ಬಳ್ಳಾರಿ: ರೈತರಿಂದ ಪಡೆಯುವ ಹಾಲಿನ ಖರೀದಿ ದರವನ್ನು ‘ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟ’ ₹1.50ರಷ್ಟು ಕಡಿಮೆ ಮಾಡಿದ್ದು, ರೈತರಿಂದ ಆಕ್ಷೇಪ ವ್ಯಕ್ತವಾಗಿದೆ.
ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ರಾಬಕೊವಿ ‘ಸದ್ಯ ಒಕ್ಕೂಟ ತೀವ್ರ ನಷ್ಟದಲ್ಲಿದೆ. ಇದನ್ನು ಸರಿದೂಗಿಸಲು ರೈತರಿಂದ ಖರೀದಿಸುತ್ತಿರುವ ಹಾಲಿನ ದರ ಇಳಿಸಲಾಗಿದೆ. ಆದರೆ, ಇದು ತಾತ್ಕಾಲಿಕ’ ಎಂದು ಒಕ್ಕೂಟ ಹೇಳಿದೆ.
‘ದೇಶದಲ್ಲಿರುವ ಎಲ್ಲ ಒಕ್ಕೂಟಗಳಲ್ಲೂ ಇದು ಸಾಮಾನ್ಯ ಪ್ರಕ್ರಿಯೆ. ಹಾಲು ಉತ್ಪಾದನೆ ಹೆಚ್ಚಾದಾಗೆಲ್ಲ ಇಂಥ ಸಮಸ್ಯೆ ಎದುರಾಗುತ್ತದೆ. ನಮಗೆ ಹಾಲಿನ ಮಾರಾಟ ದರವನ್ನು ಹೆಚ್ಚಿಸಲು ಅವಕಾಶವಿಲ್ಲ. ಅಂಥ ಸಂದರ್ಭದಲ್ಲಿ ನಷ್ಟ ಉಂಟಾಗುತ್ತದೆ. ದರ ಇಳಿಸದೇ ಹೋಗಿದ್ದಿದ್ದರೆ ನಷ್ಟ ಬೆಳೆಯುತ್ತಾ ಹೋಗುತ್ತಿತ್ತು. ಆಗ ಏಕಾಏಕಿ ₹3–4 ಇಳಿಸಬೇಕಾದ ಪರಿಸ್ಥಿತಿ ಬರುತ್ತಿತ್ತು. ಕೆಲವು ಒಕ್ಕೂಟಗಳಲ್ಲಿ ರೈತರಿಂದ ಖರೀದಿಸುವ ಹಾಲಿನ ದರ ನಮಗಿಂತಲೂ ಕಡಿಮೆ ಇದೆ. ಒಕ್ಕೂಟದಿಂದ ತೆಲಂಗಾಣಕ್ಕೆ ಹಾಲು ಪೂರೈಕೆ ಆರಂಭವಾದರೆ, ನಷ್ಟ ಸರಿದೂಗಿಸಿಕೊಳ್ಳಬಹುದು. ರೈತರಿಗೂ ಲಾಭಾಂಶ ನೀಡಲಾಗುವುದು‘ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪೀರ್ಯ ನಾಯಕ್ ತಿಳಿಸಿದ್ದಾರೆ.