ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರೀ ಮಳೆಗೆ ಬಳ್ಳಾರಿ ಜಿಲ್ಲೆಲಿ ₹ 1,000 ಕೋಟಿ ಮೌಲ್ಯದ ಮೆಣಸಿನಕಾಯಿ ನಷ್ಟ!

Last Updated 8 ಫೆಬ್ರುವರಿ 2022, 20:42 IST
ಅಕ್ಷರ ಗಾತ್ರ

ಬಳ್ಳಾರಿ: ನವೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದ ಆದ ಮೆಣಸಿನಕಾಯಿ ಬೆಳೆಯ ನಷ್ಟದ ಒಟ್ಟು ಮೌಲ್ಯ ₹ 1,000 ಕೋಟಿಗೂ ಅಧಿಕ. ಬೆಳೆ ಕಳೆದುಕೊಂಡ ರೈತರಿಗೆ ವಿತರಿಸಿದ ‍ಪರಿಹಾರದ ಮೊತ್ತ ಕೇವಲ ₹ 36 ಕೋಟಿ!

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಲ ಮಾಡಿ ಬೆಳೆದಿದ್ದ ಮೆಣಸಿನಕಾಯಿ ಮಳೆಗೆ ಆಹುತಿಯಾಗಿದ್ದರಿಂದ ಹತಾಶರಾದ ಅರ್ಧ ಡಜನ್‌ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನುಳಿದವರು ಸರ್ಕಾರದ ನೆರವು ಸಿಗಬಹುದೆಂದು ಕಾಯುತ್ತಿದ್ದಾರೆ.

ಅವಿಭಜಿತ ಜಿಲ್ಲೆಯಲ್ಲಿ ಜಮೀನು ಗುತ್ತಿಗೆ ಹಿಡಿದು ಮೆಣಸಿನಕಾಯಿ ಬೆಳೆದವರೇ ಹೆಚ್ಚು. ಪ್ರತಿ ಎಕರೆ ಜಮೀನಿಗೆ ಗುತ್ತಿಗೆ ಹಣವೇ ಸರಾಸರಿ ₹ 30 ಸಾವಿರ. ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ, ಕೂಲಿ ವೆಚ್ಚ ಸೇರಿದರೆ ಎಕರೆಗೆ ತಗುಲಿರುವ ಒಟ್ಟು ವೆಚ್ಚ ₹ 1.25 ಲ‌ಕ್ಷ. ಸರ್ಕಾರ ಕೊಟ್ಟಿರುವ ಪರಿಹಾರ ಹೆಚ್ಚೆಂದರೆ ಪ್ರತಿ ಹೆಕ್ಟೇರ್‌ಗೆ (ಎರಡೂವರೆ ಎಕರೆ) ₹ 13,500. ಗರಿಷ್ಠ ಪರಿಹಾರದ ಮಿತಿ ಎರಡು ಹೆಕ್ಟೇರ್‌ (ಐದು ಎಕರೆ). ಒಂದೇ ಸರ್ವೆ ನಂಬರ್‌ನಲ್ಲಿ ನಾಲ್ಕೈದು ಜನ ರೈತರ ಹೆಸರಿದ್ದರೂ ಪರಿಹಾರ ಸಿಗುವುದು ಒಬ್ಬರಿಗೆ ಮಾತ್ರ.

ಬೆಳೆ ನಷ್ಟ ಅನುಭವಿಸಿರುವ ಇನ್ನೂ 3000 ರೈತರಿಗೆ (ತೋಟಗಾರಿಕೆ, ಕೃಷಿ ಬೆಳೆ ಸೇರಿ) ಪರಿಹಾರ ಸಿಕ್ಕಿಲ್ಲ. ಆಧಾರ್‌ ಸಂಖ್ಯೆ ಮತ್ತು ಹೆಸರುಗಳ ಗೊಂದಲದಿಂದಾಗಿ ಬ್ಯಾಂಕ್‌ ಖಾತೆಗಳಿಗೆ ಪರಿಹಾರದ ಹಣ ಜಮೆ ಆಗಿಲ್ಲ. ಪ್ರತಿ ರೈತರಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ.

ಬಳ್ಳಾರಿಯಲ್ಲಿ 40 ಸಾವಿರ ಹೆಕ್ಟೇರ್‌ ಮತ್ತು ವಿಜಯನಗರದಲ್ಲಿ 26 ಸಾವಿರ ಹೆಕ್ಟೇರ್‌ ಸೇರಿದಂತೆ ಒಟ್ಟು 66 ಸಾವಿರ ಹೆಕ್ಟೇರ್‌ನಲ್ಲಿ ಬ್ಯಾಡಗಿ ಮತ್ತು ಗುಂಟೂರು ಮೆಣಸಿನಕಾಯಿ ಬೆಳೆಯಲಾಗಿತ್ತು. ಸರಿಯಾಗಿ ಬೆಳೆ ಬಂದಿದ್ದರೆ 2.5 ಲಕ್ಷ ಟನ್‌ ಮೆಣಸಿನಕಾಯಿ ಬರಬೇಕಿತ್ತು. ಹಿಂದಿನ ವರ್ಷ 34 ಸಾವಿರ ಹೆಕ್ಟೇರ್‌ನಲ್ಲಿ 1.8 ಲಕ್ಷ ಟನ್‌ ಮೆಣಸಿನಕಾಯಿ ಬೆಳೆಯಲಾಗಿತ್ತು.

’ಕಳೆದ ವರ್ಷ ಬೆಳೆದಿರುವ ಮೆಣಸಿನಕಾಯಿಗೆ ಉತ್ತಮ ಬೆಲೆ ಬರಬಹುದೆಂಬ ನಿರೀಕ್ಷೆಯಲ್ಲಿ ರೈತರು ಇನ್ನೂ ಶೈತ್ಯಾಗಾರಗಳಲ್ಲಿ ಇಟ್ಟಿದ್ದಾರೆ. ನಮ್ಮಲ್ಲಿರುವ ಸುಮಾರು 25 ಶೈತ್ಯಾಗಾರಗಳು ಮೆಣಸಿನ ಚೀಲಗಳಿಂದ ತುಂಬಿವೆ‘ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಸ್‌.ಡಿ. ಭೋಗಿ ಹೇಳಿದರು.

ಮೆಣಸಿನಕಾಯಿ, ದೇಶಕ್ಕೆ ಡಾಲರ್‌ ತಂದುಕೊಡುವ ಬೆಳೆ. ಕಾಯಿ ಸಂಸ್ಕರಿಸಿ ಪುಡಿ ಮಾಡಿ, ಹೊರ ದೇಶಗಳಿಗೆ ಕಳಿಸಲಾಗುತ್ತದೆ. ಬ್ಯಾಡಗಿ ಮೆಣಸಿನಕಾಯಿಯ ಬೆಲೆ ಕ್ವಿಂಟಲ್‌ಗೆ ₹ 25 ಸಾವಿರದವರೆಗಿದೆ. ಗುಂಟೂರು ಮೆಣಸಿನಕಾಯಿ ಕ್ವಿಂಟಲ್‌ಗೆ ₹ 12 ಸಾವಿರದವರೆಗಿದೆ. ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳ ಅಂದಾಜಿನ ಪ್ರಕಾರಮೆಣಸಿನಕಾಯಿ ಬೆಳೆಯಿಂದ ಆಗಿರುವ ಒಟ್ಟು ನಷ್ಟ ₹ 1,000 ಕೋಟಿಗೂ ಅಧಿಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT