ರಸ್ಟ್‌ ಹೆಸರಿನಲ್ಲಿ ಕಾಲೇಜು ನಡೆಸಲಾಗುತ್ತಿದೆ. ಇಂದಿರಾ ನನ್ನ ತಂಗಿಯ ಹೆಸರು. ಅವಳು ಅಗ್ನಿ ಅವಘಡದಲ್ಲಿ ಮೃತಪಟ್ಟಿದ್ದಾಳೆ. ಅವಳ ನೆನಪಿನಲ್ಲಿ ‘ಇಂದು’ ಕಾಲೇಜು ನಡೆಸಲಾಗುತ್ತಿದೆ. ಪಿ.ಯು ಕಲಾ ಮತ್ತು ವಾಣಿಜ್ಯ ವಿಭಾಗಕ್ಕೆ ವಾರ್ಷಿಕ ₹20,000, ವಿಜ್ಞಾನ ವಿಭಾಗದವರಿಗೆ ₹30,000 ಶುಲ್ಕ ವಿಧಿಸುತ್ತೇವೆ. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದರೆ ಅಂತಹವರಿಗೆ ರಿಯಾಯಿತಿ ಕೊಟ್ಟು ಪ್ರೋತ್ಸಾಹಿಸುತ್ತೇವೆ’ ಎಂದು ಕಾಲೇಜಿನ ಆಡಳಿತಾಧಿಕಾರಿ ಎಚ್‌.ಎನ್‌. ವೀರಭದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT