ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಯಲ್ಲಿ ಎಸ್‌ಟಿ ಸಮಾವೇಶ 20ರಂದು

ಬೆಳಗಾವಿಯ ಪೂರ್ವಭಾವಿ ಸಭೆಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಹೇಳಿಕೆ
Last Updated 4 ನವೆಂಬರ್ 2022, 7:08 IST
ಅಕ್ಷರ ಗಾತ್ರ

ಬೆಳಗಾವಿ/ ಚಿಕ್ಕೋಡಿ: ‘ಬಳ್ಳಾರಿಯಲ್ಲಿ ನ.20ರಂದು ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾದಿಂದ ಬೃಹತ್‌ ಸಮಾವೇಶ ಆಯೋಜಿಸಲಾಗಿದೆ. ರಾಜ್ಯದ ಮೂಲೆಮೂಲೆಯಿಂದ ಅಪಾರ ಸಂಖ್ಯೆಯ ಜನ ಇದರಲ್ಲಿ ಪಾಲ್ಗೊಳ್ಳುವರು’ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಳವನ್ನು ಈವರೆಗೆ ಯಾವ ಸರ್ಕಾರವೂ ಮಾಡಿರಲಿಲ್ಲ. 60 ವರ್ಷ ಅಧಿಕಾರ ಅನುಭವಿಸಿದ ಕಾಂಗ್ರೆಸ್‌ ಈ ಜನರನ್ನು ಕಣ್ಣೆತ್ತಿಯೂ ನೋಡಲಿಲ್ಲ. ಆದರೆ, ನಮ್ಮ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ’ ಎಂದರು.

‘ಅಹಿಂದ ಸಮುದಾಯಗಳ ಹೆಸರು ಹೇಳಿಕೊಂಡು ಮುಖ್ಯಮಂತ್ರಿ ಆದವರು ಸಿದ್ದರಾಮಯ್ಯ. ಆದರೆ, ಆ ಸಮುದಾಯಗಳನ್ನು, ಸಮುದಾಯಗಳ ನಾಯಕರನ್ನೂ ತುಳಿದರು. ಕಾಂಗ್ರೆಸ್‌ನಂಥ ದಾರಿ ತಪ್ಪಿದ ಪಕ್ಷಕ್ಕೆ ಸಿದ್ದರಾಮಯ್ಯ ದಾರಿ ತಪ್ಪಿದ ಮಗನಾಗಿ ಬಂದಿದ್ದಾರೆ’ ಎಂದು ಮೂದಲಿಸಿದರು.

‘ತಾಕತ್ತಿದ್ದರೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ತೋರಿಸು ಎಂದು ಸಿದ್ದರಾಮಯ್ಯ ನನಗೆ ಸವಾಲು ಹಾಕಿದ್ದಾರೆ. ಆದರೆ, ಎಲ್ಲಿ ಬೇಕಾದರೂ ಸ್ಪರ್ಧಿಸುವಂತೆ ಜನ ನನಗೆ ಬೆಂಬಲ ನೀಡಿದ್ದಾರೆ. ನನ್ನ ಗೆಲುವು– ಸೋಲು ಆ ಜನರಿಗೆ ಬಿಟ್ಟ ವಿಚಾರ. ಸೋಲಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರೆ ಆಗುತ್ತದೆಯೇ? ಇಷ್ಟಕ್ಕೂ ಮುಖ್ಯಮಂತ್ರಿ ಹುದ್ದೆ ಅನುಭವಿಸಿದ ನಿಮಗೆಸ್ಪರ್ಧಿಸಲು ಒಂದು ಕ್ಷೇತ್ರವೂ ಸಿಗದೇ ಪರದೇಸಿಯಾಗಿ ಅಲೆದಾಡುತ್ತಿದ್ದೀರಿ’ ಎಂದು ಟೀಕಿಸಿದರು.

‘ಒಂದು ಕಾಲದಲ್ಲಿ ನೀವು ದೇವೇಗೌಡ ಅವರ ಬೆನ್ನಿಗೆ ಚೂರಿ ಹಾಕಿದಿರಿ. ನಂತರ ಜಿ.ಪರಮೇಶ್ವರ ಅವರಿಗೆ ಮೋಸ ಮಾಡಿದಿರಿ. ಈಗ ಡಿ.ಕೆ.ಶಿವಕುಮಾರ್‌ ಅವರನ್ನು ಮುಗಿಸಲು ಹೊರಟಿದ್ದೀರಿ. ಜತೆಗಿದ್ದವರನ್ನೆಲ್ಲ ಮುಗಿಸುತ್ತಲೇ ಬಂದ ನೀವು ಪಕ್ಷ ನಿಷ್ಠೆಯ ಮಾತನಾಡಲು ಅರ್ಹರೇ’ ಎಂದೂ ಪ್ರಶ್ನಿಸಿದರು.

‘ಗಾಲಿ ಜನಾರ್ದನ ರೆಡ್ಡಿ ಅವರು ಮತ್ತೆ ಸಕ್ರಿಯ ರಾಜಕೀಯಕ್ಕೆ ಬರಬೇಕೇ ಬೇಡವೇ ಎಂಬುದು ಪಕ್ಷದ ಮುಖಂಡರಿಗೆ ಬಿಟ್ಟ ವಿಚಾರ. ಹಿರಿಯ ನಾಯಕರು ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿದ್ದೇವೆ. ಅವರ ಅನಿಸಿಕೆಗಳನ್ನು ನಮ್ಮ ನಾಯಕರಿಗೆ ಮುಟ್ಟಿಸಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಬೆಳಗಾವಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಮುಖಂಡ ಮಾರುತಿ ಅಷ್ಟಗಿ, ಮುರುಘೇಂದ್ರಗೌಡ ಪಾಟೀಲ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ ನೇರ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT