ಹೊಸಪೇಟೆ (ವಿಜಯನಗರ): ಸಂಡೂರಿನ ಕುಮಾರಸ್ವಾಮಿ ದೇವಸ್ಥಾನಕ್ಕೆ ಸೇರಿದ 180 ಎಕರೆ ಇನಾಂ ಜಮೀನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಮಗ ಸಿದ್ದಾರ್ಥ ಸಿಂಗ್ ಹಾಗೂ ಅವರ ಕುಟುಂಬದವರು ಕಬಳಿಸಿರುವ ಆರೋಪಗಳಿದ್ದು, ಈ ಪ್ರಕರಣದ ತನಿಖೆ ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಅನಂತರ ರಾಷ್ಟ್ರಪತಿ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು. ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ 58 ಹುದ್ದೆಗಳ ನೇಮಕಾತಿಯಲ್ಲಿ ₹15 ಕೋಟಿ ವ್ಯವಹಾರ ನಡೆದಿದೆ. ಬ್ಯಾಂಕ್ ಅಧ್ಯಕ್ಷರಾದ ಸಚಿವ ಆನಂದ್ ಸಿಂಗ್ ಅವರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ. ಆರು ಸಾವಿರ ಜನ ಅರ್ಜಿ ಸಲ್ಲಿಸಿದ್ದರು. ಆದರೆ, ಮೌಖಿಕ ಸಂದರ್ಶನದ ಹೆಸರಿನಲ್ಲಿ ನೇಮಕಾತಿಯ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ತಮಗೆ ಬೇಕಾದವರನ್ನು ಆಯ್ಕೆ ಮಾಡಲು ಹಣಕಾಸಿನ ವ್ಯವಹಾರ ನಡೆದಿವೆ ಎಂಬ ಆರೋಪಗಳಿವೆ. ಇದರ ಬೆನ್ನಲ್ಲೇ ಕುಮಾರಸ್ವಾಮಿ ದೇಗುಲದ ಇನಾಂ ಜಮೀನು ಕಬಳಿಸಿರುವ ಆರೋಪಗಳು ಕೇಳಿ ಬಂದಿವೆ. ಕೂಡಲೇ ಅದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಬಿಡಿಸಿಸಿ ನೇಮಕಾತಿ ಅಕ್ರಮ, ಇನಾಂ ಜಮೀನು ಕಬಳಿಕೆ, ಕಬ್ಬಿಣದ ಅದಿರು ಕಳ್ಳ ಸಾಗಾಣಿಕೆ, ಸಚಿವ ಆನಂದ್ ಸಿಂಗ್ ಅವರು ಸರ್ಕಾರಿ ಜಾಗ ಒತ್ತುವರಿ ಮಾಡಿ ಬಂಗಲೆ ನಿರ್ಮಿಸಿರುವ ಆರೋಪಗಳಿವೆ. ಐಎಸ್‌ಆರ್ ಸಕ್ಕರೆ ಕಾರ್ಖಾನೆ ಮುಚ್ಚಿಸಿದ ಹಿಂದೆ ಸಚಿವರ ಪಾತ್ರ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಸಿಬಿಐನಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಆರ್. ಭಾಸ್ಕರ್ ರೆಡ್ಡಿ, ಮರಡಿ ಜಂಬಯ್ಯ ನಾಯಕ, ವಿ. ಸ್ವಾಮಿ, ಎಂ. ಗೋಪಾಲ್, ಯಲ್ಲಾಲಿಂಗ, ರಮೇಶ ಕುಮಾರ, ಎ. ಕರುಣಾನಿಧಿ ಇತರರು ಪಾಲ್ಗೊಂಡಿದ್ದರು. ಸಿಪಿಎಂ, ಸಿಐಟಿಯು, ದಲಿತ ಹಕ್ಕುಗಳ ಸಮಿತಿ, ಡಿವೈಎಫ್‌ಐ, ದೇವದಾಸಿ ಮಹಿಳಾ ವಿಮೋಚನಾ ಸಂಘ, ಕರ್ನಾಟಕ ಪ್ರಾಂತ ರೈತ ಸಂಘದವರು ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.