ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ವಿಧಾನಸಭೆ ಚುನಾವಣೆ ವೇಳೆ ರಾಹುಲ್‌ ನೀಡಿದ್ದ ಭರವಸೆಯ ಚರ್ಚೆ ಮುನ್ನೆಲೆಗೆ

ರಾಹುಲ್‌ ಗಾಂಧಿಗೆ ಸಾಮಾಜಿಕ ಮಾಧ್ಯಮಗಳಲ್ಲೂ ಪ್ರಶ್ನೆ
Published 26 ಏಪ್ರಿಲ್ 2024, 7:43 IST
Last Updated 26 ಏಪ್ರಿಲ್ 2024, 7:43 IST
ಅಕ್ಷರ ಗಾತ್ರ

ಬಳ್ಳಾರಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಚುನಾವಣಾ ಪ್ರಚಾರಕ್ಕಾಗಿ ಇಂದು ಬಳ್ಳಾರಿಗೆ ಆಗಮಿಸುತ್ತಿದ್ದಾರೆ. ವರ್ಷದ ಹಿಂದೆ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್‌ ಅವರು ಜಿಲ್ಲೆಯ ಜನರಿಗೆ ನೀಡಿದ್ದ ‘ಜೀನ್ಸ್‌ ಪಾರ್ಕ್‌’ನ ವಾಗ್ದಾನ ಸದ್ಯ ಈ ಸಂದರ್ಭದಲ್ಲಿ ಎಲ್ಲೆಡೆ ಅನುರಣಿಸುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲೂ ಚರ್ಚೆ ಜೋರಾಗಿ ನಡೆಯುತ್ತಿದೆ. 

‘2023ರ ಏಪ್ರಿಲ್‌ನಲ್ಲಿ ಘೋಷಣೆಯಾದ ಜೀನ್ಸ್ ಪಾರ್ಕ್‌ಗೆ ₹5,000 ಕೋಟಿ ನೀಡುವುದಾಗಿ ರಾಹುಲ್‌ ಹೇಳಿದ್ದರು. ಈಗ ಅದಕ್ಕೆ ಅವರು ಉತ್ತರಿಸಬೇಕು. ಈ ಬಾರಿ ಅವರು ಮತ್ತೆ ಏನನ್ನಾದರೂ ಘೋಷಿಸಿದರೆ ನಾವು ನಂಬಬೇಕು ಎಂದು ಅವರು ಹೇಗೆ ನಿರೀಕ್ಷೆ ಮಾಡಲು ಸಾಧ್ಯ’ ಎಂದು ‘ನಮ್ಮ ಬಳ್ಳಾರಿ’ ಎಂಬ ‘ಎಕ್ಸ್‌’ ಖಾತೆಯಲ್ಲಿ ಪ್ರಶ್ನೆ ಕೇಳಲಾಗಿದೆ. 

ಈ ಖಾತೆಯು ಜಿಲ್ಲೆಗೆ ಸಂಬಂಧಿಸಿದ ಬೆಳವಣಿಗೆಗಳು, ಮಾಹಿತಿಯನ್ನು ಹಂಚಿಕೊಳ್ಳುತ್ತದೆ. ಈ ‘ಎಕ್ಸ್‌’ ಖಾತೆಯಲ್ಲಿ ಕೇಳಲಾದ ಪ್ರಶ್ನೆಗೆ ಕೆಲವರು ಸಮರ್ಥನೆ ನೀಡಿದ್ದರೆ, ಕೆಲವರು ಟೀಕಿಸಿದ್ದಾರೆ.

‘ಜೀನ್ಸ್ ಪಾರ್ಕ್ ಮಾಡುವುದು ಸುಲಭದ ಮಾತಲ್ಲ. ಒಂದು ಜೀನ್ಸ್ ಪ್ಯಾಂಟ್‌ ಸಿದ್ಧಪಡಿಸಲು ಲೀಟರ್ ಗಟ್ಟಲೆ ನೀರು ಬೇಕು. ನಾಯಕರು ಕೇವಲ ಘೋಷಣೆಗಳನ್ನು ಮಾಡುತ್ತಾರೆ. ಆದರೆ, ನಂತರದ ದಿನಗಳಲ್ಲಿ ಭೂ ಸ್ವಾಧೀನ, ಡಿಪಿಆರ್, ಟೆಂಡರ್ ಎಂದು ಸುಮ್ಮನೆ ಕಾಲಹರಣ ಮಾಡಲಾಗುತ್ತದೆ. ಇನ್ನೂ ನಾಲ್ಕು ವರ್ಷ ಕಳೆದರೂ ಜೀನ್ಸ್‌ ಪಾರ್ಕ್‌ ಆಗದು’ ಎಂದು ನವೀನ್‌ ವಿ.ಬಿ. ಎಂಬುವವರು ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. 

ಜೀನ್ಸ್‌ ಪಾರ್ಕ್‌ ಎಲ್ಲಿ ಎಂದು ಕೇಳುವವರಿಗೆ ಕೆಲವರು ತಿರುಗೇಟನ್ನೂ ನೀಡಿದ್ದಾರೆ. 

‘ವಿಮಾನ ನಿಲ್ದಾಣ, ಸ್ಟೇಡಿಯಂ ಕಟ್ಟಿಸುವುದಾಗಿ ಬಿಜೆಪಿವರು ವಾಗ್ದಾನ ನೀಡಿದ್ದರು. 5 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಅವು ಈಡೇರಲಿಲ್ಲ. ಇದನ್ನು ಪ್ರಶ್ನೆ ಮಾಡುವ ಧೈರ್ಯ ಮಾಡುವಿರಾ’ ಎಂದು ಉಮೇಶ್‌ ಎಂಬುವವರು ಪ್ರಶ್ನೆ ಮಾಡಿದ್ದಾರೆ. 

ಜಿಲ್ಲೆಗೆ ಕಾಂಗ್ರೆಸ್‌ ನೀಡಿದ್ದ ವಾಗ್ದಾನಗಳ ಬಗ್ಗೆ ಉತ್ತರಿಸಬೇಕು. ಬಿಜೆಪಿಯಿಂತೆಯೇ ಹುಸಿ ಭರವಸೆಗಳನ್ನು ನೀಡಬಾರದು ಎಂದು ಕೆಲ ಮಂದಿ ಅಭಿಪ್ರಾಯಪಟ್ಟಿದ್ಧಾರೆ. 

‘ಈಸರ್ತಿ ಬಳ್ಳಾರಿನಲ್ಲಿ ನೀರೇ ಇಲ್ಲದೆ ಎಷ್ಟೋ ಜೀನ್ಸ್ ಫ್ಯಾಕ್ಟರಿ ಮುಚ್ಚೋಗಿದ್ದಾವೆ!’ ಎಂದು ತುಷಾರ್‌ ಶೆಟ್ಟಿ ಎಂಬುವವರು ಹೇಳಿದ್ದಾರೆ.  ಬಳ್ಳಾರಿ ಹೊರ ವಲಯದ ಮುಂಡ್ರಿಗಿ ಜೀನ್ಸ್‌ ಅಪೆರಲ್‌ ಪಾರ್ಕ್‌ನಲ್ಲಿ 61 ಡೈಯಿಂಗ್‌ ಘಟಕಗಳಿದ್ದು, ನೀರಿನ ಸಮಸ್ಯೆಯಿಂದಾಗಿ 15ಕ್ಕೂ ಹೆಚ್ಚು ಘಟಕಗಳು ಸ್ಥಗಿತಗೊಂಡಿವೆ.

ವಿಧಾನಸೌಧದಲ್ಲಿ ಧ್ವನಿ ಎತ್ತಲಿಲ್ಲ: ‘ಬಳ್ಳಾರಿ ಜನತೆ ಈಗಲಾದ್ರೂ ಎಚ್ಚೆತ್ತುಕೊಳ್ಳಿ. ಒಂದು ವರ್ಷ ಆಗಿದೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು. ಬಳ್ಳಾರಿಗೆ ಯಾವುದೇ ಅಭಿವೃದ್ಧಿ ಯೋಜನೆ ಇಲ್ಲ. ಜೀನ್ಸ್‌ ಪಾರ್ಕ್‌ ಅಂತ ಜನರಿಗೆ ಹೇಳಿ ಯಾಮಾರಿಸಲಾಯಿತು. ಆದರೆ, ಬಳ್ಳಾರಿಯ ಯಾವ ಶಾಸಕನೂ ವಿಧಾನಸೌಧ‌ದಲ್ಲಿ ಇದರ ಬಗ್ಗೆ ಧ್ವನಿ ಎತ್ತಿಲಿಲ್ಲ. ನಮ್ಮ ಸಚಿವ ನಾಗೇಂದ್ರ ಅವರೂ ಇದರ ಬಗ್ಗೆ ಮಾತನಾಡಲೇ ಇಲ್ಲ’ ಎಂದು ಬಸವರಾಜು ಎಂಬುವವರು ಅಸಮಾಧಾನ ವ್ಯಕ್ತಪಡಿಸಿದ್ಧಾರೆ. 

ಬಜೆಟ್‌ನಲ್ಲಿ ಪ್ರಸ್ತಾಪ: ಬಳ್ಳಾರಿಯಲ್ಲಿ ಅಸಂಘಟಿತವಾಗಿರುವ ಜೀನ್ಸ್ ಉದ್ದಿಮೆಗಳನ್ನು ಸಂಘಟಿಸಿ, ವಿಶ್ವದರ್ಜೆಗೆ ಉನ್ನತೀಕರಿಸಲು ಮೂಲ ಸೌಕರ್ಯಗಳು ಒಳಗೊಂಡಂತೆ ಜೀನ್ಸ್ ಅಪೆರಲ್‌ ಪಾರ್ಕ್ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರ ಅಭಿವೃದ್ಧಿ ಮಾಡಲಾಗುವುದು ಎಂದು ಇತ್ತೀಚಿನ ರಾಜ್ಯ ಬಜೆಟ್‌ನಲ್ಲಿ ಹೇಳಲಾಗಿದೆಯಾದರೂ, ಅದಕ್ಕೆ ಎಷ್ಟು ಅನುದಾನ ಕೊಡಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಿರಲೇ ಇಲ್ಲ.

ರಾಹುಲ್‌ ಗಾಂಧಿ 
ರಾಹುಲ್‌ ಗಾಂಧಿ 
‘ನಮ್ಮ ಬಳ್ಳಾರಿ’ ಎಕ್ಸ್‌ ಖಾತೆಯ ಪೋಸ್ಟ್‌ 
‘ನಮ್ಮ ಬಳ್ಳಾರಿ’ ಎಕ್ಸ್‌ ಖಾತೆಯ ಪೋಸ್ಟ್‌ 
ರಾಹುಲ್‌ ಹೇಳಿದ್ದೇನು?
ವಿಧಾನಸಭಾ ಚುನಾವಣಾ ಪ್ರಚಾರಕ್ಕೆಂದು 2023ರಲ್ಲಿ ಬಳ್ಳಾರಿಗೆ ಬಂದಿದ್ದ ರಾಹುಲ್‌ ಗಾಂಧಿ ‘ಇದು ನನ್ನ ವೈಯಕ್ತಿಕ ವಾಗ್ದಾನ. ಬಳ್ಳಾರಿಯನ್ನು ‘ಭಾರತದ ಜೀನ್ಸ್‌ ರಾಜಧಾನಿ’ ಮಾಡಲಿದ್ದೇವೆ. ಬಳ್ಳಾರಿಯಲ್ಲಿ ಜೀನ್ಸ್‌ ಪಾರ್ಕ್‌ ಮಾಡುತ್ತೇವೆ. ಜಗತ್ತಿನಲ್ಲಿ ದೊರೆಯುವ ಯಾವುದೇ ಜೀನ್ಸ್‌ ಪ್ಯಾಂಟ್‌ಗಳ ಮೇಲೆ ‘ಮೇಡ್‌ ಇನ್‌ ಬಳ್ಳಾರಿ’ ಎಂದು ಬರೆದಿರಬೇಕು... ಹಾಗೆ ಮಾಡಲಿದ್ದೇವೆ. ಸರ್ಕಾರ ಬಂದ ಕೂಡಲೇ ನಮ್ಮ ಮುಖ್ಯಮಂತ್ರಿಗಳಿಗೆ ನಾನೇ ಸ್ವತಃ ಈ ವಿಚಾರವನ್ನು ತಿಳಿಸಿ ಮಾಡಿಸುತ್ತೇನೆ’ ಎಂದು ಹೇಳಿದ್ದರು.
ಸಚಿವರು ಏನು ಹೇಳ್ತಾರೆ?
ಜೀನ್ಸ್‌ ಪಾರ್ಕ್‌ಗೆ ಸಂಬಂಧಿಸಿದಂತೆ ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳು ಸುದ್ದಿಗೋಷ್ಠಿಯೊಂದರಲ್ಲಿ ಸಚಿವ ಬಿ.ನಾಗೇಂದ್ರ ಅವರನ್ನು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ನಾಗೇಂದ್ರ '₹5000 ಕೋಟಿ ಮೊತ್ತದಲ್ಲಿ ಜೀನ್ಸ್‌ ಪಾರ್ಕ್‌ ಅಭಿವೃದ್ದಿ ಮಾಡಲಾಗುವುದು. ಅದಕ್ಕಾಗಿ ಡಿಪಿಆರ್‌ ಸಿದ್ಧವಾಗುತ್ತಿದೆ. ‘ಸ್ಪೆಷಲ್‌ ಪರ್ಪಸ್‌ ವೆಹಿಕಲ್‌’ ಮಾಡಿ ಇಂಥ ಯೋಜನೆಗಳನ್ನು ರೂಪಿಸಬೇಕು. ಆದರೆ ಈ ಚುನಾವಣೆ ಎದುರಾಗಿ ಕೆಲಸ ನನೆಗುದಿಗೆ ಬಿದ್ದಿದೆ. ಕಾಂಗ್ರೆಸ್‌ ಸರ್ಕಾರ ಜೀನ್ಸ್ ಪಾರ್ಕ್‌ ಖಂಡಿತ ಮಾಡಲಿದೆ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT