ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಗ್ರಹ ಉಡಾವಣೆ ನೋಡಿದ ವಿದ್ಯಾರ್ಥಿನಿಯರು

ಇಸ್ರೊ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಫೂಲ್‌ ಬನ್‌ ಏಕಮಾತ್ರ ಶಾಲೆ ಆಯ್ಕೆ
Last Updated 16 ಫೆಬ್ರುವರಿ 2023, 15:14 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಉಪಗ್ರಹ ಉಡಾವಣೆ ವೀಕ್ಷಣೆಗೆ ಆಯ್ಕೆ ಮಾಡಿದ್ದ ದೇಶದ 750 ವಿದ್ಯಾರ್ಥಿಗಳಲ್ಲಿ ನಗರದ ಫೂಲ್‌ ಬನ್‌ ಉರ್ದು ಶಾಲೆಯ ಎಂಟು ವಿದ್ಯಾರ್ಥಿನಿಯರು ಕೂಡ ಆಯ್ಕೆಯಾಗಿದ್ದರು. ಇದು ಕರ್ನಾಟಕದಿಂದ ಆಯ್ಕೆಗೊಂಡಿದ್ದ ಏಕಮಾತ್ರ ಶಾಲೆ ಎನ್ನುವುದು ವಿಶೇಷ.

ಫೆ. 10ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಮಿಷನ್‌ ಆಜಾದಿ ಸ್ಯಾಟ್‌–2 ಉಪಗ್ರಹ ಉಡಾವಣೆ ಮಾಡಲಾಗಿತ್ತು. ಶಾಲೆಯ ಎಂಟು ಜನ ವಿದ್ಯಾರ್ಥಿಗಳು ಹಾಗೂ ಮೂವರು ಸಿಬ್ಬಂದಿ ಆ ಐತಿಹಾಸಿಕ ಘಟನೆಗೆ ಸಾಕ್ಷಿಯಾದರು.

ಎಂಟನೇ ತರಗತಿಯ ನಜ್ಮೀನ್‌ ಕೌಸರ್‌, ನಿಶಾತ್‌ ಅಂಜುಂ, ಸಲೀಹಾ, ಒಂಬತ್ತನೇ ತರಗತಿಯ ಬಿ.ಬಿ. ಆಯೇಷಾ, ಆಶ್ಫಿಯಾ ಎನ್‌., ಹತ್ತನೇ ತರಗತಿಯ ಶಾಹೀನ್‌ ನಿಶಾ, ಫಿರ್ದೋಸ್‌ ಹಾಗೂ ಶಿರೀನ್‌ ಸೇರಿದ್ದಾರೆ. ಪ್ರಾಂಶುಪಾಲರಾದ ಫಹಮೀದಾ ಬಾನು, ವಿಜ್ಞಾನ ಶಿಕ್ಷಕಿ ಶಬಾಹತ್‌ ಹಾಗೂ ಅಟಲ್‌ ಟಿಂಕ್‌ರಿಂಗ್‌ ಲ್ಯಾಬ್‌ ಮುಖ್ಯಸ್ಥ ಸೈಯದ್‌ ಸುಲೇಮಾನ್‌ ತಂಡದಲ್ಲಿದ್ದವರು.

ಫೂಲ್‌ಬನ್‌ ಶಾಲೆಯಲ್ಲಿ ಕೇಂದ್ರ ಸರ್ಕಾರದ ‘ಅಟಲ್‌ ಟಿಂಕ್‌ರಿಂಗ್‌’ ಲ್ಯಾಬ್‌ ಇದೆ. ಈ ಪ್ರಯೋಗಾಲಯದಲ್ಲಿ ತಂತ್ರಜ್ಞಾನದ ಬಗ್ಗೆ ಜ್ಞಾನ ನೀಡಲಾಗುತ್ತದೆ. ‘ಸ್ಪೇಸ್‌ ಕಿಡ್‌ ಇಂಡಿಯಾ’ ಸಂಸ್ಥೆ ಈ ಶಾಲೆಯನ್ನು ಆಯ್ಕೆ ಮಾಡಿತ್ತು. ‘ವಿಮೆನ್ಸ್‌ ಕ್ಯಾನ್‌ ಡು ಎನಿಥಿಂಗ್‌’ ಪರಿಕಲ್ಪನೆಯಡಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

‘ಅಟಲ್‌ ಲ್ಯಾಬ್‌ ಇದ್ದವರಿಗೆ ಸ್ಪೇಸ್‌ ಕಿಡ್‌ ಇಂಡಿಯಾ ಸಂಸ್ಥೆ ಆನ್‌ಲೈನ್‌ ಮೂಲಕ ಉಪಗ್ರಹ ಉಡಾವಣೆಯ ಮೂಲ ಪ್ರೋಗ್ರಾಮಿಂಗ್‌ ರಚನೆ ಕುರಿತು ತರಬೇತಿ ನೀಡಿತ್ತು. ‌ಹೋದ ವರ್ಷವೂ ನಮ್ಮ ಶಾಲೆ ಆಯ್ಕೆಯಾಗಿತ್ತು. ಆದರೆ, ಕಾರಣಾಂತರಗಳಿಂದ ಭಾಗವಹಿಸಲು ಸಾಧ್ಯವಾಗಿರಲಿಲ್ಲ’ ಎಂದು ಅಟಲ್‌ ಟಿಂಕ್‌ರಿಂಗ್‌ ಲ್ಯಾಬ್‌ ಮುಖ್ಯಸ್ಥ ಸೈಯದ್‌ ಸುಲೇಮಾನ್‌ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಾನು ಮೊಬೈಲ್‌, ಟಿ.ವಿ.ಯಲ್ಲಿ ಉಪಗ್ರಹ ಉಡಾವಣೆಯನ್ನು ನೋಡಿದ್ದೆ. ಆದರೆ, ಸಾಕ್ಷಾತ್‌ ಅದನ್ನು ಹಾರಿಸುವ ಜಾಗಕ್ಕೆ ಹೋಗಿ ನೋಡಿದ್ದು ಇದೇ ಮೊದಲು. ಇದು ಮರೆಯಲಾರದ ಘಟನೆ’ ಎಂದು ವಿದ್ಯಾರ್ಥಿನಿ ಶಾಹೀನ್‌ ತಮ್ಮ ಅನುಭವ ಹಂಚಿಕೊಂಡರು.

‘ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಬಹಳ ಪ್ರಯೋಜನವಾಗಿದೆ. ರಾಕೆಟ್‌ ಹೇಗೆ ಉಡಾವಣೆ ಮಾಡಬಹುದು ಎಂಬ ಜ್ಞಾನ ಸಿಕ್ಕಿದೆ. ಭವಿಷ್ಯದಲ್ಲಿ ಸ್ಪೇಸ್‌ ಸೈಟಿಂಸ್ಟ್‌ ಆಗಲು ಅನುಕೂಲವಾಗಲಿದೆ. ಇದನ್ನು ಸಾಧ್ಯ ಮಾಡಿಸಿದ ಸರ್ಕಾರ ಮತ್ತು ನಮ್ಮ ಶಾಲೆಗೆ ಋಣಿಯಾಗಿರುವೆ’ ಎಂದು ಇನ್ನೊಬ್ಬ ವಿದ್ಯಾರ್ಥಿನಿ ನಜ್ಮೀನ್‌ ಹೇಳಿದರು.

‘ಖಿದ್ಮತೆ ಉಲ್‌ ಮುಸ್ಲಿಮೀನ್‌ ಸೊಸೈಟಿ ಅಡಿ ನಮ್ಮ ಶಾಲೆ ನಡೆಯುತ್ತಿದೆ. ಉರ್ದು ಸೇರಿದಂತೆ ಒಟ್ಟು ಮೂರು ಶಾಲೆಗಳನ್ನು ನಡೆಸಲಾಗುತ್ತಿದೆ. ಒಟ್ಟು 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸದ್ಯ ಒಂದರಿಂದ ಪಿಯುವರೆಗೆ ವಿದ್ಯಾಭ್ಯಾಸಕ್ಕೆ ಅವಕಾಶ ಇದೆ. ಬರುವ ದಿನಗಳಲ್ಲಿ ಪದವಿ ಕಾಲೇಜು ಆರಂಭಿಸುವ ಯೋಜನೆ ಇದೆ’ ಎಂದು ಶಾಲೆಯ ಅಧ್ಯಕ್ಷ ಸೈಯದ್‌ ನಾಜಿಮುದ್ದೀನ್‌ ಭವಿಷ್ಯದ ಯೋಜನೆ ಬಿಚ್ಚಿಟ್ಟರು.

ಶಾಲೆಯ ಕಾರ್ಯದರ್ಶಿ ಶೇಕ್ಷಾವಲಿ, ಖಜಾಂಚಿ ಮಹಮ್ಮದ್ ಹನೀಫ್‌, ಉಪಾಧ್ಯಕ್ಷ ರಿಯಾಜ್‌ ಅಹಮ್ಮದ್‌, ಸದಸ್ಯರಾದ ಅಬ್ದುಲ್‌ ಹಕ್‌ ಸೇಠ್‌, ಸೈಯದ್‌ ಸಲೀಂ, ಫೆರೋಜ್‌ ಖಾನ್‌, ಆಸಿಫ್‌ ಹುಸೇನ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT