ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡ್ಡಿನ ದಾದಾಪುರ: ಹಿಂದೂಗಳಿಂದ ಪ್ರತಿವರ್ಷ ಹಬ್ಬ ಆಚರಣೆ

Last Updated 21 ಸೆಪ್ಟೆಂಬರ್ 2018, 4:22 IST
ಅಕ್ಷರ ಗಾತ್ರ

ಹರಪನಹಳ್ಳಿ: ತಾಲ್ಲೂಕಿನ ಒಡ್ಡಿನ ದಾದಾಪುರ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಹಿಂದೂಗಳೇ ಮುಂದೆ ನಿಂತು ಮೊಹರಂ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ.

ಗ್ರಾಮದಲ್ಲಿ ಹಿಂದೂಗಳನ್ನು ಬಿಟ್ಟರೆ ಬೇರೆ ಯಾವ ಧರ್ಮದವರೂ ಇಲ್ಲಿ ವಾಸವಿಲ್ಲ. ಆದರೂ ಅಲ್ಲಿ ಮೊಹರಂ ಹಬ್ಬದ ಆಚರಣೆ ಪ್ರತಿ ವರ್ಷ ಚಾಚು ತಪ್ಪದೇ ನಡೆದುಕೊಂಡು ಬಂದಿದೆ. 150 ಮನೆ, 1,200 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಒಂದೂ ಮುಸ್ಲಿಂ ಮನೆಗಳಿಲ್ಲ. ಹಿಂದೂಗಳೇ ಮುಂದು ನಿಂತು ಮೊಹರಂ ಆಚರಣೆ ನಡೆಸುತ್ತಿರುವುದು ಗ್ರಾಮಸ್ಥರ ಸೌಹಾರ್ದಕ್ಕೆ ಸಾಕ್ಷಿ ಆಗಿದೆ.

ಕುರುಬ, ಗಂಗಾಮತಸ್ಥ, ವಾಲ್ಮೀಕಿ, ದಲಿತರು ಸೇರಿ ಭೋವಿ, ಲಿಂಗಾಯತ ಸಮಾಜದ ಕೆಲ ಮನೆತನಗಳು ವಾಸವಾಗಿವೆ. ಗ್ರಾಮದ ಅಲ್ಮರಸಿಕೆರೆಗೆ ಹೋಗುವ ರಸ್ತೆಯಲ್ಲಿರುವ ದರ್ಗಾದಲ್ಲಿ ಮೊಹರಂ ಆಚರಣೆಗಳು ನಡೆಯುತ್ತವೆ.

ಇಲ್ಲಿನ ಹಸೇನ್ ಹುಸೇನ್ ದರ್ಗಾದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಬಂಡ್ರಿ, ಬಂಡ್ರಿತಾಂಡಾ, ಬಾಗಳಿ, ಕೂಲಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ದೇವರಿಗೆ ಸಕ್ಕರೆ ಅರ್ಪಿಸುತ್ತಾರೆ. ಗ್ರಾಮಸ್ಥರ ಸಂಬಂಧಿಕರು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ.

‘ಮೊಹರಂ ಹಬ್ಬದಲ್ಲಿ ಬೇರೆ ಊರಿನಿಂದ ಪೂಜೆ ಸಲ್ಲಿಸಲು ಬಾಬಾ ಅವರನ್ನು ಕರೆಯಿಸಲಾಗುತ್ತದೆ. ಈ ಹಿಂದೆ ಮಾಡಲಗೇರೆ ಗ್ರಾಮದಿಂದ ಬಾಬಾ ಅವರು ಬರುತ್ತಿದ್ದರು. ಕಾರಣಾಂತರಗಳಿಂದ ಅವರು ಬರುತ್ತಿಲ್ಲ. ಈ ಬಾರಿ ಹರಪನಹಳ್ಳಿ ಪಟ್ಟಣದಿಂದ ಅಲಿಬಾಷಾ ಎಂಬುವವರು ಬಂದು ಪೂಜೆ ನಡೆಸುತ್ತಿದ್ದಾರೆ’ ಎನ್ನುತ್ತಾರೆ ಗ್ರಾಮಸ್ಥರು.

ಮೊಹರಂ ಹಬ್ಬ ಬಂತು ಎಂದರೆ ಗ್ರಾಮದಲ್ಲಿ ಎಲ್ಲಿಲ್ಲದ ಸಡಗರ. ಸಂಜೆ ಆಗುತ್ತಿದಂತೆ ರಿವಾಯತ್ ಪದಗಳ ಇಂಪು ಹರಡುತ್ತದೆ. ಯುವಕರು ಹಾಡುಗಳಿಗೆ ಹೆಜ್ಜೆ ಹಾಕುತ್ತಾರೆ. ಹಬ್ಬದ ದಿನದಂದು ದೇವರ ಮುಂದೆ ಸಮವಸ್ತ್ರ ಧರಿಸಿ ರಿವಾಯತ್ ಹಾಡುಗಳಿಗೆ ಹೆಜ್ಜೆ ಹಾಕುವುದು ನಡೆದು ಬಂದ ಸಂಪ್ರದಾಯ.

ದೇವರು ಪ್ರತಿಷ್ಠಾಪನೆ ಬಳಿಕ ಹರಿಕೆ ಹೊತ್ತವರು ಹುಲಿ, ಕರಡಿ, ಬೇಡರ ಕಣ್ಣಪ್ಪ ಸೇರಿ ವಿವಿಧ ವೇಷಗಳನ್ನು ಧರಿಸುತ್ತಾರೆ. ಇದು ಮೊಹರಂ ಕೊನೆ ದಿನದವರೆಗೂ ಇರುತ್ತದೆ. ದೇವರು ಹೊಳೆಗೆ ಹೋಗುವ ದಿನದಂದು ಅಗ್ನಿ ಹಾಯುವ ಆಚರಣೆ ನಡೆಯುತ್ತದೆ.

ದೇವರಿಗೆ ಕಾಣಿಕೆ: ಮಕ್ಕಳಾಗದವರು ದೇವರಲ್ಲಿ ಹರಕೆ ಹೊರುತ್ತಾರೆ. ಹರಕೆ ಈಡೇರಿದರೆ ಮುಂದಿನ ವರ್ಷ ತಮ್ಮ ಮಕ್ಕಳ ತೂಕದ ಸಕ್ಕರೆ ಅರ್ಪಿಸುತ್ತಾರೆ. ದೇವರ ಫಲಪ್ರಾಪ್ತಿ ಪಡೆದವರು ಬೆಳ್ಳಿ ಕುದುರೆ, ತೊಟ್ಟಿಲು ಸೇರಿ ಹರಿಕೆಯಂತೆ ವಿವಿಧ ಬೆಳ್ಳಿ ವಸ್ತುಗಳನ್ನು ದೇವರಿಗೆ ಕಾಣಿಕೆ ನೀಡುತ್ತಾರೆ.

ಗ್ರಾಮದ ಪೂರ್ವಜರ ಕಾಲದಿಂದಲೂ ಮೊಹರಂ ಆಚರಿಸುತ್ತಿದ್ದೇವೆ. ಊರಲ್ಲಿ ಒಬ್ಬರೂ ಮುಸ್ಲಿಮರಿಲ್ಲ. ಗ್ರಾಮಸ್ಥರು ಎಲ್ಲರೂ ಸೇರಿ ತಮಗೆ ಇಷ್ಟವಾದಷ್ಷು ದೇಣಿಗೆ ನೀಡುತ್ತಾರೆ

-ಬಣಕಾರ ಅಂಜಿನಪ್ಪ,ಗ್ರಾಮಸ್ಥ

ಕಣ್ಣಿಗೆ ಗಾಯ ಮಾಡಿಕೊಂಡಿದ್ದ ಬಳ್ಳಾರಿಯವರೊಬ್ಬರು ದೇವರಿಗೆ ಬೇಡಿಕೊಂಡ 3 ತಿಂಗಳಲ್ಲಿ ಕಣ್ಣು ಕಾಣುವಂತಾಗಿತ್ತು. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಅಧಿಕಗೊಳ್ಳುತ್ತಿದೆ.

-ಹೊನ್ನಪ್ಪ,ಗ್ರಾಮದ ಹಿರಿಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT