ಕುರುಗೋಡು: ತಾಲ್ಲೂಕಿನಲ್ಲಿ ಬಿಸಿಲಿನ ಪ್ರಖರತೆ ತೀವ್ರಗೊಂಡಿದ್ದು, ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ಬಿಂದಿಗೆಗಳನ್ನು ಹಿಡಿದು ಗಲ್ಲಿ ಗಲ್ಲಿ ಅಲೆಯುವಂತಾಗಿದೆ. ನೀರಿಗಾಗಿ ಆಡಳಿತ ವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸುವಂತಾಗಿದೆ.
ಕೆಲವು ಗ್ರಾಮಗಳಲ್ಲಿ ವಾರದಲ್ಲಿ ಎರಡು ಬಾರಿ ಮಾತ್ರ ನೀರು ಪೂರೈಕೆಯಾಗುತ್ತಿದೆ. ಜನರು ದುಪ್ಪಟ್ಟು ಹಣ ನೀಡಿ, ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ನೀರು ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಡಿಯುವ ನೀರಿನ ಕೆರೆಗಳು ತುಂಬಿಲ್ಲ. ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ತುಂಗಭದ್ರಾ ಮಂಡಳಿ ಎಚ್.ಎಲ್.ಸಿ. ಕಾಲುವೆಗೆ ನವೆಂಬರ್ 10, ಎಲ್‍ಎಲ್‍ಸಿ ಕಾಲುವೆಗೆ ನವೆಂಬರ್ 30ಕ್ಕೆ ನೀರು ಸ್ಥಗಿತಗೊಳಿಸುವ ಸೂಚನೆ ನೀಡಿದೆ. ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಬಿಗಿಡಾಯಿಸಬಹುದು ಎಂಬ ಆತಂಕ, ದುಗುಡ ಜನರನ್ನು ಕಾಡತೊಡಗಿದೆ.
22 ಗ್ರಾಮಗಳಲ್ಲಿ ಮೊದಲ ಹಂತದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ಅಳವಡಿಕೆ ಯೋಜನೆ ಜಾರಿಯಾಗಿದೆ. 11 ಗ್ರಾಮಗಳಲ್ಲಿ ನಲ್ಲಿ ಅಳವಡಿಕೆ ಮತ್ತು ಪೈಪ್‍ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಾಹಿತಿ ನೀಡುತ್ತದೆ. ಯೋಜನೆ ಜಾರಿಯಾಗಿ ವರ್ಷ ಉರುಳಿದರೂ ಜನರ ನೀರಿನ ದಾಹ ತಣಿಸುವಲ್ಲಿ ವಿಫಲವಾಗಿದೆ.
‘ಕಿರು ನೀರು ಘಟಕಗಳ ಸೂಕ್ತ ನಿರ್ವಹಣೆ ಇಲ್ಲದೆ ನೀರು ನಿರಂತರವಾಗಿ ಹರಿದು ಚರಂಡಿ ಸೇರುತ್ತಿದೆ. ಗ್ರಾಮ ಪಂಚಾಯ್ತಿ ನೀರಿನ ಮಹತ್ವ ಮತ್ತು ಮಿತ ಬಳಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸದಿರುವುದು ಇದಕ್ಕೆ ಕಾರಣ’ ಎಂದು ಗೆಣಿಕೆಹಾಳು ಗ್ರಾಮದ ಯು.ಬಿ. ಶ್ರೀನಿವಾಸ ಬೇಸರ ವ್ಯಕ್ತಪಡಿಸಿದರು.
ಕುರುಗೋಡು ಪಟ್ಟಣದಲ್ಲಿ 23 ವಾರ್ಡ್‍ಗಳಿವೆ. ಬೆರಳೆಣಿಕೆಯಷ್ಟು ವಾರ್ಡ್‍ಗಳಿಗೆ ಮಾತ್ರ ಕೆರೆಯ ನೀರು ಪೂರೈಕೆಯಾಗುತ್ತಿದೆ. ಮೋಟರ್ ಕೆಟ್ಟ ಪರಿಣಾಮ ಐದು ದಿನಗಳಿಂದ ಪಟ್ಟಣದಲ್ಲಿ ನೀರು ಸರಬರಾಜು ಸ್ಥಗಿತಗೊಂಡಿದೆ. ವಿವಿಧ ವಾರ್ಡ್‍ಗಳ ಮಹಿಳೆಯರು ಪುರಸಭೆ ಕಚೇರಿ ಎದುರು ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದರು.
ಪಟ್ಟಣದ 14 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 9 ಮಾತ್ರ ಕಾರ್ಯನಿರ್ವಹಿಸುತ್ತಿವೆ. ವಿವಿಧ ಗ್ರಾಮಗಳಲ್ಲಿ ಒಟ್ಟು 53 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಸೂಕ್ತ ನಿರ್ವಹಣೆ ಇಲ್ಲದೆ 15ಕ್ಕೂ ಅಧಿಕ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಹಲವರು ಕೊಳವೆಬಾವಿಯ ಫ್ಲೋರೈಡ್‌ಯುಕ್ತ ನೀರನ್ನೇ ಅವಲಂಬಿಸುವ ಅನಿವಾರ್ಯತೆ ತಲೆದೋರಿದೆ.
ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಲಾಗುವುದು. ದುರಸ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರಿಪಡಿಸಲಾಗುವುದುವಿನಯ್, ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.